Advertisement
ಅಲ್ಲಿ ಎಲ್ಲಿಯೇ ನೋಡಿ…. ನೋಡುಗನ ಕಣ್ಣಲ್ಲಿ ಕೂರೋದು ಮಹಿಳೆಯೇ. ಪ್ರತಿ ಕೆಲಸದ ಹಿಂದೆ ಸಾರಥಿಯಂತೆ ಅವಳು ಸದಾ ಬ್ಯುಸಿ. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು, ಇನ್ನಾಪಿ ಮಾರಾಟಕ್ಕೆ, ಶಾಲೆ ಫೀಸು ಕಟ್ಟಲು, ಇಮಾ ಮಾರುಕಟ್ಟೆಯಲ್ಲಿ, ಕಟ್ಟಿಗೆ ಒಡೆಯಲು, ಹೋಟೆಲ್ ನಡೆಸಲು, ಅಲ್ಲೆ ಗಲ್ಲೆಯ ಮೇಲೆ ಕೂತು ಹಣ ಎಣಿಸಿಕೊಳ್ಳಲು, ಮೀನು ಕತ್ತರಿಸಲು, ಮರಳಿ ಅಡುಗೆ ಬಡಿಸಲು, ತಂಬಾಕು ಜಗಿಯಲು, ಟಿಕೆಟ್ ಕೊಡಲು, ಟ್ರಾವೆಲ್ ಏಜೆಂಟು, ಲೋಕ್ತಾಕ ಲೇಕ್‌ನಲ್ಲಿ ದೋಣಿ ನಡೆಸುವ, ತೀರಾ ಮೀನು ಮಾರುವುದರಿಂದ ಹಿಡಿದು ಕೊನೆಗೆ ಹರತಾಳಕ್ಕೆ ರಸ್ತೆಯಲ್ಲಿ ಕೂರುವವರೆಗೂ ಅಲ್ಲಿ ಕಾಣುವುದು ಬರೀ ಮಹಿಳೆಯರೇ! ಅದೇನೋ ಗೊತ್ತಿಲ್ಲ, ಆ ರಾಜ್ಯ ತನ್ನೆಲ್ಲ ಹೊಣೆಯನ್ನು ಮಹಿಳೆಯ ತಲೆಮೇಲೆ ಕೂರಿಸಿಬಿಟ್ಟಿದೆ. ಬೆಳಗ್ಗೆ ಎದ್ದಾಗಿನಿಂದ ಸಂಜೆಯ ಐದರ ಹೊತ್ತಿಗೆ ಕಪ್ಪಡರುವ ರಸ್ತೆಯ ಸುಳಿವೇ ಇಲ್ಲದಂತೆ ಮಿಲಿಟರಿ ಆವರಿಸಿಕೊಳ್ಳುವ ಆ ಊರಿನಲ್ಲಿ ಯಾಕೆ ಹಿಂಗೆ ಹೆಂಗಸರದ್ದೇ ಸಾಮ್ರಾಜ್ಯ? ಪ್ರಶ್ನೆಗೆ ಅವರ ಇತಿಹಾಸವೇ ಉತ್ತರಿಸಬೇಕು. ಆದರೆ, ಪ್ರಸ್ತುತಕ್ಕೆ ಮಾತ್ರ ಮಾರಕವಾಗುತ್ತಿರುವ ಬೆಳವಣಿಗೆಗೂ ಅವರೇ ಉತ್ತರಿಸಿಕೊಳ್ಳಬೇಕಾದ ಜವಾಬ್ದಾರಿ, ಹೊಣೆಗಾರಿಕೆತನ ಎರಡಕ್ಕೂ ಈಡಾಗುತ್ತಿದ್ದಾರೆ.
ಪ್ರತಿ ಊರಿನಲ್ಲೂ ಕಾಯಿಪಲ್ಲೆ ಮಾರಾಟದಿಂದ ಹಿಡಿದು, ಹೆಣ ಹೊರುವವರೆಗೂ ಹೆಂಗಸರೇ ಮುಂದೆ ಪ್ರತಿ ಕೆಲಸವನ್ನೂ ತಮ್ಮದೇ ಜವಾಬ್ದಾರಿ ಎಂದುಕೊಂಡಿರುವ ಪಾರಂಪರಿಕತೆಗೆ ಹೆಗೆಲೊಡ್ಡಿರುವ ಮಹಿಳೆಯ ಈ ಗುಣದಿಂದಾಗಿ ಅಕ್ಷರಶಃ ಈಗಿನ ಪುರುಷ ವರ್ಗ ಇಲ್ಲಿ ದುಡಿಯದೇ ಕೂತುಬಿಟ್ಟಿದೆ. ಬೆಳಗೆದ್ದು ಮೀನು- ಮಾಂಸ ಮಾರಲು ಅವಳೇ ಹೋಗುತ್ತಾಳೆ, ಅಂಗಡಿ ಅವಳೇ ನಡೆಸುತ್ತಾಳೆ, ಆಸ್ಪತ್ರೆಗೆ, ಶಾಲೆಗೆ ಸರದಿಯಲಿ ನಿಲ್ಲಲು, ರೇಶನ್ ತರಲು, ಮನೆಯಲ್ಲೇ ನೇಯುವ ಇನ್ನಾಫಿಗೆ ನೂಲು ಹಾಕುವುದು, ಅದಕ್ಕೇ ಕಚ್ಚಾ ಪದಾರ್ಥದಿಂದ ಬಣ್ಣದ ದಾರ ಮಾಡಿ ಕೊಡುವ ಗೃಹ ಕೈಗಾರಿಕೆ ನಡೆಸುವುದು, ಪಂಚಾಯಿತಿಕೆ, ಮಳೆಯಲ್ಲಿ ಇದ್ದ ಚೂರು ಪಾರು ಜಮೀನಲ್ಲೂ ನೆಟ್ಟಿ ಮಾಡುವುದು, ಮೀನು ಸಾಕುವುದು, ಕೊನೆಗೆ ಊಟದ ಪಂಕ್ತಿಯಲ್ಲೂ ಅವಳೇ ಮೊದಲು… ಹೀಗೆ ಎಲ್ಲವನ್ನೂ ಮಾಡಿಕೊಳ್ಳುತ್ತಾ ಸಂಸಾರ ನಿಭಾಯಿಸುತ್ತಿರುವ ಪ್ರಮೀಳೆಯರ ನಾಡಿನಲ್ಲಿ ಹಳೆಯ ಅಭ್ಯಾಸಕ್ಕೆ ಪಕ್ಕಾಗಿ ಪುರುಷರೆಲ್ಲ ಈಗಲೂ ಹಾಗೆ ಕೂತಿದ್ದಾರೆ. ಈಗ ಯಾವ ರಾಜನೂ ಇಲ್ಲ; ಕರೆದು ಕೆಲಸ ಕೊಟ್ಟು ವಿಚಾರಿಸುವವರೂ ಇಲ್ಲ. ಗಂಡಸರು ಮಾತ್ರ ದಂಡಿಯಾಗಿದ್ದಾರೆ. ಆದರೆ, ಕೆಲಸಕ್ಕೆ ಮಾತ್ರ ಒಲ್ಲರು. ಪರಿಣಾಮ ಎರಡು ರೀತಿಯದ್ದು. ಒಂದು ಈಗಲೂ ಆಕೆ ದುಡಿಯುತ್ತಲೇ ಇದ್ದಾಳೆ. ಕೆಲಸದ ರೀತಿ ನೀತಿ ಬದಲಾಗಿದೆ, ಆದರೆ ಜವಾಬ್ದಾರಿ ಬದಲಾಗಿಲ್ಲ. ಎರಡನೆಯದ್ದು ಹೊಸ ತಲೆಮಾರಿಗೆ ಇದು ಸರಿಬರದೇ ಸಾಮಾಜಿಕ ಸ್ಥಿತಿ ಪಲ್ಲಟವಾಗುತ್ತಿದೆ.
Related Articles
Advertisement
ಆದರೆ, ಆಧುನಿಕತೆಯ ಜೊತೆಗಿನ ಕೌಟುಂಬಿಕ ಸಂಘರ್ಷದ ಮಧ್ಯದಲ್ಲಿ ಎಲ್ಲಿಯೋ ಒಂದೆಡೆಗೆ ಆಗಬೇಕಾದ ಸಂಧಿಬಿಂದು ಉದ್ಭವಾಗುತ್ತಲೇ ಇಲ್ಲ. ಹಾಗಾಗಿ, ಮಣಿಪುರ ಚೆಂದ ನಾಡಿನ ನಡುವೆಯೂ ಕೊರತೆ ಮತ್ತು ಸಾಮಾಜಿಕ ಸ್ವಾಸ್ಥದಲ್ಲಿ ವೇಗದಿಂದ ಸಾಗುತ್ತಿದೆ. ಒಂದು ಕಾಲದವರೆಗೂ ಪೂರ್ತಿ ರಾಜ್ಯ ಸಂಭಾಳಿಸಿದ ಹಳೆಯ ತಲೆಮಾರಿನ ಮಹಿಳೆಯರು, ಬರಲಿರುವ ದಿನಗಳ ಬಗ್ಗೆ ಸಹಜ ಚಿಂತಿತರು. ಆದರೆ, ಸರಿಪಡಿಸಬೇಕಾದ ಹೊಸಪೀಳಿಗೆ ಮತ್ತು ವ್ಯವಸ್ಥೆ ಎರಡೂ ನೆಟ್‌ವರ್ಕಿನಲ್ಲಿ ಬ್ಯುಸಿ.
– ಚಿತ್ರ, ಲೇಖನ: ಸಂತೋಷಕುಮಾರ್ ಮೆಹೆಂದಳೆ