Advertisement

ಪ್ರಕೃತಿ ಉಳಿವಿಗೆ ಶ್ರಮಿಸುವವರ ಸಂಖ್ಯೆ ಕ್ಷೀಣ

08:11 PM Jul 19, 2021 | Nagendra Trasi |

ವಿಜಯಪುರ: ಪ್ರಕೃತಿ ಉಳಿವಿಗಾಗಿ ಶೇ.1 ರಷ್ಟು ಜನ ಮಾತ್ರ ಪ್ರಯತ್ನ ನಡೆಸಿದ್ದು, ಶೇ.99 ಜನರು ಪ್ರಕೃತಿಯ ವಿನಾಶದ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಪ್ರಕೃತಿ ರಕ್ಷಿಸಲು ಪ್ರಯತ್ನಿಸುತ್ತಿರುವ ಶೇ.1ರ ಸಂಖ್ಯೆಯನ್ನು ಶೇ.10ಕ್ಕೆ ಏರಿಸಿದರೆ ಜಗತ್ತಿನಲ್ಲಿ ಸಾಕಷ್ಟು ಆರೋಗ್ಯಕರ ಬದಲಾವಣೆಗಳಿಂದ ಪ್ರಕೃತಿ ವಿಕೋಪಗಳು ತಪ್ಪುತ್ತವೆ ಎಂದು ಈಜಿಪ್ಟ್ ನಲ್ಲಿ ನೆಲೆಸಿರುವ ಮುದ್ದೇಬಿಹಾಳ ತಾಲೂಕಿನ ಢವಳಗಿ ಮೂಲದ ಅರಣ್ಯ ಕೃಷಿ ವಿಜ್ಞಾನಿ, ಹವಾಮಾನ ತಜ್ಞ ಡಾ.ಚಂದ್ರಶೇಖರ ಬಿರಾದಾರ ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಕೋಟಿ ವೃಕ್ಷಗಳ ರೂವಾರಿ ಮಾಜಿ ಸಚಿವ ಎಂ.ಬಿ.ಪಾಟೀಲ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಪರಿಸರ ಆಸಕ್ತರ ಉಪಾಹಾರ ಕೂಟದಲ್ಲಿ ಮಾತನಾಡಿದ ಅವರು, ಪ್ರಕೃತಿ ನಾಶಮಾಡುತ್ತಿರುವುದರಿಂದ ಮಣ್ಣು, ನೀರು, ಹವಾಮಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿ
ವಿಷಮ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಮೊದಲು ನಾವು ತಿನ್ನುವ ಆಹಾರವೇ ವಿಷವಾಗಿದ್ದು ಈ ವಿಷಮ ಪರಿಸ್ಥಿತಿಯನ್ನು ಬದಲಿಸಬೇಕಿದ್ದು, ಯುವಕರಿಂದ ಮಾತ್ರ ಇದು ಸಾಧ್ಯ. ನಾನು ಜಗತ್ತಿನ 50 ರಾಷ್ಟ್ರಗಳಲ್ಲಿ ಈ ಬದಲಾವಣೆ ಪ್ರಯೋಗವನ್ನು ಮಾಡಿದ್ದೇನೆ.

ಯಶಸ್ವಿಯೂ ಆಗಿದ್ದೇನೆ. ನನ್ನ ತಾಯ್ನಾಡಿನ ನನ್ನ ಹೆಮ್ಮೆಯ ವಿಜಯಪುರ ಜಿಲ್ಲೆಯಲ್ಲಿ ಈ ಬದಲಾವಣೆ ತರುವ ಕಾರ್ಯವನ್ನು ಎಂ.ಬಿ.ಪಾಟೀಲ್‌ ರವರು ಕೋಟಿ ವೃಕ್ಷ ಅಭಿಯಾನದ ಮೂಲಕ ಯಶಸ್ವಿಯಾಗಿ ಮಾಡುತ್ತಿದ್ದು, ಭೂತನಾಳ ಎಂಬ ಬಂಜರು ಭೂಮಿಯಲ್ಲಿ ಕಲ್ಲು ಕೊರೆದು ಸಸಿ ನೆಟ್ಟು ಬೆಳೆಸಿದ್ದು ಸಣ್ಣ ಸಾಧನೆಯಲ್ಲ, ಮಹಾನ್‌ ಕ್ರಾಂತಿಕಾರಿ ಕೆಲಸ ಎಂದರು.

ಯುನೆಸ್ಕೋ ಜೀವವಿಜ್ಞಾನ ಪೀಠದ ಮುಖ್ಯಸ್ಥ ಡಾ.ಕುಶಾಲ ದಾಸ ಮಾತನಾಡಿ, ಪ್ರಕೃತಿಯ ರಕ್ಷಣೆಯ ಸಂಶೋಧನೆಗಳಲ್ಲಿ ಅಮೆರಿಕ, ಯೂರೋಪಿಯನ್‌ ರಾಷ್ಟ್ರಗಳು ಮುಂದಿದ್ದರೂ, ಆ ರಕ್ಷಣೆಯ ಕಾರ್ಯದಲ್ಲಿ ಅವರು ಮುಂದಾಗಿರುವುದು ಕಡಿಮೆ. ಏಷ್ಯಾ, ಆಫ್ರಿಕಾದ ಕಾಡಿನ ಜನರೇ ಈ ಪ್ರಕೃತಿಯ ರಕ್ಷಕರು. ಏಕೆಂದರೆ ಅವರ ಹೃದಯದಲ್ಲಿಯೇ ಪ್ರಕೃತಿ ತುಂಬಿಕೊಂಡಿರುತ್ತದೆ. ಜಾಗತೀಕ ತಾಪಮಾನ ಸೇರಿದಂತೆ ಜಗತ್ತಿನ ಹಲವು ಗಂಭೀರ ಪ್ರಾಕೃತಿಕ ಸಮಸ್ಯೆಗಳಿಗೆ ಅಮೇರಿಕಾ ಅಧ್ಯಕ್ಷರೇ ಯೂಟರ್ನ್ ತೆಗೆದುಕೊಂಡಿರುವುದು ಅವರ ದ್ವಂಧ್ವ ನೀತಿ ತೋರುತ್ತದೆ ಎಂದರು.

ಮಾಜಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಜಗತ್ತಿನ ಹಲವು ರಾಷ್ಟ್ರಗಳ ಪ್ರಯೋಗಕ್ಕೂ ಭಾರತಕ್ಕೂ ತೀವ್ರ ವ್ಯತ್ಯಾಸವಿದೆ. 130 ಕೋಟಿ ಜನಸಂಖ್ಯೆಯ ಇಲ್ಲಿನ ಪರಿಸ್ಥಿತಿಗಳಲ್ಲಿ ನಾವು ಪರಿಸರ ಅಳಿವು-ಉಳಿವು ಕುರಿತು ಮಾತನಾಡುವುದೇ ದುಸ್ತರವಾಗಿದೆ. ಅಧಿಕಾರ ನಡೆಸುವ ನಾಯಕರು, ಇಲಾಖೆ ಮುಖ್ಯಸ್ಥರು ಹೇಗೆ ಕ್ರಿಯಾಶೀಲರಾಗಿ ಕಾರ್ಯ ಮಾಡುತ್ತಾರೆಯೋ ಹಾಗೆಯೇ ಆ ಇಲಾಖೆ, ಅ ಧಿಕಾರಿಗಳು ಅದನ್ನು ಅನುಸರಿಸುತ್ತಾರೆ. ಆದರೆ ಇಲ್ಲಿನ ಸ್ಥಿತಿಗತಿಗಳು ಸರಿ ಇಲ್ಲ ಎಂದು ನಾವು ಭಾವಿಸದೇ ಆಶಾವಾದದಿಂದ ಪ್ರಯತ್ನಕ್ಕೆ ಮುಂದಾಗಬೇಕು. ಆಗ ಯಶಸ್ಸು ಖಂಡಿತ ಸಾಧ್ಯ ಎಂದರು.

Advertisement

ಕೋಟಿವೃಕ್ಷ ಅಭಿಯಾನವೇ ಇದಕ್ಕೆ ಉತ್ತಮ ಉದಾಹರಣೆ. 5 ವರ್ಷಗಳ ಹಿಂದೆ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆದ ಸಸಿಗಳನ್ನು ತೆಗೆದುಕೊಂಡು ಹೋಗುವವರು ಇರಲಿಲ್ಲ. ಇತ್ತೀಚೆಗೆ ಸಸಿಗಳನ್ನು ಹಂಚಲು ಆರಂಭಿಸಿದ 2-3 ದಿನಗಳಲ್ಲಿ ಹತ್ತಾರು ಲಕ್ಷ ಸಸಿಗಳು ಖಾಲಿಯಾಗುತ್ತಿವೆ. ಇದರಿಂದ ಜಿಲ್ಲೆಯ ಪರಿಸರದಲ್ಲಿ ಉತ್ತಮ ಬದಲಾವಣೆ ಬಂದಿದೆ. ವಿಜ್ಞಾನಿ ಚಂದ್ರಶೇಖರ ಅವರು ಜಿಲ್ಲೆಯ, ರಾಜ್ಯದ ಪರಿಸರ ಪೂರಕವಾಗಿ ನೀಡಿರುವ ಸಲಹೆಗಳನ್ನು ಕ್ರೋಢಿಕರಿಸಿ, ಆದ್ಯತೆಯ ಮೆರೆಗೆ ಅವುಗಳನ್ನು ಅನುಷ್ಠಾನಕ್ಕೆ ತರಲು ಸಂಬಂ ಧಿಸಿದ ಇಲಾಖೆಗಳ ಮುಖ್ಯಸ್ಥರ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ಅರಣ್ಯ ಇಲಾಖೆ ಅಧಿಕಾರಿಗಳಾದ ಪಿ.ಕೆ.ಪೈ, ಎನ್‌. ಕೆ.ಬಾಗಯತ, ಮಹೇಶ ಪಾಟೀಲ, ಪ್ರಭುಲಿಂಗ, ಎನ್‌.ಡಿ.ಪಾಟೀಲ ಡೋಮನಾಳ, ಶರದ ರೂಡಗಿ, ಡಾ.ಮಹಾಂತೇಶ ಬಿರಾದಾರ, ಡಾ.ಮುರುಗೇಶ ಪಟ್ಟಣಶೆಟ್ಟಿ, ಬಸವರಾಜ ಬಿರಾದಾರ, ಪರುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next