Advertisement

ಇನ್ನೂ ಸಾಕಾರಗೊಳ್ಳದ ಕಾಂಞಂಗಾಡ್‌-ಕಾಣಿಯೂರು ರೈಲು ಮಾರ್ಗ

04:45 PM Jun 13, 2019 | sudhir |

ಕಾಸರಗೋಡು: ಬಹುನಿರೀಕ್ಷಿತ ಮಹತ್ವಾಕಾಂಕ್ಷೆಯ ಕಾಂಞಂಗಾಡ್‌ – ಕಾಣಿ ಯೂರು ರೈಲು ಮಾರ್ಗ ನಿರ್ಮಾಣ ಸಂಬಂಧಿಸಿ ಸಾಕಷ್ಟು ಚರ್ಚೆಗಳು, ಪ್ರಾರಂಭಿಕ ಪ್ರಕ್ರಿಯೆಗಳು ನಡೆದಿದ್ದರೂ ಈ ವರೆಗೂ ಸಾಧ್ಯವಾಗಿಲ್ಲ. ಇದೀಗ ಕಾಸರಗೋಡಿನಿಂದ ಸಂಸತ್ತಿಗೆ ಆಯ್ಕೆಯಾದ ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರು ಕೇರಳದ ಅಭಿವೃದ್ಧಿಗೆ ಮೈಲುಗಲ್ಲಾಗಿರುವ ಈ ಯೋಜನೆಯನ್ನು ಸಾಕಾರಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜನರಲ್ಲಿ ಮತ್ತೆ ಆಶಾಭಾವನೆ ಮೂಡಿದೆ.

Advertisement

ಕೇಂದ್ರ ರೈಲ್ವೇ ಸಚಿವ ಪೀಯೂಷ್‌ ಗೋಯಲ್‌ ಅವರನ್ನೂ ಭೇಟಿಯಾಗಿ ಕಾಂಞಂಗಾಡ್‌ – ಕಾಣಿಯೂರು ರೈಲು ಹಳಿ ನಿರ್ಮಾಣದ ಕುರಿತು ಒತ್ತಡ ಹೇರುವುದಾಗಿಯೂ ಅವರು ಹೇಳಿದ್ದಾರೆ. ಕಾಣಿಯೂರು ರೈಲು ಹಳಿ ನಿರ್ಮಾಣ ಯೋಜನೆಯ ಯೋಜನಾ ಅನುದಾನ ನೀಡಲು ಒಪ್ಪಿಗೆ ಸೂಚಿಸಿ ಕೇರಳ ಸರಕಾರ ಕೇಂದ್ರ ರೈಲ್ವೇ ಸಚಿವಾಲಯಕ್ಕೆ ಪತ್ರ ನೀಡಿದೆ. ಆದರೆ ರೈಲು ಹಳಿ ನಿರ್ಮಾಣಕ್ಕೆ ಅಗತ್ಯದ ಭೂಸ್ವಾಧೀನಪಡಿಸುವ ಭೂಮಿ ಬೆಲೆಯ ಅರ್ಧದಷ್ಟು ಮಾತ್ರ ನೀಡುವುದಾಗಿ ಕೇರಳ ಸರಕಾರ ಸ್ಪಷ್ಟಪಡಿಸಿದೆ.

ಭೂಸ್ವಾಧೀನಪಡಿಸುವ ಭೂಮಿಯ ಬೆಲೆಯನ್ನು ಕೇರಳ ಸರಕಾರವೇ ಪೂರ್ಣವಾಗಿ ನೀಡಬೇಕು ಎಂಬ ಕಾರಣದಿಂದ ಈ ಮಹತ್ವಾಕಾಂಕ್ಷೆ ಯೋಜನೆ ವಿಳಂಬವಾಗುತ್ತಿದೆ. ಅಲ್ಲದೆ ಭಾರತೀಯ ರೈಲ್ವೇಯೊಂದಿಗೆ ರಾಜ್ಯ ಸರಕಾರ ಸಹಿ ಹಾಕಿದ ಸಂಯುಕ್ತ ಒಪ್ಪಂದದಲ್ಲಿ ಕಾಣಿಯೂರು ಒಳಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರು ಕಾಂಞಂಗಾಡ್‌-ಕಾಣಿಯೂರು ರೈಲು ಹಳಿ ನಿರ್ಮಾಣ ಯೋಜನೆಯ ಬಗ್ಗೆ ತೀರ್ಮಾನದಲ್ಲಿ ಸ್ಪಷ್ಟತೆ ವ್ಯಕ್ತಪಡಿಸಬೇಕು. ಇಲ್ಲದಿದ್ದಲ್ಲಿ ಈ ಯೋಜನೆ ಇನ್ನೂ ವಿಳಂಬವಾಗುವ ಅಥವಾ ಯೋಜನೆ ಕೈತಪ್ಪುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕಾಂಞಂಗಾಡ್‌-ಕಾಣಿಯೂರು ರೈಲು ಹಳಿ ನಿರ್ಮಾಣದ ಕುರಿತಾಗಿ 2015ರ ಮಾರ್ಚ್‌ 31ರಂದು ಅಂತಿಮ ವರದಿ ಸಲ್ಲಿಸಲಾಗಿತ್ತು. ಈ ಬೃಹತ್‌ ಯೋಜನೆಗೆ ಸಂಬಂಧಿಸಿ 1300 ಕೋಟಿ ರೂ. ಒಟ್ಟು ವೆಚ್ಚ ಅಂದಾಜಿಸಲಾಗಿದೆ. ಇದರಲ್ಲಿ ಅರ್ಧದಷ್ಟನ್ನು ಕೇಂದ್ರ ಸರಕಾರ ಹಾಗೂ ಉಳಿದ ಅರ್ಧ ಭಾಗವನ್ನು ಕೇರಳ ಮತ್ತು ಕರ್ನಾಟಕ ಸರಕಾರಗಳು ನೀಡಬೇಕಾಗಿದೆ. ಅದರಂತೆ ಕೇರಳ ಸರಕಾರವು 325 ಕೋಟಿ ರೂ. ನೀಡಬೇಕಿದೆ. ಈ ಮೊತ್ತವನ್ನು ಕೊಡುವುದಾಗಿ ಸೂಚಿಸುವ ಒಪ್ಪಿಗೆ ಪತ್ರವನ್ನು ಕೇರಳ ಸರಕಾರ ಈಗಾಗಲೇ ನೀಡಿದೆ.

ಕೇರಳ ರಾಜ್ಯ ಸರಕಾರದಿಂದ ಭೂಸ್ವಾಧೀನ ಮೊತ್ತವನ್ನು ನೀಡುವ ಒಪ್ಪಿಗೆ ಪತ್ರ ದೊರಕಿ ರೈಲ್ವೇ ಮಂಡಳಿಯಿಂದ ಅಂಗೀಕಾರವಾದರೆ ಕಾಂಞಂಗಾಡ್‌ – ಕಾಣಿಯೂರು ರೈಲು ಹಳಿಯ ಲೊಕೇಶನ್‌ ಸಮೀಕ್ಷೆ ಶೀಘ್ರದಲ್ಲೇ ಆರಂಭಗೊಳ್ಳಬಹುದು. ಇದರಿಂದ ರೈಲು ಮಾರ್ಗ ಹಾದು ಹೋಗುವ ಭಾಗವನ್ನು ನಿಖರವಾಗಿ ಗುರುತಿಸಬಹುದಾಗಿದೆ. ಈ ಸರ್ವೇ ಕಾಣಿಯೂರು ಭಾಗಕ್ಕೆ ತಲುಪುವಾಗ ಕರ್ನಾಟಕದ ಒಪ್ಪಿಗೆ ಪತ್ರ ಲಭಿಸಲಿದೆ ಎಂದು ರೈಲ್ವೇಯ ಉನ್ನತಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಉತ್ತರದ ಕೇರಳ ಭಾಗದಿಂದ ಆರು ಗಂಟೆಯೊಳಗೆ ಬೆಂಗಳೂರಿಗೆ ತಲುಪಲು ಸಾಧ್ಯವಾಗುವ ರೈಲು ಮಾರ್ಗ ಇದಾಗಿದೆ. ಅಲ್ಲದೆ ಈ ಯೋಜನೆಯು ವಿದ್ಯುತ್‌ ಇಲಾಖೆಯ ಅಧಿಕಾರಿಯಾಗಿದ್ದ ಜೋಸ್‌ ಕೊಚ್ಚಿಕುನ್ನೇಲ್‌ ಅವರ ಆಶಯವಾಗಿತ್ತು. ರೈಲು ಮಾರ್ಗದ ದೂರ 90 ಕಿಲೋ ಮೀಟರ್‌ ಆಗಿದ್ದು, ಉಭಯ ರಾಜ್ಯಗಳ ಗಡಿ ಪ್ರದೇಶಗಳನ್ನು ಹಾದುಹೋಗಲಿದೆ.

ಕಾಂಞಂಗಾಡ್‌ನಿಂದ ಪಾಣತ್ತೂರಿಗೆ 41 ಕಿಲೋ ಮೀಟರ್‌ ದೂರವಿದೆ. ಕೇರಳ ಮತ್ತು ಕರ್ನಾಟಕ ಗಡಿ ಭಾಗದಿಂದ ಕಾಣಿಯೂರು ವರೆಗೆ 49 ಕಿಲೋ ಮೀಟರ್‌ ಅಂದರೆ ಕಾಣಿಯೂರು ಸಮೀಪದ ಎಡಮಂಗಲ ಎಂಬ ಸ್ಥಳದ ತನಕ ಈ ರೈಲು ಮಾರ್ಗವನ್ನು ಅಧ್ಯಯನ ನಡೆಸಲಾಗಿದೆ.

ಕಾಂಞಂಗಾಡಿನಿಂದ ಪಾಣತ್ತೂರಿಗೆ ಕೇವಲ 20 ನಿಮಿಷಗಳಲ್ಲಿ ತಲುಪಲು ಸಾಧ್ಯವಿದೆ. ಬಳಿಕ 20 ನಿಮಿಷಗಳಲ್ಲಿ ಕಾಣಿಯೂರಿಗೆ ತಲುಪಿ ಅಲ್ಲಿಂದ ಸುಳ್ಯಕ್ಕೆ ತೆರಳಬಹುದಾಗಿದೆ.

ಅನಂತರ ಎರಡು ಗಂಟೆಗಳ ಕಾಲ ಪ್ರಯಾಣ ನಡೆಸಿದರೆ ಹಾಸನಕ್ಕೆ ಹಾಗೂ ಅಲ್ಲಿಂದ ಈಗಾಗಲೇ ಕಾರ್ಯಾರಂಭಗೊಂಡ ಶ್ರವಣಬೆಳಗೊಳ ಮಾರ್ಗದ ಮೂಲಕ ಸಂಚರಿಸಿದರೆ ಆರು ಗಂಟೆಗಳೊಳಗೆ ಬೆಂಗಳೂರಿಗೆ ತಲುಪಬಹುದಾಗಿದೆ.

ಕೇರಳ ಮತ್ತು ಕರ್ನಾಟಕ ರಾಜ್ಯಗಳು ಒಪ್ಪಿಗೆ ಪತ್ರ ನೀಡಿದ ಬಳಿಕ ರೈಲು ಮಾರ್ಗದ ಅಂತಿಮ ರೂಪುರೇಷೆ ದಕ್ಷಿಣ ರೈಲ್ವೇಯಿಂದ ರೈಲ್ವೇ ಮಂಡಳಿಗೆ ತಲುಪಬೇಕಾಗಿದೆ. ಮಂಡಳಿಯು ಅಂಗೀಕರಿಸಿದ ರೈಲ್ವೇಯ ಪಿನ್‌ಬುಕ್‌ನಲ್ಲಿ ಈ ಯೋಜನೆಯು ಸ್ಥಾನ ಪಡೆಯಬೇಕು.

ಪ್ರದೇಶ ಸರ್ವೇ ಮುಂತಾದ ಯೋಜನೆಯನ್ನು ತಯಾರಿಸಲು ರೈಲ್ವೇ ಸಚಿವಾಲಯ ಹಸಿರು ನಿಶಾನೆ ತೋರಿಸಬೇಕು. ಭೂಮಿ ಸ್ವಾಧೀನಪಡಿಸಲು ಪ್ರಕ್ರಿಯೆ ಆರಂಭಿಸಬೇಕು. ಸ್ವಾಧೀನಪಡಿಸುವ ಭೂಮಿಯ ಮಾಲಕರಲ್ಲಿ ತಿಳಿವಳಿಕೆ ಮೂಡಿಸಲು ಪ್ರತ್ಯೇಕ ಕ್ರಿಯಾಪಡೆಯನ್ನು ರಚಿಸಬೇಕು. ಅಲ್ಲದೆ ಯೋಜನೆಗೆ ಸಂಬಂಧಿಸಿ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅನಂತರವಷ್ಟೇ ಕಾಮಗಾರಿ ಆರಂಭವಾಗಲಿದೆ.

ಸಿಎಂ ಭೇಟಿ ಮಾಡುವೆ
ಕಾಂಞಂಗಾಡ್‌-ಕಾಣಿಯೂರು ರೈಲು ಹಳಿ ಸಾಕಾರಗೊಳಿಸಲು ಪ್ರಥಮ ಆದ್ಯತೆಯಲ್ಲಿ ಕಾರ್ಯವೆಸಗುವೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿಯಾಗಿ ಕೇರಳ ಸರಕಾರದ ಈ ಮಹತ್ವದ ಯೋಜನೆಗೆ ಸಂಬಂಧಿಸಿದ ಸ್ಪಷ್ಟ ನಿಲುವಿಗೆ ಬರಲು ವಿನಂತಿಸಲಾಗುವುದು. ಕರ್ನಾಟಕ ಮುಖ್ಯಮಂತ್ರಿಯವರನ್ನು ಕಂಡು ಯೋಜನೆಯ ಅರ್ಧ ಅನುದಾನ ನೀಡಲಿರುವ ತೀರ್ಮಾನ ಕೈಗೊಳ್ಳಲು ಒತ್ತಡ ಹೇರಲಾಗುವುದು. ದಿಲ್ಲಿಯಲ್ಲಿ ರೈಲ್ವೇ ಸಚಿವ ಹಾಗೂ ರೈಲ್ವೇ ಮಂಡಳಿ ಅಧ್ಯಕ್ಷ ಮತ್ತಿತರರನ್ನು ಭೇಟಿ ಮಾಡಿ ಕಾಣಿಯೂರು ರೈಲು ಮಾರ್ಗ ಕಾರ್ಯಗತಗೊಳಿಸಲು ಕ್ರಮಕೈಗೊಳ್ಳಲಾಗುವುದು.
– ರಾಜ್‌ಮೋಹನ್‌ ಉಣ್ಣಿತ್ತಾನ್‌, ಕಾಸರಗೋಡು ಸಂಸದ

Advertisement

Udayavani is now on Telegram. Click here to join our channel and stay updated with the latest news.

Next