Advertisement

ಮಾಡರ್ನ್ ರಾಮಾಯಣದ ಹಳೆಯ ಅಧ್ಯಾಯ

04:52 PM Apr 13, 2018 | |

ನಿಮಗೆ ರಾಮಾಯಣದ ಕಥೆ ಚೆನ್ನಾಗಿ ಗೊತ್ತಿರಬಹುದು. ಸುಮ್ಮನೆ ಕಲ್ಪಿಸಿಕೊಳ್ಳಿ, ರಾವಣನ ಬದಲು ರಾಮನೇ ಸೀತೆಯನ್ನು ಅಪಹರಿಸಿಕೊಂಡು ಹೋದರೆ? ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಬರಬಹುದು. ಸಾಧ್ಯತೆ ಇದೆ. ರಾಮ, ರಾವಣನ ಭಂಟ. ರಾವಣನ ಬದಲು ರಾಮನೇ ಸೀತೆಯನ್ನು ಅಪಹರಿಸುತ್ತಾನೆ. ಹಾಗಂತ ಅವನಿಗೆ ಅವಳ ಮೇಲೆ ಸಿಟ್ಟೇನಿಲ್ಲ. ಪ್ರೀತಿಯಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ ಅವನಿಗೆ ಅನ್ನ ಹಾಕಿದ ಧಣಿಯ ನಂಬಿಕೆ ಉಳಿಸಿಕೊಳ್ಳುವ ಅನಿವಾರ್ಯತೆ.

Advertisement

ಅದೇ ಕಾರಣಕ್ಕೆ ರಾವಣ ಹೇಳಿದ್ದನ್ನೆಲ್ಲಾ, ರಾಮ ಮಾಡುತ್ತಾನೆ. ಕಲಿಯುಗದಲ್ಲಿ ರಾಮ ಬದಲಾಗಬಹುದು. ಆದರೆ, ಸೀತೆ ಬದಲಾಗಿಲ್ಲ. ಆಕೆ ಹಾಗೆಯೇ ಇದ್ದಾಳೆ. ಅವಳಿಗೆ ರಾವಣನ ಮೇಲಿನ ಕೋಪಕ್ಕಿಂತ, ಬದಲಾದ ರಾಮನ ಮೇಲಿನ ಕೋಪ ಹೆಚ್ಚು. ಏಕೆಂದರೆ, ಅವಳನ್ನು ಪ್ರೀತಿಸುವ ಆಟವಾಡಿ ಮೋಸ ಮಾಡಿದವನು ಅವನು. ಹಾಗಾದರೆ, ಇಂಥದ್ದೊಂದು ಕಥೆಯ ಕ್ಲೈಮ್ಯಾಕ್ಸ್‌ ಏನಿರಬಹುದು? ಇಷ್ಟು ಕೇಳಿದರೆ, ಥ್ರಿಲ್‌ ಆಗಬಹುದು.

ಆದರೆ, “ದಳಪತಿ’ ನೋಡಿ ಬಂದ ನಂತರ, ಅದೇ ಥ್ರಿಲ್‌ ಉಳಿಯುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ, ಮೇಲೆ ಹೇಳಿದ ಕಥೆಯೂ, “ದಳಪತಿ’ ಚಿತ್ರದ ಕಥೆಯೂ ಒಂದೇ. ಇನ್ನೂ ಸರಳವಾಗಿ ಹೇಳಬೇಕೆಂದರೆ, “ದಳಪತಿ’ ಚಿತ್ರವು “ರಾಮಾಯಣ’ವನ್ನಾಧರಿಸಿದೆ. ಇಲ್ಲಿ ರಾಮಾಯಣದ ಕೆಲವು ಪಾತ್ರಗಳು ಬರುತ್ತವೆ. ನೀವು ರಾಮನನ್ನು ನೋಡಬಹುದು. ಸೀತೆಯನ್ನು ನೋಡಬಹುದು. ರಾವಣ, ಮಂಡೋದರಿ ಎಲ್ಲರನ್ನೂ ಕಾಣಬಹುದು. ಆದರೆ, ಅಂತ್ಯ ಮಾತ್ರ ಬೇರೆ.

“ದಳಪತಿ’ ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ. ಮೇಲೆ ಹೇಳಿದ ಕಥೆಗೆ ಕಮರ್ಷಿಯಲ್‌ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಲಾಗಿದೆ. ಒಂದು ವಿಭಿನ್ನ ಯೋಚನೆಗೆ ಮೂರು ಫೈಟುಗಳು, ಐದು ಹಾಡುಗಳು, ಕೆಟ್ಟ ಕಾಮಿಡಿ ಎಲ್ಲವನ್ನೂ ಸೇರಿಸಿ ಚಿತ್ರ ಮಾಡಲಾಗಿದೆ. ಯಡವಟ್ಟಾಗಿರುವುದು ಅಲ್ಲೇ. ಕೇಳುವುದಕ್ಕೆ ಮತ್ತು ಯೋಚಿಸುವುದಕ್ಕೆ ಬಹಳ ಚೆನ್ನಾಗಿರುವ ಒಂದು ಕಥೆಯನ್ನು ನೋಡುವುದಕ್ಕೆ ಹೋದಾಗ, ಏನೇನು ಸಮಸ್ಯೆಗಳಾಗಬಹುದೋ, ಅವೆಲ್ಲವೂ ಆಗಿವೆ.

ಪ್ರಮುಖವಾಗಿ ಚಿತ್ರದ ಮೊದಲಾರ್ಧ ಏನೂ ಆಗುವುದಿಲ್ಲ. ಅಲ್ಲಿಯವರೆಗೂ ನಾಯಕ-ನಾಯಕಿಯ ಸುತ್ತಲೇ ಚಿತ್ರ ಗಿರಕಿ ಹೊಡೆಯುತ್ತದೆ. ಮೊದಲಾರ್ಧದಲ್ಲಿ ನಾಯಕ, ನಾಯಕಿಯ ರೂಪಕ್ಕೆ ಬೋಲ್ಡ್‌ ಆಗುತ್ತಾನೆ. ಅವಳಿಗೊಂದು ಸುಳ್ಳು ಹೇಳಿ ಪಟಾಯಿಸುತ್ತಾನೆ. ನಿಜ ಗೊತ್ತಾದ ನಾಯಕಿ ಅವನ ಮೇಲೆ ಸಿಟ್ಟುಗೊಳ್ಳುತ್ತಾಳೆ. ಕೊನೆಗೆ ಅವನ ಒಳ್ಳೆಯತನ ನೋಡಿ ಅವನಿಗೆ ಹತ್ತಿರವಾಗುತ್ತಾಳೆ. ಹೀಗಿರುವಾಗಲೇ ಒಂದು ಟ್ವಿಸ್ಟ್‌ ಬಂದು ಚಿತ್ರದ ದಿಕ್ಕನ್ನೇ ಬದಲಾಯಿಸುತ್ತದೆ.

Advertisement

ಅಲ್ಲಿಂದ ಚಿತ್ರ ಬೇರೆಯದೇ ದಾರಿ ಹಿಡಿಯುತ್ತದೆ. ಆ ನಂತರ ಅದ್ಭುತವೇನೋ ಸಂಭವಿಸುತ್ತದೆ ಎಂದು ಕಾದರೆ, ಅಂತಹ ಅದ್ಭುತವೇನೂ ಸಂಭವಿಸುವುದಿಲ್ಲ. ಕಥೆ ಏನೇ ಚೆನ್ನಾಗಿದ್ದರೂ, ಕೊನೆಗೆ ಕಮರ್ಷಿಯಲ್‌ ರೀತಿಯಲ್ಲೇ ಮುಕ್ತಾಯವಾಗುತ್ತದೆ. ಪ್ರೇಮ್‌ ಇಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಎರಡರಲ್ಲೂ ಗಮನಸೆಳೆಯುತ್ತಾರೆ. ಕೃತಿ ಮುದ್ದಾಗಿ ಕಾಣಿಸುತ್ತಾರೆ. ಶರತ್‌ ಲೋಹಿತಾಶ್ವ, ಪದ್ಮಜಾ ರಾವ್‌, ಶ್ರೀನಿವಾಸ್‌ ಪ್ರಭು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಪ್ರೇಕ್ಷಕನಿಗೆ ಅರ್ಥವಾಗದ ಒಂದು ವಿಷಯವೆಂದರೆ, ಅದು ಚಿಕ್ಕಣ್ಣ ಅವರ ಪಾತ್ರ. ಚಿಕ್ಕಣ್ಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಯಾಕೆ ಕಾಣಿಸಿಕೊಳ್ಳುತ್ತಾರೆ ಎಂಬುದು ಅರ್ಥವಾಗದ ವಿಷಯ. ಕೆಲವೊಮ್ಮೆ ಚಿತ್ರದ ಟೈಮಿಂಗ್‌ ಹೆಚ್ಚಿಸುವುದಕ್ಕೆ ಅವರನ್ನು ಸುಮ್ಮನೆ ಬಳಸಿಕೊಳ್ಳಲಾಗಿದೆ ಎಂದನಿಸಿದರೂ ಆಶ್ಚರ್ಯವಿಲ್ಲ. ಆ ಮಟ್ಟಿಗೆ ಅವರ ಪಾತ್ರವಿದೆ. ಮಿಕ್ಕಂತೆ ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣ ಮತ್ತು ಚರಣ್‌ರಾಜ್‌ ಅವರ ಹಾಡುಗಳು ಖುಷಿ ಕೊಡುತ್ತವೆ.

ಚಿತ್ರ: ದಳಪತಿ
ನಿರ್ದೇಶನ: ಪ್ರಶಾಂತ್‌ ರಾಜ್‌
ನಿರ್ಮಾಣ: ನವೀನ್‌ ರಾಜ್‌
ತಾರಾಗಣ: ಪ್ರೇಮ್‌, ಕೃತಿ ಖರಬಂದ, ಶರತ್‌ ಲೋಹಿತಾಶ್ವ, ಚಿಕ್ಕಣ್ಣ, ಪದ್ಮಜಾ ರಾವ್‌, ಶ್ರೀನಿವಾಸ್‌ ಪ್ರಭು ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next