ಜೈಪುರ: ಅದು ಭಾರತದ ಕಡಲತಡಿಯ ಅತಿದೊಡ್ಡ ತೈಲಕ್ಷೇತ್ರ. ಅಲ್ಲಿಂದ ಹೊರ ಹೋಗುತ್ತಿದ್ದ ನೀರಿನ ಟ್ಯಾಂಕರ್‌ಗಳನ್ನು ಯಾರೂ ಇಣುಕಿ ನೋಡಿರಲಿಲ್ಲ. ನೋಡಿದ್ದಿದ್ದರೆ, ಬರೋಬ್ಬರಿ 49 ಕೋಟಿ ರೂ. ಮೌಲ್ಯದ ಕಚ್ಚಾ ತೈಲ ಉಳಿಯುತ್ತಿತ್ತು!
ಹೌದು. ರಾಜಸ್ಥಾನದಲ್ಲಿರುವ ಕೈರ್ನ್ ಇಂಡಿಯಾ ಆಯಿಲ್‌ಫೀಲ್ಡ್‌ನಿಂದ ಹೊರ ಹೋಗುತ್ತಿದ್ದ ನೀರಿನ ಟ್ಯಾಂಕರ್‌ಗಳಲ್ಲಿ ಕಚ್ಚಾ ತೈಲವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ರೀತಿ ಮಾಡಿ ಒಂದಲ್ಲ, ಎರಡಲ್ಲ, ಬರೋಬ್ಬರಿ 5 ಕೋಟಿ ಲೀಟರ್‌ನಷ್ಟು ಕಚ್ಚಾ ತೈಲವನ್ನು ಕಳವು ಮಾಡಲಾಗಿದೆ. ಸತತ 6 ವರ್ಷಗಳಿಂದ ಇಂಥದ್ದೊಂದು ದಂಧೆ ನಡೆಯುತ್ತಿದ್ದರೂ ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಇತ್ತೀಚೆಗೆ ಪೆಟ್ರೋಲ್ ಕಳ್ಳಸಾಗಣೆ ಪ್ರಕರಣದಲ್ಲಿ 25 ಮಂದಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ ನಂತರ ಈ ಬೃಹತ್ ಪ್ರಮಾಣದ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ತೈಲಕ್ಷೇತ್ರದೊಳಗೆ ಅಕ್ರಮ ನಡೆಯುತ್ತಿದೆ ಎಂಬ ವಾಸನೆ ಬಡಿದ ಹಿನ್ನೆಲೆಯಲ್ಲಿ ಕಂಪನಿ ಪೊಲೀಸರಿಗೆ ದೂರು ನೀಡಿತ್ತು.
25 ಮಂದಿಯ ಬಂಧನದೊಂದಿಗೆ ಆ ಅಕ್ರಮ ಬಯಲಿಗೆ ಬಂದಿದೆ. ಅಕ್ರಮದಲ್ಲಿ ತೈಲಕ್ಷೇತ್ರದೊಳಗೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಹಾಗೂ ಟ್ರಕ್ ಚಾಲಕರೂ ಭಾಗಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಈವರೆಗೆ 30ಕ್ಕೂ ಹೆಚ್ಚು ಟ್ರಕ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಹೇಗೆ ನಡೆಯುತ್ತಿತ್ತು ಕಳ್ಳಸಾಗಣೆ?: ತೈಲಾನ್ವೇಷಣೆ ಪ್ರಕ್ರಿಯೆ ಬಳಿಕ ಅದರ ಉಪಉತ್ಪನ್ನವಾದ ನೀರನ್ನು ಟ್ಯಾಂಕ್‌ಗಳಲ್ಲಿ ತುಂಬಿ ಬಿಸಾಕಲೆಂದು ಕಳುಹಿಸಲಾಗುತ್ತದೆ. ಆದರೆ, ಟ್ಯಾಂಕ್ ಚಾಲಕರು, ತಮ್ಮ ಟ್ರಕ್‌ಗಳಲ್ಲಿ ನೀರಿನ ಬದಲು, ತೈಲ ತುಂಬಿ ಒಯ್ಯುತ್ತಿದ್ದರು. ಗೊತ್ತಾಗಬಾರದೆಂದು ಜಿಪಿಎಸ್ ಸಾಧನ ಆಫ್ ಮಾಡುತ್ತಿದ್ದರು. ನಂತರ ಈ ತೈಲವನ್ನು ಎರಡು ಸ್ಥಳೀಯ ಫ್ಯಾಕ್ಟರಿಗಳಿಗೆ ಒಯ್ಯಲಾಗುತ್ತಿತ್ತು. ಅವರು ಅಂಡರ್‌ಗ್ರೌಂಡ್ ಟ್ಯಾಂಕ್‌ಗಳಲ್ಲಿ ಈ ತೈಲ ತುಂಬಿ, ಮಾರಾಟ ಮಾಡುತ್ತಿದ್ದರು.
25 ಮಂದಿಯ ಬಂಧನ: ಉತ್ತರಪ್ರದೇಶ ದಲ್ಲಿ ರಿಫೈನರಿ ಪೈಪ್‌ಲೈನ್‌ನಿಂದ 100 ಕೋಟಿ ರೂ. ಮೌಲ್ಯದ ಪೆಟ್ರೋಲಿಯಂ ಕಳ್ಳತನ ಆರೋಪದಲ್ಲಿ 25 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಗ್ಯಾಂಗ್ ಭೂಮಿಯೊಳಗೆ ಸುರಂಗ ನಿರ್ಮಿಸಿ, ಹಿಂದುಸ್ಥಾನ್ ಪೆಟ್ರೋಲಿಯಂನ ಪೈಪ್‌ಲೈನ್‌ನಿಂದ ಪೆಟ್ರೋಲಿಯಂ ಕದಿಯುತ್ತಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ತೈಲ ಕಳವು ಪ್ರಕರಣವೂ ಬೆಳಕಿಗೆ ಬಂತು.