ಹುಳಿಯಾರು: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಹ ಶಬರಿಮಲೆ ಯಾತ್ರಿಕರ ಸಂಖ್ಯೆ ಕುಸಿದಿದೆ. ಇದರಿಂದ ಟ್ಯಾಕ್ಸಿ, ಟಿಟಿ ವಾಹನಗಳ ಚಾಲಕರು, ಮಾಲೀಕರಿಗೆ ನಷ್ಟ ಉಂಟಾಗಿದೆ. ಹೌದು, ಪ್ರತಿ ವರ್ಷ ತುಮಕೂರು ಜಿಲ್ಲೆಯಿಂದ ಸಾವಿರಾರೂ ಮಂದಿ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದರು.
ಹೀಗಾಗಿ ಡಿಸೆಂಬರ್ ಮತ್ತು ಜನವರಿ ಮಾಹೆಯಲ್ಲಿ ಟ್ಯಾಕ್ಸಿಗಳಿಗೆ ಬಿಡುವಿಲ್ಲದ ಬಾಡಿಗೆ ಸಿಗುತ್ತಿತ್ತು. ಟ್ಯಾಕ್ಸಿಗಳೆಲ್ಲವೂ ಬುಕ್ ಆಗಿ ಬೇರೆ ಸ್ಥಳಗಳಿಂದ ವಾಹನಗಳನ್ನು ತರಿಸುತ್ತಿದ್ದ ನಿದರ್ಶನಗಳೂ ಇದ್ದವು. ಆದರೆ, ಮೊದಲ ಮತ್ತು ಎರಡನೇ ಅಲೆ ವೇಳೆ ಎರಡು ಬಾರಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿತ್ತು. ಆ ಬಳಿಕ ಕುಸಿದ ಪ್ರವಾಸೋದ್ಯಮ ಇನ್ನೂ ಚೇತರಿಕೆ ಕಂಡಿಲ್ಲ. ಪ್ರವಾಸೋದ್ಯಮ ನಂಬಿದವರಿಗೆ ಆತಂಕ: ಶೇ.90ರಷ್ಟು ಲಸಿಕೆ ಗುರಿ ಮುಟ್ಟಿರುವುದರಿಂದ ಈ ವರ್ಷ ಕೋವಿಡ್ ಕಾಟ ಕಡಿಮೆಯಾಗಿ ಪ್ರವಾಸೋದ್ಯಮ ಚೇತರಿಕೆ ಕಾಣುತ್ತದೆಂದು ಊಹಿಸಲಾಗಿತ್ತು. ಅಲ್ಲದೆ, ಕೋವಿಡ್ ನಿಯಮ ಸಡಿಲಿಸಿರುವುದರಿಂದ ಈ ವರ್ಷ ಗತಕಾಲದ ವೈಭವ ಮರಳಬಹುದೆಂದು ಟ್ಯಾಕ್ಸಿ ಮಾಲೀಕರು, ಚಾಲಕರು ನಿರೀಕ್ಷಿಸಿದ್ದರು.
ಆದರೆ, ಸರ್ಕಾರ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಜಾರಿ ಮಾಡಿರುವುದರಿಂದ ಮತ್ತೆ ಪ್ರವಾಸೋದ್ಯಮಕ್ಕೆ ಗ್ರಹ ಹಿಡಿದಿದೆ. ಅಲ್ಲದೆ, ಶಬರಿಮಲೆ ಯಾತ್ರೆಗೂ ಸಹ ಭಕ್ತರು ಮುಂದಾಗ ದಿರುವುದು ಪ್ರವಾಸೋದ್ಯಮವನ್ನೇ ನಂಬಿದವರಲ್ಲಿ ಆತಂಕ ಸೃಷ್ಟಿಸಿದೆ. ವಾಹನ ಚಾಲಕರು, ಮಾಲೀಕರಿಗೆ ಆರ್ಥಿಕ ನಷ್ಟ: ಶಬರಿಮಲೆ ಯಾತ್ರೆ ನೆಪದಲ್ಲಿ ತಮಿಳುನಾಡು ತೀರ್ಥ ಕ್ಷೇತ್ರಗಳ ಯಾತ್ರೆಯ ಜೊತೆಗೆ ರಾಜ್ಯದ ಪ್ರಸಿದ್ಧ ದೇವಾಲಯಗಳಿಗೂ ಭಕ್ತರು ಪ್ರವಾಸ ಮಾಡುವುದರಿಂದ ಹತ್ತದಿನೈದು ದಿನಗಳ ವರೆವಿಗೂ ವಾಹನಗಳು ಬುಕ್ ಆಗುತ್ತಿದ್ದವು. ಅಲ್ಲದೆ, ಪ್ರವಾಸಿಗರ ಆಯ್ಕೆಗೆ ತಕ್ಕಂತೆ ಟೂರಿಸ್ಟ್ ವಾಹನಗಳಾದ ಸಿಫ್ಟ್, ಟೆಂಪೋ ಟ್ರಾÂವಲರ್, ಇನೋವಾ, ಎರಿಟಿಗ, ವ್ಯಾನ್‌ಗಳು ಇಲ್ಲಿ ಸಿಗುತ್ತಿದ್ದರಿಂದ ಸುತ್ತಮುತ್ತಲ 50 ಕಿ.ಮಿ.ವ್ಯಾಪ್ತಿಯ ಬಾಡಿಗೆ ಸಿಗುತ್ತಿತ್ತು.
ಪರಿಣಾಮ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಕ್ಸಿ, ಟಿಟಿ ವಾಹನಗಳು ಬುಕ್ಕಿಂಗ್ ಆಗುತ್ತಿದ್ದವು. ಅದರಲ್ಲೂ ಹೊಸ ವಾಹನ, ಉತ್ತಮ ಚಾಲಕರನ್ನು ತಿಂಗಳ ಮೊದಲೇ ಬುಕ್ಕಿಂಗ್ ಮಾಡುತ್ತಿದ್ದರು. ಆದರೆ, ಕರ್ಫ್ಯೂಯಿಂದಾಗಿ ಈ ಬಾರಿ ಮಾಸಿಕ ಪೂಜೆ, ಪಡಿ ಪೂಜೆ ಹಾಗೂ ಜ್ಯೋತಿ ಪೂಜೆಗೆ ಕೆಲವೇ ಮಾತ್ರ ತೆರಳಿದ್ದಾರೆ. ಇದರಿಂದ ಶಬರಿಮಲೆ ಸೀಜನ್ ನೆಚ್ಚಿಕೊಂಡಿದ್ದ ವಾಹನ ಚಾಲಕರು ಮತ್ತು ಮಾಲೀಕರಿಗೆ ಭಾರಿ ಆರ್ಥಿಕ ನಷ್ಟವಾಗಿದೆ.
ವಾಹನ ನಿರ್ವಹಣೆಗೆ ಪರದಾಟ: ನಿತ್ಯ ಕನಿಷ್ಠ 400 ಬಾಟಾ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಟೂರಿಸ್ಟ್ ಡೈವರ್‌ಗಳು ಕೋವಿಡ್‌ನಿಂದ ಕೆಲಸ ಇಲ್ಲದೆ ಬರಿಗೈಯಲ್ಲಿ ಮನೆಗೆ ತೆರಳುತ್ತಿದ್ದಾರೆ. ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಮಾಡಿ, ವಾಹನ ತಂದವರು ಇದರ ಇಎಂಐ ಕಟ್ಟಲು ಪರದಾಡುತ್ತಿದ್ದಾರೆ. ಜೊತೆಗೆ ಟ್ಯಾಕ್ಸ್, ವಿಮೆ ನವೀಕರಣ, ವಾಹನ ದುರಸ್ತಿ ಸೇರಿದಂತೆ ಹಲವು ಬಗೆಯ ಖರ್ಚುಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾರೆ. ಮುಂದೇನು ಎಂಬ ಆತಂಕದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಪರಿಸ್ಥಿತಿ ಸುಧಾರಿಸದೆ ಹೋದರೆ ನೂರಾರು ಮಂದಿಯ ಬದುಕು ದುರ್ಬರವಾಗಲಿದೆ.