Advertisement

ಹಲಗಲಿಯಲ್ಲಿ ರಾತ್ರಿ ಅಂತ್ಯಸಂಸ್ಕಾರ ದುಸ್ತರ

06:14 PM May 31, 2022 | Team Udayavani |

ಮುಧೋಳ: ಹಲಗಲಿ ಗ್ರಾಮದಲ್ಲಿ ರಾತ್ರಿ ವೇಳೆ ಅಂತ್ಯಸಂಸ್ಕಾರ ಮಾಡಬೇಕಾದರೆ ಪಂಜು (ಹೀಲಾಲ)ಬಳಸಬೇಕಾದ ಅನಿವಾರ್ಯತೆ ಇದೆ. ಹೌದು. ಗ್ರಾಮಕ್ಕೆ ಹೊಂದಿಕೊಂಡಿರುವ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದ ಸರಹದ್ದಿನಲ್ಲಿ ರುವ ಖಾಲಿ ಜಾಗದಲ್ಲಿ ಹಲವಾರು ವರ್ಷಗಳಿಂದ ಅಂತ್ಯಸಂಸ್ಕಾರ ನೆರವೇರಿಸುತ್ತ ಬರಲಾಗಿದ್ದು, ಇದೂವರೆಗೂ ಸ್ಮಶಾನಕ್ಕೆ ಮೂಲಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಾರ್ವ ಜನಿಕರು ರಾತ್ರಿ ವೇಳೆ ಅಂತ್ಯಸಂಸ್ಕಾರಕ್ಕೆ ತೆರಳ ಬೇಕಾದರೆ ಪರದಾಡುವಂತಾಗಿದೆ.

Advertisement

ಬೀದಿ ದೀಪ ಅಳವಡಿಕೆಗೆ ಆಕ್ಷೇಪ: ಗ್ರಾಮಕ್ಕೆ ಹೊಂದಿಕೊಂಡು ಅಂದಾಜು 300 ಮೀಟರ್‌ ದೂರದಲ್ಲಿರುವ ಸ್ಮಶಾನಕ್ಕೆ ಬೀದಿ ದೀಪ ಅಳವಡಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆ. ಆದರೆ ಬೀದಿದೀಪ ಅಳವಡಿಕೆಯಿಂದ ಕಾಡಂಚಿನ ಪ್ರಾಣಿಗಳಿಗೆ ಹಾನಿಯುಂಟಾಗುವ ಸಂಭವವೇ ಹೆಚ್ಚು. ಆದ್ದರಿಂದ ಸ್ಮಶಾನಕ್ಕೆ ಬೀದಿ ದೀಪ ಅಳವಡಿಸಲು ಅನುಮತಿ ನೀಡಲು ಸಾಧ್ಯವಾ ಗುತ್ತಿಲ್ಲ ಎಂಬುದು ಅರಣ್ಯ ಇಲಾಖೆ ವಾದ.

ಅಂತ್ಯಸಂಸ್ಕಾರಕ್ಕೆ ತೆರಳಿದ ಸಾರ್ವಜನಿಕರು ಎಷ್ಟೋ ಬಾರಿ ಹಾವು, ಚೇಳುಗಳಿಂದ ಕಚ್ಚಿಸಿಕೊಂಡ ಉದಾಹರಣೆಗಳೂ ಇವೆ. ಸ್ಮಶಾನದ ದಾರಿಗೆ ಬೀದಿದೀಪ ಅಳವಡಿಸಿಕೊಟ್ಟರೆ ಅವಶ್ಯಕತೆ ಇದ್ದಾಗ ಮಾತ್ರ ಬಳಸಿಕೊಳ್ಳುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

ಮೂಲಸೌಲಭ್ಯಕ್ಕೆ ಅಡ್ಡಿ: ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ತನ್ನದೇಯಾದ ಇತಿಹಾಸ ಹೊಂದಿರುವ ಹಲಗಲಿ ಗ್ರಾಮಸ್ಥರು ಹಲವಾರು ಶತಮಾನಗಳಿಂದ ಅರಣ್ಯದ ಅಂಚಿನಲ್ಲಿ ಜೀವನ ನಡೆಸುತ್ತ ಬಂದಿದ್ದಾರೆ. ಆದರೆ 2015ರಲ್ಲಿ ಬೀಳಗಿ ಹಾಗೂ ಮುಧೋಳ ತಾಲೂಕಿನ ಅಂದಾಜು 9 ಸಾವಿರ ಹೆಕ್ಟೇರ್‌ ಪ್ರದೇಶ ಅರಣ್ಯ ಪ್ರದೇಶವನ್ನು ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯ ಎಂದು ಸರ್ಕಾರ ಘೋಷಿಸಿತು. ಇದರಿಂದಾಗಿ ಗ್ರಾಮದಲ್ಲಿ ಸ್ಮಶಾನಕ್ಕೆ ಯಾವುದೇ ಮೂಲ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು.

ಗ್ರಾಮಸ್ಥರಿಗೆ ಬೇಸರ: ಹಲಗಲಿ ಗ್ರಾಮದಲ್ಲಿ ಬೇಡ ಜನಾಂಗವೇ ಹೆಚ್ಚಾಗಿದೆ. ಒಂದು ಬೇಟೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದ ಇಲ್ಲಿನ ಜನಾಂಗ ಚೀಂಕಾರ ರಕ್ಷಿತಾರಣ್ಯ ಘೋಷಣೆಯಾದಾಗಿನಿಂದ ಬೇಟೆಯನ್ನು ಕೈಬಿಟ್ಟು ವಿವಿಧ ಉದ್ಯೋಗದಲ್ಲಿ ತೊಡಗಿ ಜೀವನ ಕಂಡುಕೊಂಡಿದ್ದಾರೆ. ಆದರೆ ಗ್ರಾಮದ ಸ್ಮಶಾನಕ್ಕೆ ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರಿಂದ ಗ್ರಾಮಸ್ಥರಿಗೆ ಬೇಸರವುಂಟಾಗಿದೆ.

Advertisement

ನಾನು ಇತ್ತೀಚಿನ ದಿನಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ.
ವಿನೋದ ಹತ್ತಳ್ಳಿ, ತಹಶೀಲ್ದಾರ್‌ ಮುಧೋಳ

ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿ ಫಾರೆಸ್ಟ್‌ ಕನ್ಸರ್ವೆಷನ್‌ ಏರಿಯಾ ಹಾಗೂ ರಾಷ್ಟ್ರೀಯ ವನ್ಯ ಜೀವಿ ಸಂರಕ್ಷಣಾ ಮಂಡಳಿಗೆ ಅರ್ಜಿ ಸಲ್ಲಿಸಿದರೆ ಆ ನಿಯಮದ ಪ್ರಕಾರ ನಾವು ಸ್ಮಶಾನದ ದಾರಿಯಲ್ಲಿ ಬೀದಿ ದೀಪ ಅಳವಡಿಸಬಹುದು.
ಪ್ರಶಾಂತ ಸಂಕಿನಮಠ, ಡಿಎಫ್‌ಒ
ಬಾಗಲಕೋಟ

ಗ್ರಾಮದಲ್ಲಿ ಯಾರಾದರೂ ತೀರಿಕೊಂಡಾಗ ರಾತ್ರಿ ವೇಳೆ ಅಂತ್ಯಸಂಸ್ಕಾರ ಮಾಡುವುದು ದುಸ್ತರವಾಗಿದೆ. ರಾತ್ರಿ ವೇಳೆ ಸಾರ್ವಜನಿಕರು ಸ್ಮಶಾನಕ್ಕೆ ಹೋಗಬೇಕಾದರೆ ಹೀಲಾಲು ಹಚ್ಚಿಕೊಂಡು ಹೋಗಬೇಕಾದ ಅನಿವಾರ್ಯತೆ ಇದ್ದು, ನಮಗೆ ಬೀದಿ ದೀಪದ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಅನುಕೂಲವಾಗುತ್ತದೆ.
ಮುತ್ತಪ್ಪ ಜೈನಾಪುರ
ಗ್ರಾಮದ ಮುಖಂಡ

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next