Advertisement

ಇ-ಪುಸ್ತಕ ಓದುಗರ ಸಂಖ್ಯೆ ದುಪ್ಪಟ್ಟು!

02:01 PM Apr 17, 2020 | mahesh |

ಬೆಂಗಳೂರು: ದೀರ್ಘಾವಧಿಯ ಲಾಕ್‌ಡೌನ್‌ ಜನರ ಸ್ವಾತಂತ್ರ್ಯ ಕಿತ್ತುಕೊಂಡಿದೆ, ಆರೋಗ್ಯ ತುರ್ತುಪರಿಸ್ಥಿತಿ ಸೃಷ್ಟಿಸಿದೆ, ವೇತನಕ್ಕೆ ಕತ್ತರಿ ಹಾಕುವ ಆತಂಕ  ಹೆಚ್ಚಿದೆ ಎನ್ನುವುದು ಸೇರಿದಂತೆ ಹಲವು ಬೇಸರಗಳ ನಡುವೆಯೂ ಸಕಾರಾತ್ಮಕ ಬೆಳವಣಿಗೆಗೆ ನಾಂದಿಹಾಡುತ್ತಿದೆ. ಅದರಲ್ಲಿ “ಇ-ಪುಸ್ತಕ’ ಓದುಗರ ವರ್ಗ ಕೂಡ ಒಂದು. ಲಾಕ್‌ಡೌನ್‌ ಜಾರಿಯಾದ ನಂತರದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಈಗ ಇ-ಪುಸ್ತಕ ಓದುಗರ ಸಂಖ್ಯೆ ಗಣನೀಯವಾಗಿ
ಏರಿಕೆಯಾಗಿದೆ. ಕೇವಲ ಹತ್ತು ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯವೊಂದರಲ್ಲೇ ಸುಮಾರು ಐದು ಸಾವಿರ ಹೊಸ ಓದುಗರು ಸೇರ್ಪಡೆಯಾಗಿದ್ದಾರೆ. ಇದಲ್ಲದೆ, ವಿವಿಧ ಪ್ರಕಾರಗಳ ಓದುಗರ ಟ್ರೆಂಡ್‌ ಸೃಷ್ಟಿಯಾಗಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಇ-ಪುಸ್ತಕ ಓದುಗರನ್ನು ಗಮನದಲ್ಲಿಟ್ಟುಕೊಂಡು “ಅಂಗೈಯಲ್ಲೇ ಓದು’ ಸೇವೆಯನ್ನು ಕಳೆದ ಫೆಬ್ರವರಿಯಲ್ಲಿ ಆರಂಭಿಸಿತ್ತು. ಡಿಜಿಟಲ್‌ ಗ್ರಂಥಾಲಯ ಆ್ಯಪ್‌ ಸೇವೆ ಮೂಲಕ ರಾಜ್ಯದ ಪ್ರತಿ ಮೂಲೆ-ಮೂಲೆಯಲ್ಲಿರುವ ಸಾಹಿತ್ಯಾಸಕ್ತರಿಗೆ ಓದುಗರಿಗೆ ಇದು ನೆರವಾಗುತ್ತಿದೆ. ರಾಜ್ಯ ಗ್ರಂಥಾಲಯ ಇಲಾಖೆ ಆರಂಭಿಸಿರುವ ಈ ಸೇವೆ ಮನೆಯಲ್ಲಿರುವ ಸಾಹಿತ್ಯಾಸಕ್ತರಿಗೆ ಸಾಕಷ್ಟು ಅನುಕೂಲವಾಗಿದೆ.

Advertisement

ಸಾರ್ವಜನಿಕ ಇ-ಗ್ರಂಥಾಲಯ ಆ್ಯಪ್‌ ಸೇವೆಯ ಮೂಲಕ ಗ್ರಂಥಾಲಯ ಇಲಾಖೆ ಕತೆ, ಕಾಂದಬರಿ, ಕವಿತೆ, ನಿಯತಕಾಲಿಕೆ, ಮಕ್ಕಳು, ಮಹಿಳೆಯರಿಗೆ
ಸಂಬಂಧಿಸಿದ ಪುಸ್ತಕಗಳು, ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಉಚಿತವಾಗಿ ಓದುಗರಿಗೆ ಒದಗಿಸಿದೆ. ಇದರ ಜತೆಗೆ ಭಾಷಾ ಪುಸ್ತಕಗಳು, ವಿಡಿಯೋಗಳು
ಕೂಡ ಈ ಆ್ಯಪ್‌ನಲ್ಲಿ ಒಂದೇ ಸೂರಿನಡಿ ದೊರೆಯುತ್ತಿವೆ. ಆ ಹಿನ್ನೆಲೆಯಲ್ಲಿ ಈಗ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಇ-ಆ್ಯಪ್‌ಗೆ ಸಾಕಷ್ಟು ಬೇಡಿಕೆ ಬಂದಿದೆ.

10 ದಿನಗಳಲ್ಲಿ 5 ಸಾವಿರ ಓದುಗರು ಸೃಷ್ಟಿ: ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಈಗ ಸುಮಾರು 12,621 ಓದುಗರನ್ನು ಹೊಂದಿದೆ. ಇದರಲ್ಲಿ
ಲಾಕ್‌ಡೌನ್‌ ಆದ ಹತ್ತು ದಿನಗಳಲ್ಲೇ ಸುಮಾರು 5 ಸಾವಿರ ಓದುಗರನ್ನು ಹೆಚ್ಚಿಸಿಕೊಂಡಿದೆ. ಮಾ. 24ರಂದು 773 ಓದುಗರು ಗ್ರಂಥಾಲಯ ಇಲಾಖೆಯ ಇ-ಆ್ಯಪ್‌ ಗೆ ಭೇಟಿ ನೀಡಿದ್ದಾರೆ. ಹಾಗೆಯೇ ಮಾ. 25ರಂದು 624, 26ರಂದು 999 ಓದುಗರು ಉದ್ದೇಶಿತ ಆ್ಯಪ್‌ನಲ್ಲಿ ಪುಸ್ತಕಗಳನ್ನು ಓದಿದ್ದಾರೆ. ಹಾಗೆಯೇ, ಮಾ. 27ರಂದು 301 ಹಾಗೂ 28ರಂದು 128 ಓದುಗರು ಈ ಸೇವೆ ಪಡೆದಿದ್ದಾರೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಪರ್ಧಾತ್ಮಕ ಪುಸ್ತಕಗಳಿಗೆ ಬೇಡಿಕೆ: ಹೊಸ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಓದಿದ್ದಾರೆ. ಓದುಗರಿಗೆ ಅನುಕೂಲವಾಗಲಿ ಎಂಬ
ಕಾರಣಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಲವು ರೀತಿಯ ಸ್ಪರ್ಧಾತ್ಮಕ ಪುಸ್ತಕಗಳನ್ನು ಇ-ಆ್ಯಪ್‌ನಲ್ಲಿ ಅಳವಡಿಕೆ ಮಾಡಿದೆ. ಆ ಹಿನ್ನೆಲೆಯಲ್ಲಿಯೇ ಅಧಿಕ
ಸಂಖ್ಯೆಯಲ್ಲಿ ಓದುಗರ ಸ್ಪರ್ಧಾತ್ಮಕ ಪುಸ್ತಕದ ಕಡೆಗೆ ಕಣ್ಣು ಹಾಯಿಸಿದ್ದಾರೆ. ಇದರ ಜತೆಗೆ ಕೊರೊನಾಕ್ಕೆ ಸಂಬಂಧಿಸಿದ ಲೇಖನಗಳ ಮತ್ತು ಪುಸ್ತಕಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳಿಗೂ ಭೇಟಿ ನೀಡಿದ್ದಾರೆ. ಅಲ್ಲದೆ, ಐಐಟಿ, ನೀಟ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಕೂಡ ಗ್ರಂಥಾಲಯ ಇಲಾಖೆ ಇ-ಆ್ಯಪ್‌ಗೆ ಅಳವಡಿಕೆ  ಮಾಡಿದೆ. ಈ ವರ್ಗದವರೂ ಆ್ಯಪ್‌ಗೆ ಭೇಟಿ ನೀಡಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಸುಮಾರು 25 ಮಂದಿ ಲೇಖಕರು ತಮ್ಮ ಹಲವು ಕೃತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಇ-ಆ್ಯಪ್‌ಗೆ ಅಳವಡಿಕೆ ಮಾಡಿಕೊಳ್ಳಲು
ಒಪ್ಪಿದ್ದಾರೆ. ಆಯಾ ಪುಸ್ತಕಗಳ ಪ್ರಕಾಶಕರು ಕೂಡ ಸಮ್ಮತಿ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಇ-ಆ್ಯಪ್‌ಗೆ
ಆಳವಡಿಕೆ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆ್ಯಪ್‌ನಲ್ಲಿವೆ 1.13 ಲಕ್ಷ ಪುಸ್ತಕ ಇ-ಆ್ಯಪ್‌ನಲ್ಲಿ ಸುಮಾರು 1.13 ಲಕ್ಷ ಪುಸ್ತಕಗಳಿವೆ. ಇವುಗಳಲ್ಲಿ ಕನ್ನಡ ಹಿರಿಯ ಸಾಹಿತಿಗಳ ಕತೆ, ಕಾದಂಬರಿ, ಕವನ ಸೇರಿದಂತೆ ಹಲವು ಪ್ರಕಾರದ ಪುಸ್ತಕಗಳಿವೆ. ಅವುಗಳ ಜತೆ ಕನ್ನಡ ನಿಯತ ಕಾಲಿಕೆಗಳು ಕೂಡ ದೊರೆಯ ಲಿವೆ. ಜತೆಗೆ ತೆಲಗು, ತಮಿಳು, ಹಿಂದಿ, ಇಂಗ್ಲಿಷ್‌ ಭಾಷೆಯ ಕೆಲವೇ ಕೆಲವು ಪುಸ್ತಕಗಳು ಆ್ಯಪ್‌ನಲ್ಲಿ ದೊರೆಯಲಿವೆ.

ಲಾಕ್‌ಡೌನ್‌ ನಂತರದ ದಿನಗಳಲ್ಲಿ ಇ-ಪುಸ್ತಕ ಓದುಗರ ಸಂಖ್ಯೆ ದುಪ್ಪಟ್ಟಾಗಿದೆ. ಕಳೆದ ಹತ್ತು ದಿನಗಳಲ್ಲಿ ಐದು ಸಾವಿರ ಹೊಸ ಓದುಗರ ಸೃಷ್ಟಿಯಾಗಿದ್ದಾರೆ. ಗ್ರಂಥಾಲಯ  ಇಲಾಖೆ ಈಗಾಗಲೇ ಸುಮಾರು ಒಂದು ಲಕ್ಷ ಪುಸ್ತಕಗಳನ್ನು ಇ-ಆ್ಯಪ್‌ಗೆ ಅಳವಡಿಕೆ ಮಾಡಿದ್ದು, ಮತ್ತಷ್ಟು ಪುಸ್ತಕಗಳನ್ನು
ಹೊರತರಲಿದೆ.
● ಡಾ. ಸತೀಶ್‌ ಕುಮಾರ್‌ ಎಸ್‌. ಹೊಸಮನಿ, ಗ್ರಂಥಾಲಯ ಇಲಾಖೆ ನಿರ್ದೇಶಕರು.

– ದೇವೇಶ್‌ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next