ಹೊಸಪೇಟೆ: ನವರಸಗಳಿಂದ ಕೂಡಿರುವ ಪಂಪ ಭಾರತ, ರನ್ನನ ಗದಾಯುದ್ಧ, ಆದಿಪುರಾಣ, ಲಕ್ಷ್ಮೀಶನ ಜೈಮಿನಿ ಭಾರತ ಹಳೆಗನ್ನಡದ ಕಾವ್ಯಗಳು. ಪ್ರತಿಯೊಬ್ಬರು ಓದಿ, ಮಾತನಾಡುವಷ್ಟು ಸರಳವಾಗಿವೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಮಲ್ಲೇಪುರಂ ಜಿ.ವೆಂಕಟೇಶ್ ತಿಳಿಸಿದರು.
ನಗರದ ಶಂಕರ್ ಆನಂದ್‌ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ವಿಭಾಗ ಮತ್ತು ಕಸಾಪ ತಾಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಹಳೆಗನ್ನಡ ಕಾವ್ಯ ರಸಗ್ರಹಣ, ಅನುಸಂಧಾನ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಗನ್ನಡವೆನ್ನುವುದು ನಾವು, ನೀವೆಲ್ಲರೂ ಮಾತನಾಡಿದಷ್ಟು ಸರಳವಾಗಿದೆ. ಹಳೆಗನ್ನಡದ ಬಗ್ಗೆ 8ನೇ ಶತಮಾನದಲ್ಲಿ ಟೀಕುಗಳನ್ನು ಬರೆಯುವ ಸಂಪ್ರದಾಯ ನಡೆಯತ್ತಿದ್ದು, ನಂತರದಲ್ಲಿ ದೀಪಿಕೆಗಳು, ಸರಳ ಭಾರತವಾಗಿ ರೂಪುಗೊಂಡಿವೆ. ಹಳಗನ್ನಡದ ಬಗ್ಗೆ ಹೆದರಬೇಕಿಲ್ಲ. ಅದೊಂದು ಸರಳವಾಗಿದ್ದು, ಕಬ್ಬಿಣದ ಕಡಲೆ ಎನ್ನುವುದು ಕೆಲವರ ಮಾನಸಿಕ ರೋಗವಾಗಿದೆ. ಹಳೆಗನ್ನಡ ಕಾವ್ಯಗಳು ಇನ್ನಷ್ಟು ಅನುಸಂಧಾನವಾಗಬೇಕಿದೆ ಎಂದರು.
ಮೂಲ ಕಾವ್ಯಗಳೆಲ್ಲ ಶೃಂಗಾರದಿಂದ ಆರಂಭವಾಗಿ ಶಾಂತತೆಯಿಂದ ಮುಕ್ತಾಯವಾಗುತ್ತವೆ. ಲಕ್ಷ್ಮೀಶನ ಜೈಮಿನಿ ಭಾರತ, ಕುವೆಂಪು ಅವರ ಸಾಹಿತ್ಯದ ಮೇಲೆ ಅಗಾಧ ಪ್ರಭಾವ ಬೀರಿದೆ. ಕಾಲ ಕಾಲಕ್ಕೆ ಅನೇಕ ವಿದ್ವಾಂಸರು ಸರಳವಾಗಿ ಹಳೆಗನ್ನಡವನ್ನು ಕಟ್ಟಿಕೊಟ್ಟಿದ್ದಾರೆ. ಅದರ ಪ್ರವೇಶಕ್ಕೂ ಮುನ್ನ ತಾತ್ಸಾರ, ಟೀಕೆ ಭಾವನೆ ಬೇಡವಾಗಿದೆ ಎಂದರು. ಶಂಕರ್‌ಸಿಂಗ್ ಆನಂದ್‌ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ| ಬಿ.ಜಿ.ಕನಕೇಶಮೂರ್ತಿ ಮಾತನಾಡಿ, ಕನ್ನಡ ಪ್ರಾಧ್ಯಾಪಕರು, ಶಿಕ್ಷಕರು ಮೊದಲು ಹಳೆಗನ್ನಡವನ್ನು ಓದಬೇಕಿದೆ. ಅದರಲ್ಲಿನ ರಸಾನುಭವನನ್ನು ಆಸ್ವಾದಿಸುವ ಮೂಲಕ ತಿಳಿದುಕೊಳ್ಳಬೇಕು. ಅಲ್ಲಿನ ಶೃಂಗಾರ ಸೇರಿದಂತೆ ಇತರ ಪ್ರಸಂಗವನ್ನು ವಿದ್ಯಾರ್ಥಿಗಳಿಗೆ ರಸವತ್ತಾಗಿ ಬೋಧಿಸಲು ಅನುಕೂಲವಾಗಲಿದೆ. ಆ ಹಿನ್ನೆಲೆಯಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಭಾಗದಿಂದ ವಿದ್ವಾಂಸರು ಆಗಮಿಸಿರುವುದು ಸಂತಸ ತಂದಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಡಾ| ಯತ್ನಳ್ಳಿ ಮಲ್ಲಯ್ಯ, ಸೈಯದ್ ನಾಜೀಂ ಮಾತನಾಡಿದರು. ಪಂಪಭಾರತ, ಗದಾಯುದ್ಧದ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ| ಶಿವಾನಂದ ವಿಷಯ ಮಂಡಿಸಿದರು. ಗಮಕ ಕಲಾವಿದರಾದ ಡಾ| ಎಂ.ಆರ್.ಸತ್ಯನಾರಾಯಣ, ಖಾಸೀಂ ಮಲ್ಲಿಗೆ ಬಡೇವೂರು ಅವರಿಂದ ಗಮಕ ಗಾಯನ ನಡೆಯಿತು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ನಾಗಣ್ಣ ಕಿಲಾರಿ, ಬಲರಾವ್ ಎಸ್.ರಾಜಪುರೋಹಿತ್ ಇನ್ನಿತರರಿದ್ದರು.
ಹಳೆಗನ್ನಡವೆನ್ನುವುದು ನಾವು, ನೀವೆಲ್ಲರೂ ಮಾತನಾಡಿದಷ್ಟು ಸರಳವಾಗಿದೆ. ಹಳೆಗನ್ನಡದ ಬಗ್ಗೆ 8ನೇ ಶತಮಾನದಲ್ಲಿ ಟೀಕುಗಳನ್ನು ಬರೆಯುವ ಸಂಪ್ರದಾಯ ನಡೆಯತ್ತಿದ್ದು, ನಂತರದಲ್ಲಿ ದೀಪಿಕೆಗಳು, ಸರಳ ಭಾರತವಾಗಿ ರೂಪುಗೊಂಡಿವೆ. ಹಳಗನ್ನಡದ ಬಗ್ಗೆ ಹೆದರಬೇಕಿಲ್ಲ. ಅದೊಂದು ಸರಳವಾಗಿದ್ದು, ಕಬ್ಬಿಣದ ಕಡಲೆ ಎನ್ನುವುದು ಕೆಲವರ ಮಾನಸಿಕ ರೋಗವಾಗಿದೆ. ಹಳೆಗನ್ನಡ ಕಾವ್ಯಗಳು ಇನ್ನಷ್ಟು ಅನುಸಂಧಾನವಾಗಬೇಕಿದೆ.
ಡಾ| ಮಲ್ಲೇಪುರಂ ಜಿ.ವೆಂಕಟೇಶ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ.