Advertisement

ನ್ಯಾಮತಿ ಬಂದ್‌ ಸಂಪೂರ್ಣ ಯಶಸ್ವಿ

03:58 PM Dec 02, 2018 | |

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡುವುದು, ಭತ್ತ- ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ, ರೈತರ ಸಂಪೂರ್ಣ ಸಾಲಮನ್ನಾ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮರಳು ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಶನಿವಾರ ನಡೆದ ನ್ಯಾಮತಿ ತಾಲೂಕು ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

Advertisement

ನ್ಯಾಮತಿ ತಾಲೂಕು ಬಿಜೆಪಿ ವತಿಯಿಂದ ನೀಡಿದ್ದ ಬಂದ್‌ ಕರೆ ಹಿನ್ನೆಲೆಯಲ್ಲಿ ತಾಲೂಕಿನ ನ್ಯಾಮತಿ ಪಟ್ಟಣ, ಸುರಹೊನ್ನೆ, ಸವಳಂಗ, ಚಿಲೂರು ಗ್ರಾಮಗಳಲ್ಲಿ ಚಟುವಟಿಕೆಗಳು ಸ್ಥಗಿತವಾಗಿದ್ದವು. ನ್ಯಾಮತಿ ತಾಲ್ಲೂಕು ಕೇಂದ್ರವಾದ ನ್ಯಾಮತಿ ಪಟ್ಟಣ, ಸುರಹೊನ್ನೆ, ಸವಳಂಗ, ಚಿಲೂರು ಗ್ರಾಮಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ವರ್ತಕರು, ಹೋಟೆಲ್‌ ಮಾಲೀಕರು, ಸಣ್ಣಪುಟ್ಟ ವ್ಯಾಪಾರಸ್ಥರು ಜೊತೆಗೆ ಶಾಲಾ-ಕಾಲೇಜು, ಹಣಕಾಸು ಸಂಸ್ಥೆಗಳು ತಮ್ಮ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಕಳೆದ 5 ದಿನಗಳಿಂದ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ನಮ್ಮ ಸಮಸ್ಯೆ ಆಲಿಸಲು ಈವರೆಗೆ ಜಿಲ್ಲಾಡಳಿತವಾಗಲಿ, ಸರ್ಕಾರದ ಉಸ್ತುವಾರಿ ಮಂತ್ರಿಯಾಗಲಿ ಆಗಮಿಸಲಿಲ್ಲ. ನಮ್ಮ ಜನರ ರಕ್ಷಣೆಗಾಗಿ ಅನಿವಾರ್ಯವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ನ್ಯಾಮತಿ ತಾಲೂಕನ್ನು ಸಂಪೂರ್ಣ ಬಂದ್‌ ಮಾಡಿ ಪ್ರತಿಭಟನೆ ನಡೆಸಿದೆವು ಎಂದರು.

ಹೊನ್ನಾಳಿ ತುಂಗಭದ್ರಾ ನದಿ ಪಾತ್ರದಲ್ಲಿ ಹೇರಳವಾಗಿ ಮರಳು ದೊರೆಯುತ್ತಿದ್ದರೂ ಜಿಲ್ಲಾಡಳಿತ ಮರಳಿನ ಕೃತಕ ಅಭಾವ ಸೃಷ್ಟಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದೆ. ಜನರಿಗೆ ಅನುಕೂಲ ಕಲ್ಪಿಸಲು ನದಿ ಪಾತ್ರದಿಂದ ನೇರವಾಗಿ ಜನಸಾಮಾನ್ಯರಿಗೆ ಮರಳು ನೀಡುವ ಪದ್ಧತಿ ಜಾರಿಗೆ ತರಬೇಕು ಎಂದರು.

ರಾಜ್ಯಸರ್ಕಾರ ತಮ್ಮ ಸರ್ಕಾರದ ಶಾಸಕರ ಕ್ಷೇತ್ರಗಳನ್ನು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಗಾಲ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಹಲವಾರು ಬಾರಿ ಮನವಿ ಮಾಡಿದರೂ ಈವರೆಗೆ ಸಮಸ್ಯೆ ಆಲಿಸಿಲ್ಲ ಎಂದರು. 

Advertisement

ನ್ಯಾಮತಿ ಗ್ರಾ.ಪಂ ಅಧ್ಯಕ್ಷೆ ರೇಣುಕಮ್ಮ , ಸುರಹೊನ್ನೆ ಗ್ರಾ.ಪಂ ಉಪಾಧ್ಯಕ್ಷ ಸದಾಶಿವಪ್ಪ, ಜಿ.ಪಂ ಸದಸ್ಯೆ ಉಮಾರಮೇಶ್‌, ತಾ.ಪಂ ಉಪಾಧ್ಯಕ್ಷ ಎಸ್‌.ಪಿ. ರವಿಕುಮಾರ್‌, ತಾ.ಪಂ ಸದಸ್ಯರಾದ ಸಿದ್ದಲಿಂಗಪ್ಪ, ಹನುಮಂತಪ್ಪ ಸವಳಂಗ ಗ್ರಾ.ಪಂ ಅಧ್ಯಕ್ಷ ರಮೇಶ್‌ ನಾಯ್ಕ, ಎಪಿಎಂಸಿ ನಿರ್ದೇಶಕ ಗಣೇಶ್‌ ಇದ್ದರು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಬಂದ್‌ನಿಂದ ಪಟ್ಟಣ ಬಿಕೋ ಎನ್ನುತ್ತಿತು.

Advertisement

Udayavani is now on Telegram. Click here to join our channel and stay updated with the latest news.

Next