Advertisement

ಇಂದಿನಿಂದ ಅಧಿಕೃತವಾಗಿ ಯಾಂತ್ರಿಕ ಮೀನುಗಾರಿಕೆ ಆರಂಭ

10:53 PM Jul 31, 2019 | sudhir |

ಮಲ್ಪೆ: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಯಾಂತ್ರಿಕ ಮೀನುಗಾರಿಕೆಗೆ ಹೇರಲಾಗಿದ್ದ ನಿಷೇಧದ ಅವಧಿ ಜು. 31ಕ್ಕೆ ಮುಗಿದಿದೆ. ಆ. 1ರಿಂದ ಅಧಿಕೃತವಾಗಿ ಯಾಂತ್ರಿಕ ಮೀನುಗಾರಿಕೆ ಪ್ರಾರಂಭವಾಗಲಿದೆ. ಮಲ್ಪೆ ಮೀನುಗಾರರು ಸ್ಥಳೀಯ ಮಾರಿಹಬ್ಬ ಮತ್ತು ನಾಗರಪಂಚಮಿಯ ಹಿನ್ನೆಲೆಯಲ್ಲಿ ಆ. 6ರ ಬಳಿಕ ಮೀನುಗಾರಿಕೆಗೆ ತೆರಳಲಿದ್ದಾರೆ.

Advertisement

ಮಲ್ಪೆ ಬಂದರಿನಲ್ಲಿ ಬೋಟ್‌ಗಳಲ್ಲಿ ಬಲೆ ತುಂಬಿ ಅಗತ್ಯ ಪರಿಕರಗಳನ್ನು ಜೋಡಿಸಿ ಸಜ್ಜುಗೊಳಿಸುವ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ.
ಮೀನುಗಾರಿಕೆಗೆ ಎರಡು ತಿಂಗಳ ರಜೆ ಕಾರಣ ಊರಿಗೆ ಹೋದ ಮೀನುಗಾರ ಕಾರ್ಮಿಕರು ಮತ್ತೆ ಬಂದರಿಗೆ ಬಂದು ಸಿದ್ಧತೆಯಲ್ಲಿ ತೊಡಗಿದ್ದಾರೆ. ಸ್ಥಳೀಯ ಮೀನುಗಾರರಲ್ಲದೆ ಉತ್ತರ ಕರ್ನಾಟಕ ಸೇರಿದಂತೆ ಹೊರರಾಜ್ಯ ಜಾರ್ಖಂಡ್‌, ಒಡಿಶಾ, ಆಂಧ್ರಪ್ರದೇಶ, ಕೇರಳದ ಬಹುತೇಕ ಮಂದಿ ಕಾರ್ಮಿಕರಾಗಿ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ.

ಡೀಸೆಲ್‌ ರೋಡ್‌ ಸೆಸ್‌ ವಿನಾಯಿತಿ
ಏರುತ್ತಿರುವ ಡೀಸೆಲ್‌ ದರ ಮೀನುಗಾರರಿಗೆ ದೊಡ್ಡ ಹೊರೆಯಾಗುತ್ತಿದೆ. ಜತೆಗೆ ರಫ್ತಾಗುವ ಮೀನಿನ ದರದ ಪ್ರಮಾಣ ಏರಿಕೆಯಾಗದೆ ನಷ್ಟ ಉಂಟಾಗುತ್ತಿದೆ. ಮೀನುಗಾರಿಕೆ ಡೀಸೆಲ್‌ಗೆ ಕೇಂದ್ರ ಸರಕಾರ ರೋಡ್‌ ಸೆಸ್‌ನಿಂದ ವಿನಾಯಿತಿ ನೀಡಬೇಕು. ಪಶ್ಚಿಮ ಕರಾವಳಿಯ 5 ರಾಜ್ಯಗಳಲ್ಲಿ ಏಕರೂಪದ ಸಮಗ್ರ ನೀತಿಯನ್ನು ರೂಪಿಸಿಬೇಕೆಂಬ ಮೀನುಗಾರರ ಹಲವು ವರ್ಷದ ಬೇಡಿಕೆ ಇನ್ನೂ ಜಾರಿಗೊಂಡಿಲ್ಲ.

ಡೀಸೆಲ್‌ ಪೂರೈಕೆ ವಾರ್ಷಿಕ ಲೆಕ್ಕಾಚಾರದಲ್ಲಿ ಬೇಕು
ಮೀನುಗಾರಿಕೆಗೆ ನೀಡುತ್ತಿರುವ ಡೀಸೆಲ್‌ ಕೋಟ ಈಗಿರುವ 300ಲೀ. ನಿಂದ 500 ಲೀ. ಗೆ ಹೆಚ್ಚಿಸಬೇಕೆಂಬ ಬೇಡಿಕೆ ಕಳೆದ ಕೆಲವು ವರ್ಷಗಳಿಂದ ಇದೆ. ಪ್ರಸ್ತುತ ಸರಕಾರವು ಡೀಸೆಲ್‌ ಕೋಟಾವನ್ನು ತಿಂಗಳವಾರು ಲೆಕ್ಕದಲ್ಲಿ ಪ್ರತೀ ಬೋಟಿಗೆ 9000 ಲೀ. ನಂತೆ ನೀಡುತ್ತಿದೆ. ಅದನ್ನು ವಾರ್ಷಿಕ ಲೆಕ್ಕದ ವಿಧಾನದಲ್ಲಿ (9000ಲೀ x 10ತಿಂಗಳು = 90,000 ಲೀ. ನಂತೆ ಪ್ರತಿ ಬೋಟಿಗೆ) ವಿತರಿಸಬೇಕೆಂಬಆಗ್ರಹ ಮೀನುಗಾರರದ್ದಾಗಿದೆ. ದೋಣಿಗಳ ದುರಸ್ತಿ ಮತ್ತು ಸಮುದ್ರದಲ್ಲಿ ಮೀನಿನ ಅಲಭ್ಯತೆಯಿರುವ ವೇಳೆ ಮೀನುಗಾರಿಕೆಗೆ ತೆರಳುವುದಿಲ್ಲ. ಈ ಸಂದರ್ಭ ತಿಂಗಳ ಲೆಕ್ಕಾಚಾರದಲ್ಲಿ ನೀಡುವ ಸಬ್ಸಿಡಿ ಡಿಸೆಲ್‌ ಆ ತಿಂಗಳು ಕೈ ಬಿಡಬೇಕಾಗುತ್ತದೆ. ಇದು ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ಮೀನುಗಾರರ ಅಭಿಪ್ರಾಯ.

ಹೆಚ್ಚುವರಿ ಅವಧಿಗೆ ಆಗ್ರಹ
ಈ ಬಾರಿ ಸಮುದ್ರದಲ್ಲಿ ಉಂಟಾದ ಪ್ರತಿಕೂಲ ವಾತಾವರಣ, ಮೀನಿನ ಅಲಭ್ಯತೆಯಿಂದ ಮಳೆಗಾಲದ ಕಡಲತೀರದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಭಾರಿ ಹೊಡೆದ ಬಿದ್ದಿದೆ. ಎರಡು ತಿಂಗಳ ಅವಧಿ ಮುಗಿದರೂ ನಿರೀಕ್ಷಿತ ಮೀನು ಸಿಗದೇ ಕಂಗಾಲಾಗಿದ್ದಾರೆ. ಹೆಚ್ಚುವರಿ ಅವಧಿಯನ್ನು ನೀಡಬೇಕೆಂಬ ಬೇಡಿಕೆಯನ್ನು ಮಂಡಿಸಿದ್ದಾರೆ.

Advertisement

2 ಸಾವಿರ ಬೋಟ್‌ ಸಿದ್ಧ
ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಒಟ್ಟು 2000ಕ್ಕೂ ಅಧಿಕ ಯಾಂತ್ರಿಕ ಟ್ರಾಲ್‌ದೋಣಿಗಳಿವೆ. 1000ಡೀಪ್‌ಸೀ , 500 ತ್ರಿಸೆವೆಂಟಿ, 145 ಪಸೀìನ್‌, 250ಸಣ್ಣಟ್ರಾಲ್‌ಬೋಟ್‌ಗಳಿವೆ. ಮುಂದಿನ ಎರಡು ಮೂರು ವಾರದೊಳಗೆ ಪೂರ್ಣ ಪ್ರಮಾಣದಲ್ಲಿ ಬೋಟ್‌ಗಳು ಮೀನುಗಾರಿಕೆ ತೆರಳಲಿವೆ. ಕಳೆದ ವರ್ಷ ಮೀನುಗಾರಿಕೆ ಅವಧಿಯಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮೀನು ದೊರಕದೆ ಬಹುತೇಕ ಆಳಸಮುದ್ರ ಬೋಟ್‌ಗಳು ನಷ್ಟವನ್ನು ಅನುಭವಿಸಿದ್ದವು.

ನಿಯಮ ಪಾಲಿಸಲು ಸೂಚನೆ
ಅವೈಜ್ಞಾನಿಕ ನಿಷೇಧಿತ ಮೀನುಗಾರಿಕೆ ಕಂಡು ಬಂದಲ್ಲಿ ಅಂತಹ ದೋಣಿಗಳ ಲೈಸನ್ಸ್‌ ರದ್ದು ಗೊಳಿಸಲಾಗುವುದು ಮತ್ತು ಕರರಹಿತ ಡೀಸೆಲ್‌ ಸೌಲಭ್ಯವನ್ನು ನಿಲ್ಲಿಸಲಾಗುತ್ತದೆ. ದೋಣಿಗಳಿಗೆ ಏಕರೂಪದ ಬಣ್ಣ, 35 ಎಂಎಂ ಆಳತೆಯ ಚೌಕಾಕಾರ ಮೆಶ್‌ ಕಾಡ್‌ಎಂಡ್‌ ಬಲೆ ಉಪಯೋಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
-ಗಣೇಶ್‌ ಕೆ., ಮೀನುಗಾರಿಕೆ ಉಪ ನಿರ್ದೇಶಕರು, ಮಲ್ಪೆ

ಪ್ರಾರ್ಥನೆ ಬಳಿಕ ತೆರಳುತ್ತೇವೆ
ಕಲ್ಮಾಡಿ ಕಟ್ಟದಬುಡದ ಭಗವತೀ ಮಾರಿಕಾಂಬಾ ದೇವಿಯ ಸನ್ನಿಧಿಯಲ್ಲಿ ನಡೆಯುವ ಆಷಾಢ ಮಾರಿಹಬ್ಬ ಉತ್ಸವದ ಬಳಿಕ ಮೀನುಗಾರಿಕೆಗೆ ತೆರಳುತ್ತೇವೆ. ಆ. 3ರಂದು ಮಾರಿಹಬ್ಬ ಇದೆ. ಅಲ್ಲಿನ ಪ್ರಸಾದವನ್ನು ಬಂದರಿಗೆ ತಂದು ಸಾಮೂಹಿಕವಾಗಿ ಪ್ರಾರ್ಥಿಸಿ ಗಂಗಾಮಾತೆಗೆ ಸಮರ್ಪಿಸಿಯೇ ಕಡಲಿಗಿಳಿಯಲಾಗುವುದು.
-ರವಿರಾಜ್‌ ಸುವರ್ಣ, ಅಧ್ಯಕ್ಷರು ಮಲ್ಪೆ ಡೀಪ್‌ಸೀ ಟ್ರಾಲ್‌ಬೋಟ್‌
ತಾಂಡೇಲರ ಸಂಘ

ಆ.6ರ ಬಳಿಕ ಮೀನುಗಾರಿಕೆ
ಇಂದಿನಿಂದ ಯಾಂತ್ರಿಕ ಮೀನುಗಾರಿಕೆ ನಿಷೇಧ ತೆರವಾಗಿದ್ದರಿಂದ ಮೀನುಗಾರಿಕೆಗೆ ತೆರಳಲು ಅವಕಾಶವಿದೆ. ಈ ಬಾರಿ ಇದುವರೆಗೂ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರಕವಾದ ತೂಫಾನ್‌ ಆಗದಿರುವುದು ಮೀನುಗಾರರಲ್ಲಿ ಉತ್ಸಾಹ ಕಾಣುತ್ತಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಮುಗಿದು ಬಹುತೇಕ ದೋಣಿಗಳು ಆ.6ರ ಬಳಿಕವೇ ಮೀನುಗಾರಿಕೆಗೆ ತೆರಳಲಿವೆ.
-ಸತೀಶ್‌ ಕುಂದರ್‌, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next