ಬೆಳಗಾವಿ: ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಕಳೆದ ಮೂರು ವರ್ಷಗಳಲ್ಲಿ 2,14,160ರಷ್ಟು ಕುಸಿತವಾಗಿದೆ !
ಸ್ವತಃ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರೇ ಈ ಮಾಹಿತಿ ನೀಡಿದ್ದಾರೆ. ಇಳಿಮುಖ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಸಿ.ಟಿ. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಸಾಕಷ್ಟು ಯೋಜನೆ, ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ. ಇಷ್ಟಾಗಿಯೂ ಸರಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ರಾಜ್ಯದಲ್ಲಿ 2014-15ರಲ್ಲಿ ಒಟ್ಟು ಮಕ್ಕಳ ದಾಖಲಾತಿ 48,64,509 ಇದ್ದರೆ, 2016-17ನೇ ಸಾಲಿಗೆ 46,50,349ಕ್ಕೆ ಇಳಿದಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ 2014-15ರಲ್ಲಿ 1,94,728 ಮಕ್ಕಳು ದಾಖಲಾಗಿದ್ದರೆ, 2016ರಲ್ಲಿ 1,98,748 ಮಕ್ಕಳು ಸರಕಾರಿ ಶಾಲೆಗಳಿಗೆ ಸೇರಿದ್ದಾರೆ. ಒಟ್ಟು ಜನಸಂಖ್ಯೆ ಆಧಾರದಲ್ಲಿ ನೋಡಿದರೆ ದಾಖಲಾತಿ ಸರಾಸರಿ ಪ್ರಮಾಣ ಕಡಿಮೆ ಯಾಗಿದೆ. ಇನ್ನು ಶೈಕ್ಷಣಿಕವಾಗಿ ಹಿಂದುಳಿದಿರುವ ಬಾಗಲಕೋಟೆ ಜಿಲ್ಲೆಯಲ್ಲಿ 2014ರಲ್ಲಿ 2,26,815 ಮಂದಿ ಮಕ್ಕಳು ಸರಕಾರಿ ಶಾಲೆಗಳಿಗೆ ದಾಖ ಲಾಗಿದ್ದು, ಈಗ ಅದು 2,20,602ಕ್ಕೆ ಇಳಿದಿದೆ. ಹಾಗೆಯೇ ಶೈಕ್ಷಣಿಕವಾಗಿ ಬಹಳ ಮುಂದೆ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ 1,15,817 ಮಂದಿ ಮಕ್ಕಳು 2014ರಲ್ಲಿ ದಾಖಲಾಗಿದ್ದು, ಈಗ ಅದು 1,03,342ಕ್ಕೆ ಇಳಿದಿದೆ ಎಂದು ವಿವರಿಸಿದರು.
ಆರ್‌ಟಿಇ ರದ್ದುಗೊಳಿಸಿ: ಚರ್ಚೆಯ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್‌ನ ವೈ.ಎಸ್.ವಿ. ದತ್ತಾ, ರಾಜ್ಯದಲ್ಲಿ ಆರ್‌ಟಿಇ ನಿಯಮ ಜಾರಿಗೆ ತಂದಿರುವ ಕಾರಣದಿಂದಲೇ ಸರಕಾರಿ ಶಾಲೆಗಳಿಗೆ ದಾಖ ಲಾಗುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಆರ್‌ಟಿಇ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಸಾಮಾಜಿಕ ಕಾಳಜಿ ಇಟ್ಟುಕೊಂಡು ಆರ್‌ಟಿಇ ನಿಯಮ ಜಾರಿಗೊಳಿಸಲಾಗಿದೆ. ಆರ್‌ಇಟಿ ನಿಯಮದಡಿ ಏನಾದರೂ ಲೋಪವಿದ್ದರೆ ಅದನ್ನು ಸರಿಪಡಿಸಲಾಗುವುದೆ ಹೊರತು ರದ್ದುಗೊಳಿಸಲು ಸಾಧ್ಯವಿಲ್ಲ. ಆದರೆ, ಖಾಸಗಿ ಶಾಲೆಗಳ ಹೆಚ್ಚಳ, ಗ್ರಾಮೀಣ ಪ್ರದೇಶಗಳಿಂದ ಹೆತ್ತವರು ನಗರಕ್ಕೆ ವಲಸೆ ಹೋಗುತ್ತಿರುವುದು, ಮಕ್ಕಳ ಜನನ ಪ್ರಮಾಣ ಕಡಿಮೆಯಾಗುವುದು ಮುಂತಾದ ಕಾರಣಗಳಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಪ್ರಮಾಣ ಕಡಿಮೆಯಾಗಲು ಕಾರಣ ಹೊರತು ಆರ್‌ಟಿಇ ಕಾರಣವಲ್ಲ ಎಂದು ಸಮರ್ಥಿಸಿಕೊಂಡರು.