ಹೊಸದಿಲ್ಲಿ: ಅಮಾನ್ಯಗೊಂಡ ನೋಟುಗಳ ಪರಿಶೀಲನೆ ಕಾರ್ಯ ಇನ್ನೂ ಮುಗಿದಿಲ್ಲ. ಹೀಗೆಂದು ಹೇಳಿರುವುದು ಭಾರತೀಯ ರಿಸರ್ವ್ ಬ್ಯಾಂಕ್.
ಹಳೆಯ 500 ರೂ. ಮತ್ತು 1 ಸಾವಿರ ರೂ.ಗಳನ್ನು ಪ್ರಧಾನಿ ಮೋದಿ ಅಮಾನ್ಯಗೊಳಿಸಿ ನ. 8ಕ್ಕೆ ಸರಿಯಾಗಿ ಒಂದು ವರ್ಷ ತುಂಬಲಿದೆ. ಸರಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ನೇತೃತ್ವದ 18 ವಿಪಕ್ಷಗಳು ಅದೇ ದಿನ ಕರಾಳ ದಿನ ಆಚರಣೆಗೆ ಕರೆ ಕೊಟ್ಟರೆ, ಬಿಜೆಪಿ ಆ ದಿನವನ್ನು “ಕಪ್ಪುಹಣ ವಿರೋಧಿ ದಿನ’ ವಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಆರ್‌ಬಿಐ ಈ ಮಾಹಿತಿಯನ್ನು ಹೊರಹಾಕಿದೆ.
ಇನ್ನೂ ಹಳೆಯ ನೋಟುಗಳ ಪರಿಶೀಲನೆ ನಡೆಯುತ್ತಿದ್ದು, ಅದಕ್ಕಾಗಿ ಸುಧಾರಿತ ಎಣಿಕಾ ಯಂತ್ರಗಳನ್ನು ಬಳಕೆ ಮಾಡುತ್ತಿರುವುದಾಗಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಕೇಳಲಾಗಿರುವ ಪ್ರಶ್ನೆಗೆ ಆರ್‌ಬಿಐ ಉತ್ತರಿಸಿದೆ.
“ಸೆ.30ರ ಅಂತ್ಯಕ್ಕೆ 500 ರೂ.ಮುಖಬೆಲೆಯ 1,134 ಕೋಟಿ ಹಾಗೂ ಸಾವಿರ ರೂ.ಗಳ 524.90 ಕೋಟಿ ನೋಟು ಗಳನ್ನು ಪರಿಶೀಲಿಸಿ ಎಣಿಕೆ ಮಾಡಲಾ ಗಿದೆ. ಈ ಪೈಕಿ 500 ರೂ. ಮುಖಬೆಲೆಯ ನೋಟಿನ ಮೌಲ್ಯ 5.67 ಲಕ್ಷ ಕೋಟಿ ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳ ಮೌಲ್ಯ 5.24 ಲಕ್ಷ ಕೋಟಿ ರೂ. ಅವುಗಳ ಒಟ್ಟು ಮೌಲ್ಯ 10.91 ಲಕ್ಷ ಕೋಟಿ ರೂ.’ ಎಂದಿದೆ ಆರ್‌ಬಿಐ. ಎರಡು ಪಾಳಿಗಳಲ್ಲಿ 66 ಸುಧಾರಿತ ಎಣಿಕಾ ಯಂತ್ರಗಳನ್ನು ಬಳಸಿ, ಎಣಿಕೆ ಮಾಡುತ್ತಿರುವುದಾಗಿ ಆರ್‌ಬಿಐ ಹೇ ಳಿದೆ. ಎಣಿಕೆ ಕಾರ್ಯ ಯಾವಾಗ ಮುಕ್ತಾಯವಾಗಬಹುದು ಎಂದು ಕೇಳ ಲಾಗಿರುವ ಪ್ರಶ್ನೆಗೆ “ಹಿಂದಕ್ಕೆ ಪಡೆದಿರುವ ನೋಟುಗಳ ಪರಿಶೀಲನೆ ಸದ್ಯಕ್ಕೆ ಮುಂ ದು ವರಿದಿದೆ’ ಎಂದಷ್ಟೇ ಉತ್ತರ ನೀಡಿದೆ.
ಆ.30ರಂದು ಆರ್‌ಬಿಐ ಬಿಡುಗಡೆ ಮಾಡಿರುವ 2016-17ನೇ ಸಾಲಿನ ವಾರ್ಷಿಕ ವರದಿಯಲ್ಲಿ ಶೇ. 99ರಷ್ಟು ಹಳೆಯ ಮುಖ ಬೆಲೆಯ ನೋಟುಗಳು ವಾಪಸ್ ಬಂದಿವೆ. ಅಂದರೆ 15.28 ಲಕ್ಷ ಕೋಟಿ ರೂ.ಗಳಷ್ಟು ಹಳೆಯ ಮುಖ ಬೆಲೆಯ ನೋಟುಗಳು ಹಿಂದಕ್ಕೆ ಬಂದಿವೆ ಎಂದು ಆರ್‌ಬಿಐ ಹೇಳಿಕೊಂಡಿತ್ತು.