Advertisement

ಜಿಲ್ಲೆಯಲ್ಲಿ ಈ ವರ್ಷ ಅಗ್ನಿ ಅವಘಡ ಪ್ರಮಾಣ ಇಳಿಕೆ

07:16 AM Jun 06, 2020 | mahesh |

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಈ ವರ್ಷ ಕಾಡ್ಗಿಚ್ಚು, ಕೃಷಿ ಪ್ರದೇಶಕ್ಕೆ ಬೆಂಕಿಯಂತಹ ಅಗ್ನಿ ಅವಘಡ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 423 ಪ್ರಕರಣಗಳಷ್ಟೇ ಸಂಭವಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸುಮಾರು 800ರಷ್ಟು ಪ್ರಕರಣಗಳಾಗಿತ್ತು. ಲಾಕ್‌ಡೌನ್‌ನಿಂದಾಗಿ ಉದ್ಯಮ, ಕೃಷಿ, ಮೀನುಗಾರಿಕೆ ಮತ್ತಿತರ ವಲಯಗಳಿಗೆ ಹೊಡೆತ ನೀಡಿದರೂ, ಕೆಲವೊಂದು ವಿಚಾರದಲ್ಲಿ ವರದಾನವಾಗಿದೆ. ಪ್ರಮುಖವಾಗಿ ಕೋವಿಡ್  ಹರಡದಂತೆ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಅಂತರ್ಜಲ ಮಟ್ಟ ಕಳೆದ ವರ್ಷಕ್ಕಿಂತ ವೃದ್ಧಿಸಿದೆ. ಪ್ರತಿ ವರ್ಷ ಅಲ್ಲಲ್ಲಿ ಸಂಭವಿಸುತ್ತಿದ್ದ ಕಾಡ್ಗಿಚ್ಚಿನಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

Advertisement

ಎಲ್ಲೆಲ್ಲಿ ಎಷ್ಟು?
ಉಡುಪಿ ಜಿಲ್ಲೆಯಲ್ಲಿ ಒಟ್ಟು 4 ಅಗ್ನಿ ಶಾಮಕ ಠಾಣೆಗಳಿದ್ದು, ಈ ವರ್ಷದ ಜನವರಿಯಿಂದ ಜೂ. 4ರ ವರೆಗೆ ಉಡುಪಿಯ ಅಗ್ನಿಶಾಮಕ ಠಾಣಾ ವ್ಯಾಪ್ತಿಯಲ್ಲಿ ಗರಿಷ್ಠ 181 ಅಗ್ನಿ ಅವಘಡ ಪ್ರಕರಣಗಳು ಸಂಭವಿಸಿದ್ದರೆ, ಕಾರ್ಕಳದಲ್ಲಿ 105, ಕುಂದಾಪುರದಲ್ಲಿ 96 ಹಾಗೂ ಮಲ್ಪೆ ಅಗ್ನಿಶಾಮಕ ಠಾಣಾ ವ್ಯಾಪ್ತಿಯಲ್ಲಿ 41 ಪ್ರಕರಣಗಳು ಘಟಿಸಿವೆ.  ಕಳೆದ 2-3 ವರ್ಷಗಳಲ್ಲಿಯೇ ಬೇಸಗೆಯಲ್ಲಿ ಸಂಭವಿಸಿದ ಅತೀ ಕಡಿಮೆ ಅಗ್ನಿ ಅವಘಡಗಳು ಈ ವರ್ಷದಲ್ಲಿಯೇ ನಡೆದಿದೆ. 2018ರ ಬೇಸಗೆಯಲ್ಲಿ 600ಕ್ಕೂ ಅಧಿಕ ಬೆಂಕಿ ಅನಾಹುತ ಸಂಭವಿಸಿದ್ದರೆ, 2019ರ ಜನವರಿಯಿಂದ ಮೇಯವರೆಗೆ 800ಕ್ಕೂ ಮಿಕ್ಕಿ ಅಗ್ನಿ ಅವಘಡಗಳು ಆಗಿವೆ. ಈ ವರ್ಷ 423 ಪ್ರಕರಣಗಳಷ್ಟೇ ನಡೆದಿವೆ.

ಕಾಡ್ಗಿಚ್ಚು ಕಡಿಮೆ
ಪ್ರತಿ ವರ್ಷ ಅಲ್ಲಲ್ಲಿ ಕಾಡಿಗೆ ಬೆಂಕಿ, ಕೃಷಿ ಪ್ರದೇಶಗಳಿಗೆ ಬೆಂಕಿ ತಗುಲಿ ಹಾನಿಯಾಗುತ್ತಿದ್ದ ಪ್ರಕರಣಗಳು ಹೆಚ್ಚುತ್ತಲೇ ಇರುತ್ತಿತ್ತು. ಬೇಸಗೆಯಲ್ಲಂತೂ ದಿನಕ್ಕೆ 4-5 ಪ್ರಕರಣಗಳು ಬೆಳಕಿಗೆ ಬರುತ್ತಿತ್ತು. ಆದರೆ ಈ ಬಾರಿ ಈ ಪ್ರಕರಣಗಳ ಸಂಖ್ಯೆಯಂತೂ ಭಾರೀ ಪ್ರಮಾಣದಲ್ಲಿ ಕಡಿಮೆಯಾದಂತಿದೆ. ಇದಲ್ಲದೆ ಕೈಗಾರಿಕಾ ಕಟ್ಟಡಗಳು, ಕೃಷಿ ಭೂಮಿ, ಗ್ಯಾರೇಜ್‌, ವಾಣಿಜ್ಯ ಕಟ್ಟಡ, ಗ್ಯಾಸ್‌ ಸೋರಿಕೆ ಸೇರಿದಂತೆ ವಿವಿಧೆಡೆ ಬೆಂಕಿ ಅನಾಹುತದಂತಹ ಪ್ರಕರಣಗಳು ವರದಿಯಾಗುತ್ತಿದ್ದವು. ಈ ಬಾರಿ ಇದು ಕೂಡ ಕಡಿಮೆಯಾಗಿದೆ.

ಲಾಕ್‌ಡೌನ್‌ ಕಾರಣ
ಲಾಕ್‌ಡೌನ್‌ ಹಾಗೂ ಜೂನ್‌ ಆರಂಭದಲ್ಲಿಯೇ ಮಳೆ ಶುರು ವಾಗಿರುವುದರಿಂದ ಈ ಬಾರಿ ಬೆಂಕಿ ಅವಘಡ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿ ಸಿದರೆ ಕಡಿಮೆ. ಕಾಡ್ಗಿಚ್ಚಿನಂತಹ ಪ್ರಕರಣ ಕೂಡ ಸಂಭವಿಸಿದ್ದು ಕಡಿಮೆ. ಮಳೆಗಾಲದಲ್ಲೂ ಎಲ್ಲ ರೀತಿಯಲ್ಲೂ ಕಾರ್ಯಾಚರಿಸಲು ನಮ್ಮ ಸಿಬಂದಿ ಸನ್ನದ್ಧರಾಗಿದ್ದಾರೆ. ಅಗತ್ಯದಷ್ಟು ಸೌಕರ್ಯಗಳು ಲಭ್ಯವಿದೆ.
– ಎಚ್‌.ಎಂ. ವಸಂತ ಕುಮಾರ್‌, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next