Advertisement

ಪ್ರತಿ ವರ್ಷ ಅಪಘಾತಕ್ಕೆ ಮೃತಪಡುವವರ ಸಂಖ್ಯೆ 500

06:49 AM Feb 05, 2019 | Team Udayavani |

ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲಾದ್ಯಂತ ಪ್ರತಿ ವರ್ಷ ಸರಾಸರಿ 350 ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಸುಮಾರು 500 ಜನರು ತಮ್ಮ ಅಮೂಲ್ಯ ಜೀವನ ಕಳೆದುಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ. ಇದನ್ನು ತಪ್ಪಿಸಲು ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲನೆಯಿಂದ ಮಾತ್ರ ಸಾಧ್ಯ ಎಂದು ಎಸ್‌ಪಿ ಎನ್‌.ಶಶಿಕುಮಾರ ಹೇಳಿದರು. ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ‘ರಸ್ತೆ ಸುರಕ್ಷೆ-ಜೀವನ ರಕ್ಷೆ’ ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸರಿ ಸುಮಾರು 4ರಿಂದ 5 ಸಾವಿರ ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇಂತಹ ಅಪಘಾತ ಪ್ರಕರಣಗಳಿಂದ ತೊಂದರೆಗೆ ಈಡಾಗುತ್ತಿದ್ದಾರೆ. ಅಪಘಾತದಲ್ಲಿ ಮೃತರಾದ ವ್ಯಕ್ತಿಯ ಕುಟುಂಬದ ಪರಿಸ್ಥಿತಿ ಶೋಚನೀಯವಾಗಿದೆ. ಇಂತಹ ಸ್ಥಿತಿಗೆ ಯಾರು ಅವಕಾಶ ನೀಡದಂತೆ ಜಾಗೃತೆಯಿಂದ ವಾಹನ ಚಾಲನೆ ಮಾಡುವ ಮೂಲಕ ನಿಮ್ಮ ಪ್ರಾಣದೊಂದಿಗೆ ಸಹ ಪ್ರಯಾಣಿಕರ ಪ್ರಾಣ ಉಳಿಸಿ ಎಂದು ಕರೆ ನೀಡಿದರು.

ಸಾರಿಗೆ ಇಲಾಖೆ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಜೆ. ಪುರುಷೋತ್ತಮ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ದೇಶದಲ್ಲಿ 4 ಲಕ್ಷ ಅಫಘಾತ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ 1 ಲಕ್ಷ ಜನ ತಮ್ಮ ಜೀವನ ಕಳೆದಕೊಳ್ಳುತ್ತಿದ್ದರೆ 2 ಲಕ್ಷ ಜನ ಗಾಯಾಳುಗಳಾಗುತ್ತಿದ್ದಾರೆ. ಅಪಘಾತಗಳಿಂದ ಸುಮಾರು 5000 ಕೋಟಿ ರೂ. ಆರ್ಥಿಕ ನಷ್ಟವಾಗುತ್ತಿದೆ. ಅಪಘಾತ ತಪ್ಪಿಸಲು ಅರಿವೆ ಮುಖ್ಯವಾಗಿದೆ. ಎಲ್ಲರು ರಸ್ತೆ ಸುರಕ್ಷತೆ ಬಗ್ಗೆ ಅರಿವು ಹೊಂದಬೇಕು ಹಾಗೂ ರಸ್ತೆ ಸಂಚಾರದ ನಿಯಮಗಳನ್ನು ಇತರರಿಗೂ ತಿಳಿಹೇಳಬೇಕು ಎಂದು ಹೇಳಿದರು.

ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್‌, ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ವಿ.ಟಿ.ಯು. ಪ್ರಾದೇಶಿಕ ಕೇಂದ್ರದ ಕೋರ್ಸ್‌ ಕೋಆರ್ಡಿನೇಟರ್‌ ಡಾ| ವಿ. ಶಂಭುಲಿಂಗಪ್ಪ, ಸಂಚಾರಿ ಪೊಲೀಸ್‌ ಠಾಣೆಯ ಪಿಎಸ್‌.ಐ. ಭಾರತಿಬಾಯಿ ಸೇರಿದಂತೆ ಆರ್‌.ಟಿ.ಓ ಕಚೇರಿಯ ಮೋಟಾರು ನಿರೀಕ್ಷಕರಾದ ಈರಣ್ಣ, ಶರಣಯ್ಯ ಸ್ವಾಮಿ, ಸುರೇಶ ಶ್ರೀಮಂಡಲ ಭಾಗವಹಿಸಿದ್ದರು. ಆರ್‌ಟಿ0 ಕಚೇರಿ ಅಧಿಧೀಕ್ಷಕ ರಿಯಾಜ್‌ ಅಹ್ಮದ್‌ ಸ್ವಾಗತಿಸಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತೆ ಸಂಬಂಧ ಕಿರುಚಿತ್ರ ಪ್ರದರ್ಶಿಸಲಾಯಿತು.

ಆಟೋ ಓಡಿಸಿದ ಎಸ್‌ಪಿ: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪ್ರದರ್ಶನಕ್ಕೆ ಇಡಲಾದ ಕೈನೆಟಿಕ್‌, ಶೀಗಲ್‌ ಕಂಪನಿಯ ವಿದ್ಯುತ್‌ ಚಾಲಿತ ಆಟೋಗಳಿಗೆ ಚಾಲನೆ ನೀಡಿದ ಎನ್‌. ಶಶಿಕುಮಾರ ನಂತರ ಆಟೋದಲ್ಲಿ ಇತರೆ ಅಧಿಕಾರಿಗಳನ್ನು ಕೂಡಿಸಿಕೊಂಡು ಸ್ವತಃ ಆಟೋ ಚಾಲನೆ ಮಾಡಿ ಎರಡು ಸುತ್ತು ಹಾಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next