Advertisement

ಡೋಂಗ್ರಿಯಲ್ಲಿ ಕುಸಿದ ಕಟ್ಟಡ ಶತಮಾನಗಳಷ್ಟು ಹಳೆಯದು

09:13 AM Jul 17, 2019 | Team Udayavani |

ಮಣಿಪಾಲ: ದಕ್ಷಿಣ ಮುಂಬಯಿ ಡೋಂಗ್ರಿಯಲ್ಲಿ ಮಂಗಳವಾರ ಬೆಳಗ್ಗೆ ಶತಮಾನದ ಬಹುಮಡಿಯ ಕಟ್ಟಡ ಕುಸಿದಿದೆ. ಈ ದುರ್ಘಟನೆಯಲ್ಲಿ ಇದುವರೆಗೆ ನಾಲ್ಕು ಜನರು ಸಾವನ್ನಪ್ಪಿದ್ದು, ಸುಮಾರು 40 ಮಂದಿ ಇನ್ನೂ ಕಟ್ಟಡದಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಾವು ನೋವಿನ ಕುರಿತಾದ ಸ್ಪಷ್ಟ ಮಾಹಿತಿ ರಕ್ಷಣಾ ಕಾರ್ಯ ಪೂರ್ಣಗೊಂಡ ಬಳಿಕವಷ್ಟೇ ಲಭಿಸಲಿದೆ.

Advertisement

ಡೋಂಗ್ರಿ ಪ್ರದೇಶದಲ್ಲಿ ಕುಸಿದ ಕೇಸರ್ ಭಾಯ್ ಕಟ್ಟಡವು ಶತಮಾನಗಳ ಹಿಂದೆ ನಿರ್ಮಾಣಗೊಂಡಿದ್ದು ಎಂಬ ಮಾಹಿತಿ ಲಭ್ಯವಾಗಿದೆ. ಮಾತ್ರವಲ್ಲದೇ ಈ ಕಟ್ಟಡವನ್ನು ಆದಷ್ಟು ಶೀಘ್ರದಲ್ಲಿ ಕೆಡವಬೇಕೆಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ 2017ರಲ್ಲೇ ನೋಟೀಸು ನೀಡಿತ್ತು ಎಂದೂ ತಿಳಿದುಬಂದಿದೆ.

31.07.2017ರ ಆಡಿಟ್ ವರದಿಯ ಪ್ರಕಾರ ಈ ಕಟ್ಟಡವು ಸಿ1 ಪಟ್ಟಿಯಡಿಯಲ್ಲಿ ನಮೂದಾಗಿತ್ತು. ಮತ್ತು ಇದರ ಪ್ರಕಾರ ಈ ಕಟ್ಟಡವನ್ನು ಆದಷ್ಟು ಶೀಘ್ರದಲ್ಲೇ ನೆಲಸಮಗೊಳಿಸಬೇಕಾಗಿತ್ತು. ಆದರೆ ಎಲ್ಲಾ ನಿಯಮ ಸೂಚನೆಗಳನ್ನು ಗಾಳಿಗೆ ತೂರಿದ್ದರಿಂದಲೇ ಈ ದುರಂತ ಸಂಭವಿಸಿದೆ ಎಂಬ ಅಭಿಪ್ರಾಯ ಇದೀಗ ಕೇಳಿಬರಲಾರಂಭಿಸಿದೆ.

ಇತ್ತೀಚಿನ ವರ್ಷಗಳಲ್ಲಿ ನಗರಗಳಲ್ಲಿ ಕಟ್ಟಡ ಕುಸಿತದ ಪ್ರಕರಣ ಹೆಚ್ಚಾಗಿವೆ. ನಗರಗಳಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿದ್ದು, ಸರಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂಬ ಕೂಗು ಈ ಕಟ್ಟಡ ದುರಂತದ ಬಳಿಕ ಕೇಳಿ ಬರುತ್ತಿದೆ. ಇನ್ನು ಮುಂಬಯಿ ನಗರಕ್ಕೆ ಕಳೆದ ಆರು ವರ್ಷಗಳಲ್ಲಿ ಇದು ಐದನೇ ಕಟ್ಟಡ ದುರಂತ ಪ್ರಕರಣವಾಗಿದೆ.

ಮುಂಬಯಿನ ಈ ಹಿಂದಿನ ಘಟನೆಗಳು
ಥಾಣೆ: 2013
2013ರ ಎಪ್ರಿಲ್ 4ರಂದು ಥಾಣೆಯಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಇದರಲ್ಲಿ 18 ಮಕ್ಕಳು ಸೇರಿದಂತೆ 74 ಜನರ ಸಾವು ಸಂಭವಿಸಿತ್ತು. 60 ಜನ ಪವಾಡ ಸದೃಶ್ಯರಾಗಿ ಬದುಕುಳಿದಿದ್ದರು.

Advertisement

2 ತಿಂಗಳಲ್ಲಿ ಕಟ್ಟಡ 7 ಮಹಡಿಯನ್ನು ಏರಿಸಿತ್ತು, ಬಳಿಕ 8 ನೇ ಮಹಡಿಯ ನಿರ್ಮಾಣ ಕಾರ್ಯ ನಡೆಯುವ ಸಂದರ್ಭರ್ದಲ್ಲಿ ಕಟ್ಟಡ ನೆಲಕ್ಕೆ ಉರುಳಿತ್ತು.

ದಕ್ಷಿಣ ಮುಂಬಯಿ 2017
2017 ಸೆಪ್ಟೆಂಬರ್‌ ನಲ್ಲಿ ದಕ್ಷಿಣ ಮುಂಬಯಿಯಲ್ಲಿ 5 ಮಹಡಿಯ ಕಟ್ಟಡವೊಂದು ಕುಸಿದ ಪರಿಣಾಮ 33 ಮಂದಿಯ ಸಾವನ್ನಪ್ಪಿದ್ದರೆ 20 ಜನರು ಗಾಯಗೊಂಡಿದ್ದಾರೆ. ಈ ಕಟ್ಟಡ 117 ವರ್ಷ ಹಳೆಯದಾಗಿದ್ದು, ಬಕ್ರೀದ್ ಹಬ್ಬದ ಸಂದರ್ಭ ಈ ಘಟನೆ ನಡೆದಿತ್ತು.

ಮುಂಬಯಿನ ಮಜಗಾವ್ 2017
ಸೆಪ್ಟೆಂಬರ್ 27ರಂದು ಮುಂಬಯಿನ ಮಜಗಾವ್‌ ನಲ್ಲಿ ಮರು ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದ ಪರಿಣಾಮ 61 ಜನರು ಸಾವನ್ನಪ್ಪಿದ್ದರು. 32 ವರ್ಷ ಹಳೆಯ ಕಟ್ಟಡವನ್ನು ಮರು ವಿನ್ಯಾಸಗೊಳಿಸಲಾಗುತ್ತಿತ್ತು. ಈ ದುರ್ಘಟನೆಯಲ್ಲಿ 30 ಜನರು ಬದುಕುಳಿದಿದ್ದರು.

ಗೋರೆಗಾಂವ್ 2018
ಮುಂಬಯಿನ ಗೋರೆಗಾಂವ್‌ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು 3 ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ 8 ಜನರು ಗಾಯಗೊಂಡಿದ್ದರು.

ರಾಜ್ಯ ಸರಕಾರ ಮತ್ತು ಸ್ಥಳೀಯಾಡಳಿತ ಇನ್ನಾದರೂ ಅಕ್ರಮ ಕಟ್ಟಡಗಳ ಮೇಲೆ ಹಾಗೂ ಶಿಥಿಲ ಕಟ್ಟಡಗಳನ್ನು ನೆಲಸಮಗೊಳಿಸುವ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next