ಆಳಂದ: ಪಟ್ಟಣದಲ್ಲಿ ತಾಪಂ ಆಡಳಿತ ಮಂಡಳಿ ಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷೆ ನಾಗಮ್ಮ ಗುತ್ತೇದಾರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಇಲಾಖೆ ಅಧಿಕಾರಿಗಳು ಅದೇ ಹಳೆ ವರದಿಯನ್ನೇ ಹಿಂಬಾಲಿಸಿದರೆ, ಕೆಲವೇ ಕೆಲವು ಸದಸ್ಯರು ಮಾತ್ರ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಜಮಾ ಖರ್ಚಿನ ಮಾಹಿತಿ ಪ್ರತಿ ನೀಡಬೇಕು ಎಂದು ಪಟ್ಟುಹಿಡಿದರು.
ಭೂಸೇನಾ ನಿಗಮಕ್ಕೆ ವಹಿಸಿದ್ದ ಅಂಗನವಾಡಿ ಕಟ್ಟಡ ಸೇರಿ ಇನ್ನಿತರ ಕಾಮಗಾರಿಗಳು ಎರಡೂ¾ರು ವರ್ಷಗಳಿಂದ ನನೆಗುದ್ದಿಗೆ ಬಿದ್ದಿವೆ. ಅಧಿ ಕಾರಿಗಳು ಏನು ಮಾಡುತ್ತಿರಿ ಎಂದು ಸದಸ್ಯೆ ಸಂಗೀತಾ ರಾಠೊಡ ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬೇಳೆ, ಆಹಾರ ಕೊಡುತ್ತಿಲ್ಲ. ಶಿಕ್ಷಕಿಯರೇ ಎತ್ತಿ ಹಾಕುತ್ತಿದ್ದಾರೆ.
ಈ ಕುರಿತು ಯಾವು ಕ್ರಮ ಕೈಗೊಳ್ಳಲಾಗಿದೆ ಎಂದು ವಿಕೆಸಲಗರ ಸದಸ್ಯ ದೀಪಕ ಮತ್ತು ಸಂಗೀತಾ ರಾಠೊಡ ಸಿಡಿಪಿಒ ತುಳಸಾಬಾಯಿ ಮಾನು ಅವರನ್ನು ಪ್ರಶ್ನಿಸಿದರು. ಸಹಾಯಕ ನಿರ್ದೇಶಕ ಶಶಾಂಕ ಶಾಹ ವರದಿ ಮಂಡಿಸುವಾಗ ಕೃಷಿ ಇಲಾಖೆಯಲ್ಲಿ ಎಸ್‌ಸಿ-ಎಸ್‌ಟಿ ಜನಾಂಗಕ್ಕೆ ಬಂದ ಸೌಲಭ್ಯಗಳನ್ನು ಸಾಮಾನ್ಯ ವರ್ಗಕ್ಕೆ ನೀಡಿದ್ದಾರೆ.
ಇನ್ನಿತರ ಯಾವ ಮಾಹಿತಿ ನೀಡದ ಅಧಿಕಾರಿಗಳು ಅನುದಾನ ಸೌಲಭ್ಯ ಲೂಟಿ ಮಾಡಿದ್ದಾರೆ. ತನಿಖಾ ತಂಡ ರಚಿಸಿ ಪರಿಶೀಲನೆ ಆಗಲೇಬೇಕು ಎಂದು ಸದಸ್ಯ ಗೋರಕನಾಥ ಸಜ್ಜನ್, ಬೋಧನ್ ಸದಸ್ಯ ಲಕಪತಿ ಎಸ್. ಶಿಂಗೆ, ದೀಪಕ ಒತ್ತಾಯಿಸಿದರು. ತಾಪಂ ಇಒ ಡಾ| ಸಂಜಯ ರೆಡ್ಡಿ ಮಾತನಾಡಿ, ಇಲಾಖೆಗೆ ವಹಿಸಿದ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಿ ಸರ್ವ ಸದಸ್ಯರಿಗೆ ವಿವರವಾದ ಮಾಹಿತಿ ಸಲ್ಲಿಸಬೇಕು ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಅಬ್ದುಲ್ ಸಲಾಂ, ತಾಪಂ ವ್ಯವಸ್ಥಾಪಕ ಬಸವರಾಜ ಪಾಟೀಲ, ಜೆಸ್ಕಾಂ ಎಇಇ ವಿಶ್ವನಾಥ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರಣ್ಣ ಗುಂಡಗುರತಿ, ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ಫುಲಾರ್,ಇಂಜಿನಿಯರ್ ಸಂಗಮೇಶ ಬಿರಾದಾರ, ವಿಜಯಕುಮಾರ ಯಳವಂತಗಿ ವರದಿ ಮಂಡಿಸಿದರು.
ಉಪಾಧ್ಯಕ್ಷ ಗುರುನಾಥ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಸರಸಂಬಿ, ಸದಸ್ಯ ಬಸವರಾಜ ಸಾಣಕ, ಶಿವಪ್ಪ ವಾರಿಕ, ಸಿದ್ದರಾಮ ವಾಘೊಡೆ, ಬಾಬುರಾವ ಶ್ರೀಮಂತ ಭಾಗವಹಿಸಿದ್ದರು. ಹಲವು ಮಹಿಳಾ ಸದಸ್ಯರು ಸಭೆಯುದ್ದಕ್ಕೂ ಮೌನ ಮುರಿಯದೆ ಕುಳಿತ್ತಿದ್ದರು. ಇನ್ನೂ ಕೆಲವು ಮಹಿಳಾ ಸದಸ್ಯರು ಮತ್ತು ಅಧಿಕಾರಿಗಳು ವಿರಾಮದ ಬಳಿಕ ಸಭೆಗೆ ಹಾಜರಾಗದೇ ನಿರ್ಗಮಿಸಿದರು.