Advertisement

ಹಳೆ ಶಹಾಬಾದ ಸೇತುವೆಗಿಲ್ಲ ತಡೆಗೋಡೆ

11:34 AM Mar 23, 2022 | Team Udayavani |

ಶಹಾಬಾದ: ನಗರಸಭೆ ವ್ಯಾಪ್ತಿಯ ಹಳೆಶಹಾಬಾದನ ಶಿಬಿರಕಟ್ಟಾ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸೇತುವೆ ಹಳೆಯದಾಗಿದ್ದು, ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ವಾಹನ ಸವಾರರು ಭಯದಲ್ಲೇ ಸಂಚರಿಸುವಂತೆ ಆಗಿದೆ.

Advertisement

ಸೇತುವೆ ನಿರ್ಮಾಣವಾಗಿ ಹಲವಾರು ದಶಕಗಳೇ ಕಳೆದಿವೆ. ಆದರೆ ಇಲ್ಲಿವರೆಗೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇದರಿಂದ ಬೈಕ್‌ ಸವಾರರಿಗೆ ಈ ಪ್ರದೇಶ ಕಂಟಕವಾಗಿದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಿಕೊಂಡು ಹೋಗಬೇಕಿದೆ.

ರಸ್ತೆ ಮೂಲಕವೇ ಹಳೆಶಹಾಬಾದ, ತರನಳ್ಳಿ, ಮರತೂರ ಮೂಲಕ ಕಲಬುರಗಿಗೆ ಹೋಗಬೇಕು. ಇಲ್ಲಿ ದೊಡ್ಡ ಹಳ್ಳವಿದ್ದು ಅನೇಕ ವರ್ಷದ ಹಿಂದೆ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ತಡೆಗೋಡೆ ಮಾತ್ರವಿಲ್ಲ. ರಾತ್ರಿ ವೇಳೆ ವಾಹನ ಸವಾರರು ಎಚ್ಚರಿಕೆಯಿಂದಲೇ ಬೈಕ್‌ ಚಲಾಯಿಸಿಕೊಂಡು ಹೋಗಬೇಕು. ಮೈ ಮರೆತೆರೆ ಹಳ್ಳಕ್ಕೆ ಬೀಳುವ ಸಾಧ್ಯತೆ ಹೆಚ್ಚು. ಅಲ್ಲದೇ ಹೊಸ ಸೇತುವೆ ನಿರ್ಮಾಣ ಮಾಡುವುದಕ್ಕಿಂತ ಮುಂಚೆ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಲು ಮುಂದಾಗಬೇಕಿದೆ.

ಸರ್ಕಾರದಿಂದ ಬಂದ ಅನುದಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಇಂತಹ ಹಳೆಯ ಸೇತುವೆಗಳಿಗೆ ಮುಕ್ತಿ ನೀಡಿ, ಹೊಸ ಸೇತುವೆ ನಿರ್ಮಿಸಿದರೆ ಮಾತ್ರ ಪ್ರಯಾಣಿಕರು ಸುಗಮವಾಗಿ ಸಂಚಾರ ಮಾಡಲು ಅನುಕೂಲವಾಗುತ್ತದೆ.

ಈಗಾಗಲೇ ಹಳೆ ಸೇತುವೆಯಾಗಿದ್ದರಿಂದ ಬಾರಿ ವಾಹನಗಳು ಕಲ್ಲು ಹೊತ್ತುಕೊಂಡು ಹೋಗುತ್ತಿರುವುದರಿಂದ ಸೇತುವೆ ಕೆಳಗೆ ಬಿರುಕು ಮೂಡಿ, ಕಲ್ಲುಗಳು ಕಳಚಿ ಬೀಳುತ್ತಿವೆ. ಈ ರಸ್ತೆ ಮೂಲಕವೇ ನಿತ್ಯ ಜನಪ್ರತಿನಿಧಿಗಳು ಸಂಚಾರ ಮಾಡುತ್ತಾರೆ. ಆದರೆ ಹೊಸ ಸೇತುವೆ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಈ ಸೇತುವೆ ತಡೆಗೋಡೆ ಬಗ್ಗೆ ಕಾಳಜಿವಹಿಸುತ್ತಿಲ್ಲ. ಇದು ಪ್ರಯಾಣಿಕರ ಪಾಲಿಗೆ ತೀವ್ರ ಬೇಸರದ ಸಂಗತಿಯಾಗಿದೆ.

Advertisement

ಮಳೆಗಾಲದ ವೇಳೆ ಈ ಸೇತೆವೆಗೆ ಹಳ್ಳದ ನೀರು ಹರಿದು ಬರುತ್ತದೆ. ನೀರು ನುಗ್ಗಿ ಸಂಚಾರವೂ ಅಸ್ತವ್ಯಸ್ಥವಾಗುತ್ತದೆ. ಅಲ್ಲದೇ ಸೇತುವೆ ಎರಡು ಬದಿ ಹಾಗೂ ಕೆಳಗೆ ಜಾಲಿ ಕಂಟಿಗಳು ಬೆಳೆದಿವೆ. ತ್ಯಾಜ್ಯ ವಸ್ತುಗಳು ಕಲ್ಲುಗಳು ಬಿದ್ದು, ನೀರು ಹರಿಯುವುದಕ್ಕೂ ಅಡಚಣೆಯಾಗುತ್ತಿದೆ. ಆದ್ದರಿಂದ ಆದಷ್ಟು ಹೊಸ ಸೇತುವೆ ನಿರ್ಮಾಣ ಮಾಡಿ ಅಲ್ಲಿಯವರೆಗೆ ತಡೆಗೋಡೆ ನಿರ್ಮಾಣ ಮಾಡಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಬೇಕಿದೆ. ಇಂತಹ ಘಟನೆಗಳು ನಡೆಯುವ ಮುನ್ನವೇ ಎಚ್ಚೆತ್ತುಕೊಂಡರೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈಗಾಗಲೇ ಕಾರು ಮತ್ತು ಹಲವು ಜನ ಬಿದ್ದ ಉದಾಹರಣೆಗಳಿವೆ. ಆದರೆ ಅದೃಷ್ಠಾವಶಾತ್‌ ಯಾರಿಗೂ ಪ್ರಾಣಿಹಾನಿ ಸಂಭವಿಸಿಲ್ಲ. ಮಳೆ ಬಂದರೆ ಸಾಕು ನೀರು ಸೇತುವೆ ಮೇಲಿನಿಂದ ಹಾಯ್ದು ಹೋಗುತ್ತದೆ. ಅಲ್ಲದೇ ಇದಕ್ಕೆ ತಡೆಗೊಡೆ ಇಲ್ಲದೇ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಿಸಬೇಕಾದ ಪರಿಸ್ಥಿತಿಯಿದೆ.

ಶಾಸಕ ಬಸವರಾಜ ಮತ್ತಿಮಡು ಅವರು ಈ ಎಲ್ಲ ಸಮಸ್ಯೆಗಳನ್ನು ಅರಿತು ಹೊಸ ಸೇತುವೆ ನಿರ್ಮಾಣ ಮಾಡಬೇಕು. ಇಲ್ಲದಿದ್ದರೇ ಸೇತುವೆಗೆ ತಡೆಗೋಡೆ ನಿರ್ಮಾಣ ಮಾಡಬೇಕು. -ಶಂಕರ ಜಿ. ವಳಸಂಗ, ನಾಗರಿಕ, ಹಳೆಶಹಾಬಾದ

ಕೂಡಲೇ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಒಂದು ವೇಳೆ ನಿಷ್ಕಾಳಜಿ ವಹಿಸಿದರೆ ಮುಂಬರುವ ದಿನಗಳಲ್ಲಿ ಏನಾದರೂ ಅನಾಹುತ ನಡೆದರೆ ಅಮಾಯಕರು ಬಲಿಯಾಗಬೇಕಾಗುತ್ತದೆ. ಅದಕ್ಕಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ಸೇತುವೆ ನಿರ್ಮಾಣ ಮಾಡಬೇಕು. -ವೆಂಕಟೇಶ ಪವಾರ, ಯುವ ಕಾಂಗ್ರೆಸ್‌ ಮುಖಂಡ

ಸೇತುವೆಗೆ ತಡೆಗೋಡೆ ಇಲ್ಲದಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಶಾಸಕರು ವಿಶೇಷ ಕಾಳಜಿ ವಹಿಸಿ ನಗರೋತ್ಥಾನದಲ್ಲಿ ಸೇತುವೆ ನಿರ್ಮಾಣ ಮಾಡಲು ತಿಳಿಸಿದ್ದಾರೆ. ಅದರಂತೆ ಆದಷ್ಟು ಬೇಗನೆ ಹೊಸ ಸೇತುವೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. -ಡಾ| ಕೆ.ಗುರಲಿಂಗಪ್ಪ, ಪೌರಾಯುಕ್ತ, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next