Advertisement

ಸಾಗರ ಕವಚ ಕಾರ್ಯಾಚರಣೆ ಯಶಸ್ವಿ

03:14 PM Nov 23, 2017 | |

ಕಾರವಾರ: ಸಾಗರ ಮಾರ್ಗ ಹಾಗೂ ಪಕ್ಕದ ರಾಜ್ಯದಿಂದ ದುಷ್ಕರ್ಮಿಗಳು ಜಿಲ್ಲೆಯೊಳಗೆ ನುಸುಳದಂತೆ ಕಟ್ಟೆಚ್ಚರ ವಹಿಸುವ ಸಾಗರ
ಕವಚ ಹೆಸರಿನ ಕಾರ್ಯಾಚರಣೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಇಡಲು ಯತ್ನಿಸಿದ ಇಬ್ಬರನ್ನು ನಗರಠಾಣೆ ಪಿಎಸ್‌ಐ
ನವೀನ್‌ ನಾಯ್ಕ ನೇತೃತ್ವದ ತಂಡ ಬುಧವಾರ ಮಧ್ಯಾಹ್ನ ಬಂಧಿಸಿತು.

Advertisement

ಈ ಮೂಲಕ ಜಿಲ್ಲೆಯ ಕರಾವಳಿ ಭಾಗದಲ್ಲಿ ಹಮ್ಮಿಕೊಳ್ಳಲಾಗಿರುವ ಸಾಗರ ಕವಚ ಅಣಕು ಕಾರ್ಯಾಚರಣೆ ಯಶಸ್ವಿಯಾಗಿ
ಮುಕ್ತಾಯವಾಯಿತು. ಬಂಧಿ ತ ಸಿಬ್ಬಂದಿ ಕೋಸ್ಟ್‌ಗಾರ್ಡ್‌ನಲ್ಲಿ ನಾವಿಕ ವೃತ್ತಿ ಮಾಡುವ ಜಿ. ಡೆನಿಯಲ್‌ ರಾಜಕುಮಾರ್‌ ಹಾಗೂ ಎಲ್‌.ಕೆ.ಯಾದವ್‌ ಎಂದು ನಗರಠಾಣೆ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ಇಲಾಖೆ, ಕರಾವಳಿ ಕಾವಲು ಪೊಲೀಸ್‌ ಪಡೆ, ತಟರಕ್ಷಕ ಪಡೆ ಹಾಗೂ ರೆಡ್‌ ಫೋರ್ಸ್‌ ಸಹಕಾರದಲ್ಲಿ ಕಟ್ಟೆಚ್ಚರದ
ಕಾರ್ಯಾಚರಣೆ ನಡೆಯಿತು. ನ.21ರಂದು ಬೆಳಗ್ಗೆ 6ರಿಂದ 22ರ ಸಂಜೆ 6 ರವರೆಗೆ ನಡೆದ ಕಾರ್ಯಾಚರಣೆ ಯಶಸ್ವಿಯಾಯಿತು.
ಅನುಮಾನಾಸ್ಪದ ವ್ಯಕ್ತಿಗಳ ಚಲನೆ ಹಾಗೂ ಸಮಾಜಘಾತುಕ ಚಟುವಟಿಕೆಗಳನ್ನು ಪತ್ತೆ ಮಾಡುವ ಕಾರ್ಯಾಚರಣೆ ಸಾಗರ
ಕವಚ ವರ್ಷದಲ್ಲಿ ಎರಡು ಸಲ ನಡೆಸುತ್ತಾ ಬರಲಾಗುತ್ತಿದೆ.

ಜಿಲ್ಲಾ ಕೇಂದ್ರ ಕಾರವಾರ ಸಮೀಪ ಐಎನ್‌ಎಸ್‌ ಕದಂಬ, ಕೈಗಾ ಅಣುಸ್ಥಾವರ, ಸುಪಾ, ಕದ್ರಾ, ಕೊಡಸಳ್ಳಿ ಅಣೆಕಟ್ಟು, ಕಾಳಿ
ಸೇತುವೆಯಂತಹ ಸೂಕ್ಷ್ಮ ಪ್ರದೇಶಗಳಿದ್ದು, ಇವುಗಳ ಸುರಕ್ಷತೆ ದೃಷ್ಟಿಯಿಂದ ಈ ಕಾರ್ಯಾಚರಣೆ ಮಹತ್ವದ್ದಾಗಿದೆ. ಭದ್ರತಾ
ವ್ಯವಸ್ಥೆಯನ್ನು ಪ್ರತಿವರ್ಷ ಪರಿಶೀಲಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು. ಎಲ್ಲೆಡೆ ಪೊಲೀಸ್‌ ಕಾವಲು:
ಸಾಗರ ಕವಚ ಕಾರ್ಯಾಚರಣೆಯಲ್ಲಿ ದುಷ್ಕರ್ಮಿಗಳು ಜಿಲ್ಲೆಯ ಗಡಿ ಪ್ರವೇಶಿಸಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಸಮುದ್ರ ದಂಡೆ, ರಾಷ್ಟ್ರೀಯ ಹೆದ್ದಾರಿ ಮತ್ತು ಅರಣ್ಯ ಹಾಗೂ ನಗರ, ಪಟ್ಟಣಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಪೊಲೀಸ್‌  ಕಾವಲು ಬಿಗಿಗೊಳಿಸಲಾಗಿತ್ತು. ವಾಹನಗಳನ್ನು ಹಾಗೂ ಅತ್ತಿಂದಿತ್ತ  ಪ್ರಯಾಣಿಸುವ ಜನರ ಬ್ಯಾಗ್‌, ಲಗೇಜ್‌ ಗಳನ್ನು ತಪಾಸಣೆ ಮಾಡಲಾಯಿತು. ಪೊಲೀಸ್‌ ಇಲಾಖೆಯ ಬಾಂಬ್‌ ನಿಷ್ಕ್ರಿಯ ದಳದವರನ್ನು ಜಾಗೃತಾವಸ್ಥೆಯಲ್ಲಿ
ಇಡಲಾಗಿತ್ತು.

ಗಡಿಯಲ್ಲಿ ತೀವ್ರ ತಪಾಸಣೆ:
ಜಿಲ್ಲೆಯ ಕಾರವಾರದಿಂದ ಭಟ್ಕಳದ ವರೆಗಿನ ಎರಡೂ ಗಡಿಯಲ್ಲಿ ವಾಹನ ತಪಾಸಣೆ ಜೋರಾಗಿತ್ತು. ಗೋವಾ ಗಡಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಹಾದು ಬರುವ ಪ್ರತಿಯೊಂದು ವಾಹನಗಳನ್ನು ಪೊಲೀಸರು ಹಾಗೂ ಸಂಚಾರಿ ಪೊಲೀಸರು ನಿಲ್ಲಿಸಿ ತಪಾಸಣೆ
ನಡೆಸುವ ದೃಶ್ಯ ಕಂಡು ಬಂತು.

Advertisement

ಸಮುದ್ರದಲ್ಲಿ ಕೋಸ್ಟ್‌ ಗಾರ್ಡ್‌ನ ಗಸ್ತು:
ಸಮುದ್ರ ಮಾರ್ಗವಾಗಿ ದುಷ್ಕರ್ಮಿಗಳು ಒಳ ಪ್ರವೇಶಿಸದಂತೆ, ಕೋಸ್ಟ್‌ ಗಾರ್ಡ್‌ ಹಾಗೂ ಕರಾವಳಿ ಕಾವಲು ಪೊಲೀಸ್‌
ಪಡೆಯ ಬೋಟುಗಳು ಗಸ್ತು ತಿರುಗಿದವು. ಗೋವಾ ಗಡಿಯಿಂದ ಭಟ್ಕಳದ ವರೆಗೆ ಹಗಲು-ರಾತ್ರಿ ಗಸ್ತು ತಿರುಗಿ ಬಿಗಿ ಕಾವಲು
ಏರ್ಪಡಿಸಲಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next