Advertisement
ಕಾವೇರಿ ಮತ್ತು ಕಬಿನಿ ನಾಲಾ ನಿಗಮಕ್ಕೆ ಸೇರಿದ ಕೊಂಗಳಕೆರೆ ಸುಮಾರು 75 ಎಕರೆ ಪ್ರದೇಶದಷ್ಟು ಬೃಹತ್ತಾದ ಕೆರೆಯಲ್ಲಿ ಆಳೆತ್ತರಕ್ಕೆ ಗಿಡ-ಗಂಟಿಗಳು ಬೆಳೆದು ನಿಂತಿವೆ. ನಗರದ ವಿವಿಧ ಬಡಾವಣೆಗಳಲ್ಲಿ ಬಳಸಿ ಹೊರ ಬಿಡುವ ಕೊಳಚೆ ನೀರು ಒಳಚರಂಡಿ ಹಾಗೂ ಚರಂಡಿ ಕೊಳಚೆಯ ನೀರು ಕೆರೆಗೆ ಹರಿದು ಹೋಗುತ್ತಿದೆ.
Related Articles
Advertisement
ಸರ್ವೆ ಇಲಾಖೆ: ಕೆರೆಯನ್ನು ಅಳತೆ ಮಾಡಿದ ಸರ್ವೆ ಇಲಾಖೆ ಅಧಿಕಾರಿಗಳು ಸುಮಾರು 11 ಎಕರೆಯಷ್ಟು ಪ್ರದೇಶ ಸ್ಮಶಾನಗಳಿಗೆ ಮತ್ತು ಉಳಿದಂತೆ ದಿನನಿತ್ಯ ಅಕ್ರಮ ಒತ್ತುವರಿ ದಂಧೆ ಹೆಚ್ಚಾಗಿಯೇ ನಡೆಯುತ್ತಿದೆ ಎಂದು ಸರ್ವೆ ಇಲಾಖೆಯಲ್ಲಿ ದೂರು ದಾಖಲಾಗಿದೆ.
ಕಳೆದ 8 ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಧುಕರ್ ಶೆಟ್ಟಿ ಅವರ ಅವಧಿಯಲ್ಲಿ ಅಕ್ರಮ ಒತ್ತುವರಿ ತೆರವು ಮಾಡುವಂತೆ ಸರ್ವೆ ಇಲಾಖೆ ವತಿಯಿಂದ ಸಂಪೂರ್ಣ ಸರ್ವೆ ಕಾರ್ಯ ನಡೆಸಿ ಕೆರೆ ಎಲ್ಲೆ ಗುರುತು ಮಾಡಿದರೂ ಕೆಲವರು ಎಲ್ಲೆ ಮೀರಿ ಅಕ್ರಮ ಒತ್ತುವರಿಗೆ ಮುಂದಾಗಿದ್ದಾರೆ.
ನೀಲಿನಕ್ಷೆ: ಕಳೆದ 2004ರಲ್ಲಿ ಕ್ಷೇತ್ರದ ಶಾಸಕರಾಗಿದ್ದ ಎಸ್.ಬಾಲರಾಜ್ ಅವರು ಕೊಂಗರಕೆರೆ ಅಭಿವೃದ್ಧಿ ಮಾಡುವ ಸಲುವಾಗಿ ಬೃಹತ್ತಾದ ಕೆರೆಯ ಸ್ಥಳದಲ್ಲಿ ಬಸ್ ನಿಲ್ದಾಣ, ಸ್ವಿಮ್ಮಿಂಗ್‌ಪೂಲ್, ವಾಕಿಂಗ್ ಪಾರ್ಕ್, ಸರ್ಕಾರಿ ನೌಕರರ ವಸತಿ ಗೃಹ, ವಾಣಿಜ್ಯ ಸಂಕೀರ್ಣ ಸೇರಿದಂತೆ ವಿವಿಧ ಅಭಿವೃದ್ಧಿಗೆ ನೀಲಿನಕ್ಷೆಯೊಂದನ್ನು ತಯಾರಿಸಿ ಅಭಿವೃದ್ಧಿಗೆ ಮುಂದಾಗುತ್ತಿದ್ದಂತೆ, ಸರ್ವೋಚ್ಚ ನ್ಯಾಯಾಲಯ ಯಾವುದೇ ಕೆರೆ, ಕಟ್ಟೆ, ಗೋಮಾಳ ಒತ್ತುವರಿ ಮಾಡಬಾರದು ಮತ್ತು ಅಂತರ್ಜಲ ಹೆಚ್ಚಿಸಬೇಕೆಂದು ಮಹತ್ವದ ಆದೇಶವೊಂದನ್ನು ಪ್ರಕಟಿಸುತ್ತಿದ್ದಂತೆ ಕೆರೆ ಅಭಿವೃದ್ಧಿ ಕುಂಠಿತವಾಯಿತು.
ಕಳೆದ 2010ರಲ್ಲಿ ಕೊಳ್ಳೇಗಾಲ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಜಿ.ಎನ್.ನಂಜುಂಡಸ್ವಾಮಿ ಆಯ್ಕೆಗೊಂಡು ಕೆರೆಯ ಅಭಿವೃದ್ಧಿಗೆ ಪ್ರಯತ್ನಿಸಿದರೂ ನ್ಯಾಯಾಲಯದ ಆದೇಶದಿಂದ ಶಾಸಕರು ಅಭಿವೃದ್ಧಿ ಮಾಡದೆ ಹಿಂಜರಿದ ಕಾರಣ ಕೆರೆ ಅಭಿವೃದ್ಧಿಗೆ ಮರೀಚಿಕೆಯಾಯಿತು.
ನೀರು: ಬೃಹತ್ತಾದ ಕೆರೆಗೆ ಕಬಿನಿ ನಾಲೆಯಿಂದ ನೀರು ಹರಿದು ಬಂದು ಕೆರೆಯಲ್ಲಿ ಶೇಖರಣೆಗೊಂಡು ಮುಡಿಗುಂಡ, ಹಂಪಾಪುರ, ಮೋಳೆ, ಅಣಗಳ್ಳಿ ಸೇರಿ ಹಲವಾರು ಗ್ರಾಮಗಳಲ್ಲಿರುವ ಸಾವಿರಾರು ಎಕರೆ ಜಮೀನುಗಳಿಗೆ ಈ ಕೆರೆಯಿಂದಲೇ ನೀರು ಪೂರೈಕೆಯಾಗುತ್ತಿತ್ತು. ಕೆರೆಯಲ್ಲಿ ಹೂಳೆತ್ತದೆ ನನೆಗುದಿಗೆ ಬಿದ್ದಿರುವುದರಿಂದ ಮಳೆಗಾಲದಲ್ಲಿ ಹೆಚ್ಚು ನೀರು ಶೇಖರಣೆಯಾಗಲು ತೊಂದರೆಯಾಗಿದೆ. ರೈತರಿಗೆ ಈ ಹಿಂದೆ ಸಿಗುತ್ತಿದ್ದಷ್ಟು ನೀರು ಕೆರೆಯಿಂದ ಲಭ್ಯವಿಲ್ಲದೆ ರೈತರು ಹಲವಾರು ಬೆಳೆ ಬೆಳೆಯಲು ಹೋಗಿ ಕೈಸುಟ್ಟಿ ಕೊಂಡ ಹಲವಾರು ನಿದರ್ಶನಗಳಿವೆ.
7 ಕೋಟಿ ರೂ.ಗೆ ಪ್ರಸ್ತಾವನೆ: ಕೊಳ್ಳೇಗಾಲ ನಗರದ ಕೊಂಗಳಕೆರೆ, ತಟ್ಟೆಕೆರೆ, ಚಿಕ್ಕರಂಗನಾಥಕೆರೆ ಹೂಳೆತ್ತಿ ಅಭಿವೃದ್ಧಿ ಮಾಡಲು ಸುಮಾರು 7 ಕೋಟಿ ರೂ. ಅಂದಾಜಿನಲ್ಲಿ ಪ್ರಸ್ತಾವನೆಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ರಿಗೆ ಸಲ್ಲಿಸಲಾಗಿದೆ. ಅನುದಾನ ಮಂಜೂರಾಗುತ್ತಿದ್ದಂತೆ ಅಭಿವೃದ್ಧಿಗೆ ಚಾಲನೆ ನೀಡಲಾಗುವುದೆಂದು ಶಾಸಕ ಎನ್.ಮಹೇಶ್ ಪ್ರತಿಕ್ರಿಯಿಸಿದ್ದಾರೆ.
ಕೊಂಗರಕೆರೆ, ಮುಡಿಗುಂಡ ಕೆರೆ, ಚಿಕ್ಕರಂಗನಾಥಕೆರೆ ಹೂಳೆತ್ತಿ ಅಭಿವೃದ್ಧಿ ಮಾಡುವ ಸಲುವಾಗಿ ಸುಮಾರು 2ಕೋಟಿ ರೂ. ಅಂದಾಜಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಮಂಜೂರಾತಿ ನೀಡುತ್ತಿದ್ದಂತೆ ಡಿಪಿಆರ್ ಮಾಡಿ ಅಭಿವೃದ್ಧಿ ಮಾಡಲಾಗುವುದು.-ರಘು, ಕಾವೇರಿ ಮತ್ತು ಕಬಿನಿ ನಾಲಾ ವಿಭಾಗ ನಿಗಮದ ಕಾರ್ಯಪಾಲಕ ಅಭಿಯಂತರ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ರಾಜಕಾರಣಿಗಳ ಬೆಂಬಲಿಗರು ಅಕ್ರಮ ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವಿಗೆ ಮುಂದಾಗಿದ್ದ ಜಿಲ್ಲಾಧಿಕಾರಿ ಹರ್ಷಗುಪ್ತ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿಸಿದ್ದರು. ಅಧಿಕಾರಿಗಳು ಕೂಡಲೇ ಅಕ್ರಮ ಒತ್ತುವರಿ ತೆರವು ಮಾಡಬೇಕಿದೆ.
-ನಟರಾಜ, ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ * ಡಿ.ನಟರಾಜು