Advertisement

ಸಾವಿರ ಗಡಿ ದಾಟಿದ ಸಕ್ರಿಯ ಸೋಂಕಿತರ ಸಂಖ್ಯೆ

06:58 AM May 23, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರವೂ ಕೋವಿಡ್‌ 19 ಸೋಂಕು ಪ್ರಕರಣಗಳು ಶತಕದ ಗಡಿ ಮೀರಿ ದಾಖಲಾಗುತ್ತಲೇ ಇದ್ದು, ಈಗ ಸಕ್ರಿಯ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಹೊರರಾಜ್ಯದಿಂದ ಬಂದವರ ಸೋಂಕು ಪ್ರಕರಣಗಳು ಮುಂದುವರಿದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 138 ಸೋಂಕು ಪ್ರಕರಣಗಳು ದೃಢಪಟ್ಟಿವೆ. ದಾಖಲಾದ 138 ಪ್ರಕರಣಗಳಲ್ಲಿ 115 ರಲ್ಲಿ ಸೋಂಕಿತರು ಹೊರ ರಾಜ್ಯದಿಂದ ಬಂದವರು. ರಾಜ್ಯದ ಒಟ್ಟಾರೆ  ಸೋಂಕು ಪ್ರಕರಣಗಳ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ.

Advertisement

ಶುಕ್ರವಾರ ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಯಚೂರು, ಬೀದರ್‌, ತುಮ  ಕೂರು, ಹಾವೇರಿ, ಬೆಂಗಳೂರು ಗ್ರಾಮಾಂತರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ  ಮಹಾರಾಷ್ಟ್ರದ ವಿವಿಧೆ ಡೆಯಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಪೈಕಿ ಬಹುತೇಕರು ಹೊಟ್ಟೆ ಪಾಡಿಗಾಗಿ ವಲಸೆ ಹೋಗಿದ್ದವರು. ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಿಗೆ ಹೊರರಾಜ್ಯಗಳಿಂದ ಮರಳಿರುವ  ಇನ್ನಷ್ಟು ವಲಸೆ ಕಾರ್ಮಿರ ಸೋಂಕು ಪರೀಕ್ಷಾ ವರದಿ ಬರಲಿದ್ದು, ಸೋಂಕು ಪ್ರಕರಣಗಳು ಹೆಚ್ಚಳವಾಗುವ ಆತಂಕವಿದೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ದಿಗಿಲು: ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ 47 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಗೆ ದಿಗಿಲು ಬಡಿದಂತಾಗಿದೆ. ಎಲ್ಲಾ ಸೋಂಕಿತರು ಗೌರಿಬಿದನೂರಿನವರಾಗಿದ್ದು, ಮೂರು ದಿನಗಳ ಹಿಂದೆ  ಮಹಾರಾಷ್ಟ್ರದಿಂದ ಬಂದಿದ್ದರು. ಹೊರರಾಜ್ಯದಿಂದ ಬಂದ ಹಿನ್ನೆಲೆ ಕ್ವಾರಂಟೈನ್‌ ಮಾಡಿ ಎಲ್ಲರ ಗಂಟಲು ದ್ರಾವಣ ಸಂಗ್ರಹಿಸಿ ಆರೋಗ್ಯ ಪರೀಕ್ಷೆ ನಡೆಸಿದ್ದಾಗ ಸೋಂಕು ತಗುಲಿರುವುದು ಪತ್ತೆಯಾಗಿದೆ. ಒಟ್ಟಾರೆ ಜಿಲ್ಲೆಯ ವಿವಿಧ  ತಾಲೂಕುಗಳಿಗೆ 247 ಮಂದಿ ಮಹಾರಾಷ್ಟ್ರದಿಂದ ಬಂದಿದ್ದಾರೆ. ಶುಕ್ರವಾರದವರೆಗೂ 108 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದ್ದು. 47 ಪಾಸಿಟಿವ್‌ ಆಗಿದೆ. ಬಾಕಿ 139 ಮಂದಿಯ ಸೋಂಕು ಪರೀಕ್ಷಾ ವರದಿ ಬರಬೇಕಿದೆ ಎಂದು  ಆರೋಗ್ಯ ಇಲಾಖೆ ತಿಳಿಸಿದೆ.

ಹಾಸನದಲ್ಲಿ ಹೆಚ್ಚಿದ ಸೋಂಕಿತರು: ಮುಂಬೈನಿಂದ ಬಂದ ವಲಸೆ ಕಾರ್ಮಿಕರಲ್ಲಿ ಸೋಂಕು ಪ್ರಕರಣಗಳು ಮಂಡ್ಯದಲ್ಲಿ ತುಸು ಕಡಿಮೆಯಾದರೂ, ಹಾಸನದಲ್ಲಿ ಮಾತ್ರ ನಿರಂತರ ಹೆಚ್ಚಳವಾಗುತ್ತಿದೆ. ಒಂಭತ್ತು ಪುರುಷರು, ಐವರು  ಮಹಿಳೆಯರು ಸೇರಿ 14 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹಾಸನದ ವಿವಿಧೆಡೆಗೆ ಆಗಮಿಸಿರುವ ಇನ್ನಷ್ಟು ವಲಸೆ ಕಾರ್ಮಿಕರ ಸೋಂಕು ಪರೀಕ್ಷಾ ವರದಿ ಮುಂದಿನ ದಿನಗಳಲ್ಲಿ ಲಭ್ಯವಾಗಲಿವೆ. ಜಿಲ್ಲೆಯ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 80ಕ್ಕೆ ಏರಿಕೆಯಾಗಿದ್ದು, ಎಲ್ಲಾ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

23 ಸ್ಥಳೀಯ ಸೋಂಕು ಪ್ರಕರಣಗಳು: ಹೊರರಾಜ್ಯ  ದಿಂದ ಬಂದವರ ಸೋಂಕು ಪ್ರಕರಣಗಳನ್ನು ಹೊರತುಪಡಿಸಿ ಸ್ಥಳೀಯ ಸೋಂಕಿತರ ಸಂಪರ್ಕ, ಉಸಿರಾಟ ಸಮಸ್ಯೆ, ಜ್ವರ ಹಿನ್ನೆಲೆ ಹೊಂದಿರುವ 23 ಪ್ರಕರಣಗಳು ವರದಿಯಾಗಿದೆ.  ಈ ಪೈಕಿ ಬೆಂಗಳೂರಿನಲ್ಲಿ ನಾಲ್ಕು, ದಾವಣಗೆರೆ ಮತ್ತು ಬೀದರ್‌ನಲ್ಲಿ ತಲಾ ಮೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ ಹಾಗೂ ಶಿವಮೊಗ್ಗ ತಲಾ ಇಬ್ಬರು, ಹಾವೇರಿ, ಬಾಗಲಕೋಟೆ ಹಾಗೂ ಚಿತ್ರದುರ್ಗದಲ್ಲಿ ತಲಾ ಒಬ್ಬರು  ಸೋಂಕಿತರಾಗಿದ್ದಾರೆ. ಉಳಿದಂತೆ ಬೆಂಗಳೂರು, ತುಮಕೂರಿನಲ್ಲಿ ತಲಾ ಇಬ್ಬರ ಸೋಂಕಿತರ ಸಂಪರ್ಕ ಹಿನ್ನೆಲೆ ಪತ್ತೆ ಮಾಡಲಾಗುತ್ತಿದೆ.

Advertisement

26 ಮಂದಿ ಗುಣಮುಖ: ಸೋಂಕಿತರ ಪೈಕಿ ದಾವಣಗೆರೆ 7, ಬೆಂಗಳೂರು ನಗರ 6, ಕಲಬುರಗಿ 5, ವಿಜಯಪುರ 4, ಬಾಗಲಕೋಟೆ ಇಬ್ಬರು, ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಸೇರಿ ಒಟ್ಟು 26 ಮಂದಿ  ಗುಣಮುಖರಾಗಿದ್ದಾರೆ. ಒಟ್ಟಾರೆ 597 ಮಂದಿ ಗುಣಮುಖರಾದಂತಾಗಿದೆ.

ತೀವ್ರ ನಿಗಾಘಟಕದಲ್ಲಿ 19 ಮಂದಿ: ಎರಡು ವಾರಗಳ ಹಿಂದೆ ರಾಜ್ಯದಲ್ಲಿ ಸೋಂಕಿತರಿಗಿಂತ ಗುಣಮುಖದಾದವರ ಸಂಖ್ಯೆ ಹೆಚ್ಚಿತ್ತು. ಆದರೆ, ವಾರದಿಂದ ಸೋಂಕಿತ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮೂರು ದಿನ ಶತಕ ಗಡಿ ದಾಟಿವೆ.  ಸದ್ಯ ರಾಜ್ಯದ 1,743 ಸೋಂಕು ಪ್ರಕರಣಗಳಲ್ಲಿ 597 ಮಂದಿ ಗುಣಮುಖರಾಗಿದ್ದು, 42 ಮಂದಿ ಸಾವಿಗೀಡಾಗಿದ್ದಾರೆ. ಬಾಕಿ 1,104 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 19 ಮಂದಿ ತೀವ್ರ ನಿಗಾಘಟಕದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next