ಶಿವಮೊಗ್ಗ: ನಗರದ ರಾಗಿಗುಡ್ಡ ಸಮೀಪ ತುಂಗಾ ನಾಲೆಯಲ್ಲಿ ಈಜಲು ಹೋಗಿ ಮುಳುಗಿತ್ತದ್ದ ಓರ್ವ ಬಾಲಕನನ್ನು ರಕ್ಷಿಸಿದ ವಿದ್ಯಾರ್ಥಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದೊರಕಿದೆ ಎಂದು ಬಿಜೆಪಿ ಮುಖಂಡ ಬಳ್ಳೇಕೆರೆ ಸಂತೋಷ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ, ಕೃಷ್ಣಾ ನಾಯಕ್ ತಕ್ಷಣವೇ ನೀರಿಗೆ ಹಾರಿ ಓರ್ವನನ್ನು ರಕ್ಷಿಸಿ, ಮತ್ತೋರ್ವನನ್ನು ರಕ್ಷಿಸುವಲ್ಲಿ ವಿಫಲನಾದ ಎಂದರು.
ಕೃಷ್ಣಾನಾಯಕ್ ದುರ್ಗಿಗುಡಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಈತ ತುಂಗಾ ನಾಲೆಯ ಏರಿಯ ಮೇಲೆ ಸೈಕಲ್‌ನಲ್ಲಿ ಬರುತ್ತಿರುವಾಗ ನಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮುಳುಗುತ್ತಾ, ರಕ್ಷಣೆಗಾಗಿ ಕೂಗುತ್ತಿರುವ ದೃಶ್ಯವನ್ನು ಗಮನಿಸಿ, ಕೂಡಲೇ ನೀರಿಗೆ ಹಾರಿ ಅವರಲ್ಲಿ ಓರ್ವನನ್ನು ರಕ್ಷಿಸುವಲ್ಲಿ ಯಶಸ್ವಿಯಾದ. ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿದ ಕೃಷ್ಣಾನಾಯಕ್, ನಗರದ ಅವರ ಅಕ್ಕ, ಭಾವನ ಮನೆಯಾದ ಮಾಲತೀ ಬಾಯಿ ಹಾಗೂ ಮಾಲತೇಶ್ ನಾಯಕ್ ಅವರ ಮನೆಯಲ್ಲಿ ಇದ್ದುಕೊಂಡು ಶಿಕ್ಷಣ ಪಡೆಯುತ್ತಿದ್ದಾನೆ. ದೇವಾನಾಯಕ್ ಹಾಗೂ ವೀಣಾಬಾಯಿ ಪುತ್ರನಾಗಿರುವ ಈತನ ಶಿಕ್ಷಣಕ್ಕೆ ನಗರದ ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಲತೇಶ್ ನಾಯಕ್, ಮಾಲಾಬಾಯಿ ಮತ್ತಿತರರು ಇದ್ದರು.
ದೆಹಲಿಯಲ್ಲಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದ್ದು, ಈ ಪ್ರಶಸ್ತಿಯು 20 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತರೆಲ್ಲರಿಗೂ ಕೂಡ ದೆಹಲಿ ಹಾಗೂ ದೆಹಲಿ ಸುತ್ತಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯ ಮಾಡಿಸಿದರು. ಈ ಪ್ರಶಸ್ತಿಯಿಂದ ನನಗೆ ಅತ್ಯಂತ ಸಂತೋಷವಾಗಿದೆ.
• ಕೃಷ್ಣಾನಾಯಕ್