Advertisement

ಮಾಲೀಕರಿಗೆ ಪಾಲಿಕೆ ನೋಟಿಸ್‌ ನೀಡಿತ್ತು!

12:00 PM Oct 17, 2017 | Team Udayavani |

ಬೆಂಗಳೂರು: ಈಜಿಪುರದಲ್ಲಿ ಸೋಮವಾರ ಸಿಲಿಂಡರ್‌ ಸ್ಫೋಟ ಪ್ರಕರಣ ಸಂಭವಿಸಿದ ಕಟ್ಟಡ ಸೇರಿ ಅಕ್ಕಪಕ್ಕದ ಶಿಥಿಲಗೊಂಡಿದ್ದ ಕಟ್ಟಡಗಳ ತೆರವಿಗೆ ಬಿಬಿಎಂಪಿ ಹಿಂದೆಯೇ ನೋಟಿಸ್‌ ನೀಡಿತ್ತು. ಸಿಲಿಂಡರ್‌ ಸ್ಫೋಟದಿಂದ ಈಗ ಕುಸಿದಿರುವ ಕಟ್ಟಡದ ಮಾಲೀಕರಿಗೂ ಅಧಿಕಾರಿಗಳು ನೋಟಿಸ್‌ ನೀಡಿ, ಮನೆಯಲ್ಲಿ ಯಾರೂ ವಾಸಿಸದಂಥೆ ಹಾಗೂ ಆದಷ್ಟು ಬೇಗ ತೆರವುಗೊಳಿಸುವಂತೆ ತಿಳಿಸಿದ್ದರು.

Advertisement

ಆದರೆ, ಮಾಲೀಕ ಕಟ್ಟಡ ತೆರವು ಮಾಡಿರಲಿಲ್ಲ, ಅಲ್ಲದೆ ಮನೆಯನ್ನು ಬಾಡಿಗೆಗೆ ನೀಡಿದ್ದರು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಜಿಪುರದ ಹಲವಾರು ಮನೆಗಳು ಶಿಥಿಲಗೊಂಡಿದ್ದು, ಆ ಹಿನ್ನೆಲೆಯಲ್ಲಿ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲದ ಕಾರಣ ಮನೆಗಳನ್ನು ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ನಗರದಲ್ಲಿನ ಪ್ರತಿಯೊಂದು ವಾರ್ಡ್‌ನಲ್ಲಿನ ಶಿಥಿಲಗೊಂಡ ಕಟ್ಟಡಗಳಿಗೆ ಪಾಲಿಕೆ ಅಧಿಕಾರಿಗಳು ನೋಟಿಸ್‌ ನೀಡುತ್ತಾರೆ. ಖಾಸಗಿ ಕಟ್ಟಡಗಳಿಗೆ ಅಧಿಕಾರಿಗಳು ಕೇವಲ ನೋಟಿಸ್‌ ನೀಡಬಹುದೇ ಹೊರತು ತೆರವುಗೊಳಿಸುವ ಅಧಿಕಾರ ಪಾಲಿಕೆಗಿಲ್ಲ ಎಂದು ತಿಳಿಸಿದರು. 

ಮಾಹಿತಿ ಕೇಳಿದ ಮೇಯರ್‌: ಸೋಮವಾರ ಈಜಿಪುರದಲ್ಲಿ ಸಿಲಿಂಡರ್‌ ಸ್ಫೋಟದಿಂದ ಕಟ್ಟಡ ಕುಸಿದ ಬೆನ್ನಲ್ಲೇ ನಗರದ 198 ವಾರ್ಡ್‌ಗಳಲ್ಲಿರುವ ಶಿಥಿಲ ಕಟ್ಟಡಗಳ ಮಾಹಿತಿ ನೀಡುವಂತೆ ಮೇಯರ್‌ ಸಂಪತ್‌ರಾಜ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಮಾತನಾಡಿದರುವ ಮೇಯರ್‌, ಬೀಳುವ ಸ್ಥಿತಿಯಲ್ಲಿರುವ ಮನೆಗಳನ್ನು ಗುರುತಿಸಿ ವರದಿ ನೀಡುವಂತೆ ಹಾಗೂ ಅಂತಹ ಮನೆಗಳನ್ನು ಖಾಲಿ ಮಾಡಲು ನೋಟಿಸ್‌ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next