Advertisement

ಹಳೇ ಹುಬ್ಬಳ್ಳಿ ಈಗ ಬೂದಿ ಮುಚ್ಚಿದ ಕೆಂಡ

09:07 AM Apr 18, 2022 | Team Udayavani |

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಇದುವರೆಗೆ 85 ಜನರನ್ನು ಬಂಧಿಸಿದ್ದಾರೆ. ಅನೇಕರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗಿದೆ.

Advertisement

ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್‌ ಹರಿಬಿಟ್ಟ ಹಿನ್ನೆಲೆಯಲ್ಲಿ ನೂರಾರು ಜನರು ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿ ಕ್ರಮಕ್ಕೆ ಒತ್ತಾಯಿಸಿದ್ದರು. ಪೊಲೀಸರು ಯುವಕನನ್ನು ಬಂಧಿಸಿದ್ದರೂ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿತ್ತು. ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ, 13 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ತಹಬದಿಗೆ ತಂದಿದ್ದರು.

20ವರೆಗೆ ನಿಷೇಧಾಜ್ಞೆ: ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಏ. 20ರ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಚನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಿಂದ ಹೆಚ್ಚುವರಿಯಾಗಿ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕೆಎಸ್‌ಆರ್‌ಪಿ ತುಕಡಿಗಳನ್ನು ಕರೆಯಿಸಿಕೊಂಡು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ಕಿಡಿಗೇಡಿಗಳ ಹುಡುಕಾಟ: ವಿವಾದಾತ್ಮಕ ಪೋಸ್ಟ್‌ ವಿಷಯವಾಗಿ ಶನಿವಾರ ರಾತ್ರಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆ ಎಬ್ಬಿಸಿದ್ದ ಬಹುತೇಕ ಕಿಡಿಗೇಡಿಗಳೆಲ್ಲ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಮನೆಗೆ ತೆರಳಿ ತಪಾಸಣೆ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧರಿಸಿ ಹಾಗೂ ಕಿಡಿಗೇಡಿಗಳು ಗಲಭೆ ವೇಳೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

Advertisement

ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ಅಂಜುಮನ್‌ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು, ಮುಸ್ಲಿಂ ಮುಖಂಡರು ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು, ಕಾಂಗ್ರೆಸ್‌ ಮತ್ತು ಬಿಜೆಪಿಯ ಮುಖಂಡರು ಭೇಟಿಕೊಟ್ಟು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಘಟನೆ ಮರುಕಳಿಸದಂತೆ ಸೂಕ್ತ ನಿಗಾ ವಹಿಸಬೇಕೆಂದು ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿದರು.

ಆಯುಕ್ತರ ನೇತೃತ್ವದಲ್ಲಿ 8 ತಂಡ ರಚನೆ: ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಪೊಲೀಸ್‌ ಆಯುಕ್ತ ಲಾಭೂ ರಾಮ ನೇತೃತ್ವದಲ್ಲಿ ಎಂಟು ತಂಡಗಳನ್ನು ರಚಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ ರೆಡ್ಡಿ ನಗರಕ್ಕೆ ಆಗಮಿಸಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನೂತನ ಪಕ್ಷವೊಂದರ ಪಾಲಿಕೆ ಸದಸ್ಯೆಯ ಪತಿಯನ್ನು ಬಂಧಿಸಿದ್ದಾರೆ. ಬಂಧಿತ 85 ಜನರನ್ನು ಪೊಲೀಸರು ಹೊಸ ಸಿಎಆರ್‌ ಮೈದಾನಕ್ಕೆ ಕರೆದೊಯ್ದು ಅಲ್ಲಿಯೇ ಕಿಮ್ಸ್‌ ವೈದ್ಯರನ್ನು ಕರೆಯಿಸಿ ವೈದ್ಯಕೀಯ ತಪಾಸಣೆಗೊಳಿಸಿದ್ದಾರೆ. ನಂತರ ಅವರನ್ನು ಧಾರವಾಡದ ಉಪ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ಠಾಣೆಯಲ್ಲೇ ಆಯುಕ್ತರ ಮೊಕ್ಕಾಂ: ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಲಾಭೂ ರಾಮ ಅವರು ಪರಿಸ್ಥಿತಿ ತಿಳಿಗೊಳಿಸಲು ಹಾಗೂ ಗಲಭೆಯಲ್ಲಿ ಭಾಗಿಯಾದವರನ್ನು ತಮ್ಮ ವಶಕ್ಕೆ ಪಡೆಯಲೆಂದು ಬೆಳಗ್ಗೆಯಿಂದ ರಾತ್ರಿ ವರೆಗೂ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲೇ ಮೊಕ್ಕಾಂ ಹೂಡಿದ್ದರು.

ದೇವಸ್ಥಾನಕ್ಕೆ ಗೃಹ-ಕೇಂದ್ರ ಸಚಿವರ ಭೇಟಿ: ಗಲಭೆ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಹಳೇ ಹುಬ್ಬಳ್ಳಿ ದಿಡ್ಡಿ ಓಣಿಯ ಹನುಮಂತ ದೇವಸ್ಥಾನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿದ್ದರು. ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಜಮಾಯಿಸಿದ್ದರು.

ಪಿಯುಸಿ ವಿದ್ಯಾರ್ಥಿ: ವಾಟ್ಸ್‌ಆ್ಯಪ್‌ನಲ್ಲಿ ಪ್ರಚೋದನಕಾರಿ ಸ್ಟೇಟಸ್‌ ಹಾಕಿದ್ದ ಆನಂದನಗರದ ಯುವಕ ನಗರದ ಖಾಸಗಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ.

ಪೊಲೀಸ್‌ ಪಥ ಸಂಚಲ: ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ದುಷ್ಟ ಶಕ್ತಿಗಳಿಗೆ ಭಯ ಮೂಡಿಸಲು ಪೊಲೀಸ್‌ ಆಯುಕ್ತ ಲಾಭೂ ರಾಮ ನೇತೃತ್ವದಲ್ಲಿ ಕೆಎಸ್‌ಆರ್‌ಪಿ ತುಕಡಿ, ಪೊಲೀಸರ ತಂಡವು ರವಿವಾರ ಸಂಜೆ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಿಂದ ಹಿರೇಪೇಟೆ, ಬೀರಬಂದ ಓಣಿ, ಜಂಗ್ಲಿಪೇಟೆ, ಅಕ್ಕಿಪೇಟೆ, ಮಸ್ತಾನ ಸೋಪಾ, ಕಸಬಾಪೇಟೆ ರಸ್ತೆ, ಮ್ಯಾದಾರ ಓಣಿ, ನ್ಯೂ ಇಂಗ್ಲಿಷ್‌ ಸ್ಕೂಲ್‌, ದುರ್ಗದ ಬಯಲು, ಮರಾಠಿ ಗಲ್ಲಿ, ಗಣೇಶ ಪೇಟೆ ವೃತ್ತದ ವರೆಗೆ ಪಥಸಂಚಲನ ನಡೆಸಿತು.

ಗಲಭೆಯಲ್ಲಿ 12 ಮಂದಿಗೆ ಗಾಯ: ಗಲಭೆಯಲ್ಲಿ ಪೂರ್ವ ಸಂಚಾರ ಠಾಣೆ ಇನ್ಸ್‌ ಪೆಕ್ಟರ್‌ ನಾಗಯ್ಯ ಕಾಡದೇವರಮಠ, ಹೆಡ್‌ ಕಾನ್ಸ್‌ಟೇಬಲ್‌ ಸೇರಿದಂತೆ ಒಟ್ಟು 12 ಪೊಲೀಸರು ಗಾಯಗೊಂಡಿದ್ದಾರೆ. ಈ ಪೈಕಿ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ದಾಂಧಲೆಯಲ್ಲಿ ಒಟ್ಟು 7 ಪೊಲೀಸ್‌ ವಾಹನಗಳು ಸೇರಿದಂತೆ 12 ವಾಹನಗಳು ಜಖಂಗೊಂಡಿವೆ. ಘಟನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ಹಾನಿಯಾಗಿದ್ದರೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು.ಲಾಭೂ ರಾಮ, ಹು-ಧಾ ಪೊಲೀಸ್‌ ಆಯುಕ

ಗಲಭೆ ಘಟನೆಗೆ ಸಂಬಂಧಿಸಿ ಸಿಸಿಟಿವಿ ಆಧರಿಸಿ ಹಲವರನ್ನು ಬಂಧಿಸಲಾಗಿದೆ. ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗಲಭೆಯಲ್ಲಿ ಇನ್ನು ಯಾರ್ಯಾರು ಪಾಲ್ಗೊಂಡಿದ್ದಾರೆ ಅವರೆಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ವಶಕ್ಕೆ ಪಡೆದವರಲ್ಲಿ ಯಾರಾದರೂ ಗಲಭೆಯಲ್ಲಿ ಭಾಗಿಯಾಗದವರು ಇದ್ದರೆ ಪರಿಶೀಲಿಸಲಾಗುವುದು.  ನಿತೇಶ ಪಾಟೀಲ, ಜಿಲ್ಲಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next