Advertisement

ವಚನ ಬೆಳಕಿಗೆ ತಂದಿದ್ದು ಹಳಕಟ್ಟಿ: ಡಾ|ಮದಭಾವಿ

12:18 PM Jul 12, 2017 | Team Udayavani |

ಕಲಬುರಗಿ: ಡಾ| ಫ.ಗು. ಹಳಕಟ್ಟಿ ವಚನ ಸಾಹಿತ್ಯದ ಕಟ್ಟುಗಳನ್ನು ಬೆಳಕಿಗೆ ತರದಿದ್ದರೆ, ವಚನ ಸಾಹಿತ್ಯದ ಬೆಳಕು ನಮ್ಮಿಂದ
ದೂರವಾಗುತ್ತಿತ್ತು. ಪ್ರಪಂಚಕ್ಕೆ ಜ್ಞಾನದ ಕಿರಣಗಳನ್ನು ಬೀರಿದ ವಚನ ಸಾಹಿತ್ಯ ಕತ್ತಲೆಯಲ್ಲಿರುತ್ತಿತ್ತು. ಹಳಕಟ್ಟಿ ಶ್ರಮ
ವರ್ಣನಾತೀತವಾಗಿದೆ ಎಂದು ವಿಜಯಪುರದ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ| ಎಂ.ಎಸ್‌. ಮದಭಾವಿ ಹೇಳಿದರು.

Advertisement

ನಗರದ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಪ್ರಾಂಗಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ
ಸಮಾರಂಭದಲ್ಲಿ ಸಾಧಕರಿಗೆ ವಚನಪಿತಾಮಹ ಡಾ| ಫ.ಗು.ಹಳಕಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ, ಸ್ವಾರ್ಥವ ಸುಟ್ಟು, ವಚನ ವಾಜ್ಞೆ ರಕ್ಷಣೆಗಾಗಿ ಪಣತೊಟ್ಟು, ವಚನಗಳನ್ನು ಹುಡುಕಿ ಮುದ್ರಿಸದಿದ್ದರೆ, ನಾವೆಲ್ಲ ಇನ್ನೂ ನಿದ್ರಿಸುತ್ತಲೇ ಇರಬೇಕಾಗುತ್ತಿತ್ತು. ವಿಶ್ವಮಟ್ಟದಲ್ಲಿ ವಚನ ಸಾಹಿತ್ಯ ಇಂದು ಬೆಳಗುತ್ತಿದೆ ಎಂದರೆ ಅದು ಫ.ಗು.ಹಳಕಟ್ಟಿ ಅವರ ಬೆವರಿನ ಫಲ ಎನ್ನಲೇಬೇಕಾಗುತ್ತದೆ ಎಂದರು. ಅಪ್ಪಟ ಸಾಂಸ್ಕೃತಿಕ ಪರಂಪರೆಯ ಉಡುಪಿನಲ್ಲಿರುವ
ಹಳಕಟ್ಟಿ ಅವರು ವಕೀಲರಾಗಿದ್ದರೂ ಹಣ ಸಂಪಾದನೆಗೆ ಗಮನಹರಿಸಲಿಲ್ಲ. ಬಂಧು-ಬಾಂಧವರಿಂದ ಬೇಸರದ ಭಾವ ಬಂದರೂ ಧೃತಿಗೆಡದೆ ದುಡಿದು ವಚನ ಸಾಹಿತ್ಯ ಕಟ್ಟಿ ದೀಪವಾಗಿ ಉರಿದು, ಬೆಳಕು ನೀಡಿದ ಜ್ಯೋತಿ ಆಗಿದ್ದಾರೆ ಎಂದು ಅವರ ಜೀವನದ
ಘಟನೆಗಳನ್ನು ವಿವರಿಸಿದರು. ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಸಾರಂಗಮಠದ ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಸ್ವಾರ್ಥಕ್ಕೆ ಸಿಲುಕಿರುವ ನಾವು ವಚನ ಸಾಹಿತ್ಯವನ್ನು ಉಚ್ಛಾರ ಮಾಡುತ್ತಾ, ಆಚಾರವಿಲ್ಲದೆ, ವೈಚಾರಿಕ ನೆಲೆಗಟ್ಟಿಲ್ಲದೆ ದಿಕ್ಕು ದೆಸೆಯಿಲ್ಲದೆ ಹರಿಯುವ ನೀರಿನಂತಾಗಿದ್ದೇವೆ. ಮಾನವನ ಮನಸ್ಸನ್ನು ಹಿಡಿದಿಟ್ಟು, ಸಮಾಜಮುಖೀ
ಕಾರ್ಯಗಳತ್ತ ನಮ್ಮನ್ನ ಕೊಂಡೊಯ್ಯುವ ಶಕ್ತಿ ವಚನ ಸಾಹಿತ್ಯಕ್ಕಿದೆ. ಆ ವಚನ ಸಾಹಿತ್ಯ ನಮ್ಮ ಮನಸ್ಸನ್ನು ಹೊಕ್ಕು ಮಾನವೀಯತೆಯನ್ನು ಉಕ್ಕಿಸಬೇಕಾಗಿದೆ ಎಂದರು.

ಅಕಾಡೆಮಿಯ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಬಸಂತಬಾಯಿ ಡಿ.ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಅಫಜಲಪುರ ಬಿಜೆಪಿ ಅಧ್ಯಕ್ಷ ಸೂರ್ಯಕಾಂತ ನಾಕೇದಾರ, ಪ್ರಗತಿಪರ ಚಿಂತಕ ಶಾಂತಪ್ಪ ಸಂಗಾವಿ, ಅಕಾಡೆಮಿಯ ಶಿವರಾಜ ಎಸ್‌.ಅಂಡಗಿ, ಪರಮೇಶ್ವರ ಶಟಕಾರ, ಎಸ್‌. ಎಂ.ಪಟ್ಟಣಕರ್‌ ವೇದಿಕೆ ಮೇಲಿದ್ದರು. 

ಆರು ಸಾಧಕರಿಗೆ ಪ್ರಶಸ್ತಿ ಪ್ರದಾನ 

ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಜನಪರ ಹೋರಾಟಗಾರ ಡಾ| ಡಿ.ಜಿ.ಸಾಗರ, ಬಸವತತ್ವ ಪ್ರಚಾರಕರಾದ ರವೀಂದ್ರ ಶಾಬಾದಿ, ಬಸವರಾಜ ಕಟ್ಟಿ, ಜಯಶ್ರೀ ಚಟ್ನಳ್ಳಿ, ಜಗದೇವಪ್ಪ ಜುಟಗಿ, ರಮೇಶ ಮಾಳಾ ಅವರಿಗೆ ಡಾ| ಫ.ಗು.ಹಳಕಟ್ಟಿ
ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next