ಬಂಕಾಪುರ: ಪಟ್ಟಣದ ಸವಿತಾ ರಾಮಚಂದ್ರ ಮಿಶ್ರಿಕೋಟಿ ಅವರಿಗೆ ಎಸ್.ಸಿ. ಸರ್ಟಿಫಿಕೇಟ್ ಬದಲು 3ಬಿ ಸರ್ಟಿಫಿಕೇಟ್ ನೀಡಿದ್ದರಿಂದ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳಿಂದ ನಡೆದ ತಪ್ಪಿಗೆ ವರ್ಷವಿಡಿ ಕಚೇರಿಗೆ ಅಲೆಯುವಂತಾಗಿದೆ.
ಶಾಲಾ ದಾಖಲಾತಿ ಪ್ರಕಾರ ಜಾತಿ ಹಿಂದೂ ಮಚಿಗೇರ ಅಂತ ಇದ್ದರೂ ಕೂಡಾ ವೀರಶೈವ ಲಿಂಗಾಯತ ಜಾತಿಗೆ ಸೇರಿರುತ್ತಾರೆ ಎಂದು ದೃಢೀಕರಿಸಿ 3 ಬಿ ಸರ್ಟಿಫಿಕೇಟ್ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಂದಾಯ ಇಲಾಖೆಯಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಸವಿತಾಗೆ ನೀಡಿರುವ ಜಾತಿ ಆದಾಯ ಪ್ರಮಾಣ ಪತ್ರವೇ ಸಾಕ್ಷಿಯಾಗಿ ನಿಂತಿದೆ.
ಯಾರಾದರೂ ಕೊಟ್ಟಿ ಜಾತಿ ಪ್ರಮಾಣಪತ್ರ ಪಡೆದರೆ ಶಿಕ್ಷೆ-ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಆದರೆ ಇಲ್ಲಿ ಅಧಿಕಾರಿಗಳು ಮಾಡಿದ ತಪ್ಪಿಗೆ ಸವಿತಾ ಮಿಶ್ರಿಕೋಟಿ ಅವರು ದಂಡ ತೆರುವಂತಾಗಿದೆ. 2013ರಲ್ಲಿ ಕಂದಾಯ ಇಲಾಖೆಯಿಂದಲೇ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದ ಇವರು 2020ರಲ್ಲಿ ವೀರಶೈವ ಲಿಂಗಾಯತ ಹೇಗಾದರು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಿದೆ.
ಅಧಿಕಾರಿಗಳು ಮಾಡಿದ ತಪ್ಪಿನಿಂದ ನಾವು ಕಚೇರಿಗೆ ಅಲೆಯುವಂತಾಗಿದೆ. ಮಾಡಿದ ತಪ್ಪು ಸರಿ ಪಡಿಸಿಕೊಡಬೇಕಾದ ಅಧಿಕಾರಿಗಳು ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಿ ಆ ಸರ್ಟಿಫಿಕೇಟ್ ತನ್ನಿ ಈ ಸರ್ಟಿಫಿಕೇಟ್ ತನ್ನಿ ಎಂದು ಅಲೆದಾಡಿಸುತ್ತಿದ್ದಾರೆ. ತಹಶೀಲ್ದಾರ್ ಕಚೇರಿ ಎದುರು ಧರಣಿ ಮಾಡುವೆ.
-ಸವಿತಾ ಮಿಶ್ರಿಕೋಟಿ
ಅಭ್ಯರ್ಥಿಯಿಂದ ಹೊಸದಾಗಿ ಅರ್ಜಿ ಪಡೆದು, ನಜರ್ ಚೂಕಿನಿಂದಾದ ತಪ್ಪನ್ನು ಆದಷ್ಟು ಬೇಗ ಸರಿಪಡಿಸಿಕೊಡಲಾಗುವುದು.
-ವಿ.ವಿ.ಕುಲಕರ್ಣಿ, ಉಪ ತಹಶೀಲ್ದಾರ್.
– ಸದಾಶಿವ ಹಿರೇಮಠ