ಹಾಸನ: ಜಿಲ್ಲೆಯಲ್ಲಿ ಗುರುವಾರ ಮೂವರಲ್ಲಿ ಕೋವಿಡ್ 19 ಸೋಂಕು ಧೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 140 ಕ್ಕೇರಿದೆ.
ಹೊಳೆ ನರಸೀಪುರ ಮೂಲದವರು: ಗುರುವಾರ ಸೋಂಕು ದೃಢಪಟ್ಟಿರುವ ಮೂವರೂ ಹೊಳೆನರಸೀಪುರ ತಾಲೂಕು ಮೂಲದವರು. ಇಬ್ಬರು ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಹೊಂದಿದ್ದರೆ ಒಬ್ಬರು ತಮಿಳುನಾಡು ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ ಎಂದು ಡಿಎಚ್‌ಒ ಡಾ. ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಗುಣಮುಖರಾದ 29 ಮಂದಿ ಬಿಡುಗಡೆ: ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ 19 ಸೋಂಕಿತರಲ್ಲಿ 14 ದಿನಗಳ ಚಿಕಿತ್ಸೆಯ ಬಳಿಕ 29 ಮಂದಿ ಗುಣಮುಖರಾಗಿದ್ದು, ಅವರೆಲ್ಲರನ್ನೂ ಗುರುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಆಸ್ಪತ್ರೆಯಿಂದ ಹೊರಬರುವಾಗ 29 ಮಂದಿಯ ಮೇಲೆ ವೈದ್ಯ ಸಿಬ್ಬಂದಿ ಹೂ ಮಳೆ ಹೂ ಮಳೆಗರೆದು, ಚಪ್ಪಾಳೆ ತಟ್ಟುತ್ತಾ ಆಸ್ಪತ್ರೆಯಿಂದ ಬೀಳ್ಕೊಟ್ಟರು.
ಕೋವಿಡ್ 19 ಸೋಂಕು ಮುಕ್ತರಾಗಿ ಹೊರ ಬಂದ 29 ಮಂದಿ ತಮಗೆ ಆಸ್ಪತ್ರೆಯಲ್ಲಿ ದೊರೆತ ಚಿಕಿತ್ಸೆ ಮತ್ತು ವೈದ್ಯ ಸಿಬ್ಬಂದಿಯ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಆಸ್ಪತ್ರೆಯಿಂದ ಬಿಡುಗಡೆಯಾದ ಎಲ್ಲ 29 ಮಂದಿ ಮುಂಬೈನಿಂದ ಬಂದವರಾಗಿದ್ದು, ಅವರಲ್ಲಿ 23 ಮಂದಿ ಚನ್ನರಾಯಪಟ್ಟಣ, 6 ಮಂದಿ ಹೊಳೆನರಸೀಪುರ ತಾಲೂಕು ಮೂಲದವರು.
ಇವರೆಲ್ಲರೂ ಮೇ 12 ರಿಂದ ಮೇ 15 ರ ನಡುವೆ ಮುಂಬೈನಿಂದ ಬಂದಾಗ ಜಿಲ್ಲೆಯ ಗಡಿ ಬಾಣಾವರ ಚೆಕ್‌ಪೋಸ್ಟ್‌ನಿಂದ ನೇರವಾಗಿ ಚನ್ನರಾಯ ಪಟ್ಟಣದ ಸಾಂಸ್ಥಿಕ ಕ್ವಾರಂಟೈನ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು. ಆನಂತರ ಹಾಸನದ ಕೋವಿಡ್ 19 ಆಸ್ಪತ್ರೆಗೆ ಅವರನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ 14 ದಿನಗಳ ಚಿಕಿತ್ಸೆ ನಂತರ ಬಿಡುಗಡೆಯಾಗಿದ್ದಾರೆ.
ಗುಣಮುಖರಾದವರು 14 ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಆನಂತರ ಮತ್ತೂಮ್ಮೆ ಪರೀಕ್ಷೆಗೊಳಪಟ್ಟು ವರದಿ ನೆಗೆಟಿವ್ ಬಂದರೆ ಜನ ಸಮುದಾಯದ ಜೊತೆ ಸೇರಬಹುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು. ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಜಿಪಂ ಸಿಇಒ ಬಿ.ಎ.ಪರಮೇಶ್, ಎಡೀಸಿ ಕವಿತಾ ರಾಜಾರಾಂ ಎಎಸ್ಪಿ ನಂದಿನಿ, ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ ಕೃಷ್ಣಮೂರ್ತಿ, ಡಿಎಚ್‌ಒ ಡಾ.ಕೆ.ಎಂ. ಸತೀಶ್ ಕುಮಾರ್ ಶುಭ ಹಾರೈಸಿದರು.