ಚೌಕಾಬಾರ ಆಟದ ಬಗ್ಗೆ ತಿಳಿಯದವರೇ ಇಲ್ಲ ಅನ್ನಬೇಕು. ಅಬಾಲವೃದ್ಧರಾದಿಯಾಗಿ ಎಲ್ಲರೂ ಆಡಬಹುದಾದ ಆಟ ಇದು. ಬಯಲು ಸೀಮೆಯಲ್ಲಿ ಇದಕ್ಕೆ ಪಚ್ಚಿಯಾಟ ಎಂಬ ಹೆಸರೂ ಉಂಟು. ಚೌಕಾಬಾರದಲ್ಲಿ, ಐದು ಮನೆ ಮತ್ತು ಏಳು ಮನೆ ಎಂದು ಎರಡು ಬಗೆಯ ಆಟಗಳು ಉಂಟು. ಐದು ಮನೆಯ ಆಟವು 10-15 ನಿಮಿಷದಲ್ಲಿ ಮುಗಿದು ಹೋಗುತ್ತದೆ. ಏಳು ಮನೆಯ ಆಟ ಮುಗಿಯಲು ಕೆಲವೊಮ್ಮೆ ಒಂದು ಗಂಟೆಯ ಸಮಯ ಹಿಡಿಯುವುದೂ ಉಂಟು.
ಮನೆ, ದೇವಸ್ಥಾನದ ಅಂಗಳ, ಬಯಲು, ಮರದ ಕೆಳಗೆ, ಬಾವಿಕಟ್ಟೆಯ ಬಳಿ… ಹೀಗೆ ಎಲ್ಲಿ ಬೇಕಾದರೂ ಈ ಆಟ ಆಡಬಹುದು. ಐದು ಮನೆ ಮತ್ತು ಏಳು ಮನೆ- ಈ ಎರಡೂ ಬಗೆಯಲ್ಲಿ ನಾಲ್ಕು ಮಂದಿ ಕೂತು ಒಂದು ಗೇಮ್ ಆಡಬಹುದು. ಎರಡೂ ಬಗೆಯ ಆಟಗಳಿಗೆ ನಾಲ್ಕು ಕಾಯಿಗಳು ಇರುತ್ತವೆ. ಪ್ರತಿ ಆಟಗಾರ ಕೂರುವ ನಿರ್ದಿಷ್ಟ ಸ್ಥಳವನ್ನು ಘಟ್ಟ ಅನ್ನುತ್ತಾರೆ.
ಯಾವುದೇ ಕಾಯಿ, ಘಟ್ಟ ತಲುಪಿದರೆ ಒಂದು ಮಟ್ಟಿಗೆ ಸೇಫ್ ಆದಂತೆ. ಘಟ್ಟದಲ್ಲಿ ಇರುವ ಕಾಯನ್ನು ಹೊಡೆಯಲು ಆಗುವುದಿಲ್ಲ. ಅದು ಘಟ್ಟದಿಂದ ಆಚೆ ಇದ್ದಾಗಲೇ ಹೊಡೆಯಬೇಕು. ಹೆಚ್ಚಿನ ಕಡೆಗಳಲ್ಲಿ, ಒಣಗಿದ ಹುಣಸೆ ಬೀಜವನ್ನು ಕಲ್ಲಿನ ಮೇಲೆ ತೇಯ್ದು, ಅದನ್ನು ದಾಳದ ರೂಪದಲ್ಲಿ ಬಳಸುತ್ತಾರೆ. ಕೆಲವು ಕಡೆಗಳಲ್ಲಿ, ದಾಳದ ರೂಪದಲ್ಲಿ ಕವಡೆ ಹಾಗೂ ಪಗಡೆಯ ದಾಳವನ್ನೇ ಬಳಸುತ್ತಾರೆ. ಐದು ಮನೆಯ ಆಟದಲ್ಲಿ ನಾಲ್ಕು ಮತ್ತು ಎಂಟು ಬಿದ್ದರೆ, ಹಾಗೂ ಕಾಯಿ ಹೊಡೆದ ಸಂದರ್ಭದಲ್ಲಿ ಮತ್ತೆ ಆಡಬಹುದು. ಏಳು ಮನೆಯ ಆಟದಲ್ಲಿ, ಆರು, ಹನ್ನೆರಡು ಬಿದ್ದಾಗ ಮತ್ತು ಕಾಯಿ ಹೊಡೆದ ಸಂದರ್ಭದಲ್ಲಿ ಮತ್ತೂಮ್ಮೆ ಆಡಲು ಅವಕಾಶ ಇರುತ್ತದೆ. (ಆಟದ ನಿಯಮಗಳು ಸ್ಥಳದಿಂದ ಸ್ಥಳಕ್ಕೆ ಬೇರೆ ಆಗಿರುತ್ತವೆ.) ಎಲ್ಲಾ ಕಾಯಿಗಳನ್ನೂ ಹಣ್ಣು ಮಾಡಿದರೆ ಆತ ಗೆದ್ದ ಹಾಗೆ. ಎದುರಾಳಿ ಆಟಗಾರರೂ ಗೆಲ್ಲುವುದಕ್ಕಾಗಿಯೇ ತುರುಸಿನ ಪೈಪೋಟಿ ನೀಡುವುದರಿಂದ, ಬಹಳ ಸ್ವಾರಸ್ಯ ಇರುತ್ತದೆ. ಆಟಗಾರರು , ಕಾಯಿ ಹೊಡೆದಾಗ, ಗೆದ್ದಾಗ ಸಂಭ್ರಮಿಸುವ ಕ್ಷಣವನ್ನು ನೋಡಿಯೇ ಆನಂದಿಸಬೇಕು. ಒಬ್ಬ ವ್ಯಕ್ತಿಯ ಜಾಣತನ ಮತ್ತು ಲೆಕ್ಕಾಚಾರದ ನಡೆ ಈ ಆಟದ ಮೂಲಕ ಅರ್ಥವಾಗುವುದೂ ಉಂಟು…