Advertisement

“ಮುಂದಿನ ಚುನಾವಣೆಯಲ್ಲೂ ಕೈ ಅಧಿಕಾರಕ್ಕೆ’

12:50 PM Feb 13, 2017 | |

ಮೈಸೂರು: ತಮ್ಮ ಸರ್ಕಾರದ ಅವಧಿ ಇನ್ನು ಒಂದು ವರ್ಷ ಮೂರು ತಿಂಗಳಿದೆ. ಮುಂಬರುವ ಚುನಾವಣೆಯಲ್ಲೂ ನಾವೇ (ಕಾಂಗ್ರೆಸ್‌) ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ವಿದ್ಯಾರಣ್ಯಪುರಂನ ಬೂತಾಳೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾಮಗಾರಿ ಶಂಕುಸ್ಥಾಪನೆ ಹಾಗೂ ವಿವಿಧ ಸವಲತ್ತು ವಿತರಣಾ ಸಮಾರಂಭ  ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಲ್ಲ ಎಂದು ಕೆಲವರು ಕನಸು ಕಾಣುತ್ತಿದ್ದರು. ಈಗಾಗಲೇ ಮೂರು ವರ್ಷ 9 ತಿಂಗಳು ಪೂರೈಸಿದ್ದೇನೆ. ಮುಂದೆಯೂ ತಾನೇ ಮುಖ್ಯಮಂತ್ರಿಯಾಗಿದ್ದು, ಐದು ವರ್ಷ ಪೂರೈಸುತ್ತೇನೆ. ಕೆಲ ಶಾಸ್ತ್ರದವರು ಸಿದ್ದರಾಮಯ್ಯ ಮುಂದಿನ ಬಜೆಟ್‌ ಮಂಡಿಸುವುದಿಲ್ಲ ಎನ್ನುತ್ತಿ ದ್ದರು, ಮುಖ್ಯಮಂತ್ರಿಯಾಗಿ ಮಾರ್ಚ್‌ ಎರಡನೇ ವಾರದಲ್ಲಿ ಐದನೇ ಬಜೆಟ್‌ ಕೂಡ ತಾನೇ ಮಂಡಿಸುತ್ತೇನೆ. ಅಷ್ಟೇ ಅಲ್ಲ ಮುಂದಿನ ಎರಡು ಬಜೆಟ್‌ ಕೂಡ ತಾನೇ ಮಂಡಿಸುತ್ತೇನೆ ಎಂದರು.

ಚುನಾವಣೆ ಪೂರ್ವದಲ್ಲಿ ಜನತೆಗೆ ಕೊಟ್ಟಿದ್ದ 165 ಭರವಸೆಗಳಲ್ಲಿ 125ಕ್ಕೂ ಹೆಚ್ಚು ಭರವಸೆ ಈಡೇರಿಸುವ ಮೂಲಕ ತಮ್ಮದು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ಎಂಬುದನ್ನು ತೋರಿಸಿದ್ದೇವೆ. ಪ್ರತಿ ವರ್ಷ ಪ್ರಣಾಳಿಕೆ ಇಟ್ಟುಕೊಂಡೇ ಆಯ-ವ್ಯಯ ಸಿದ್ಧಪಡಿಸುವುದು ತನ್ನ ಪರಿಪಾಠ. ಈಡೇರಿಸಿದ ಭರವಸೆಗಳನ್ನು ಬಿಟ್ಟು ಪ್ರತಿ ವರ್ಷ ಬಜೆಟ್‌ನಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಸೇರಿಸುತ್ತಾ ಹೋಗುತ್ತೇನೆ ಎಂದು ಹೇಳಿದರು.

ಮೈಸೂರು ನಗರಕ್ಕೆ ರಸ್ತೆ, ಕಟ್ಟಡ, ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕಳೆದ ಮೂರೂವರೆ ವರ್ಷಗಳಲ್ಲಿ 950 ಕೋಟಿ ರೂ. ಅನುದಾನ ನೀಡಿದ್ದೇನೆ. ಹಿಂದೆ ಅಧಿಕಾರ ದಲ್ಲಿದ್ದವರ್ಯಾರೂ ಇಷ್ಟೊಂದು ಹಣವನ್ನು ಮೈಸೂರಿಗೆ ಕೊಟ್ಟಿಲ್ಲ. ಟೀಕೆಗೋಸ್ಕರ ಈ ಮಾತನ್ನು ಹೇಳುತ್ತಿಲ್ಲ ಎಂದರು. ಮೈಸೂರು ನಗರ ಚೊಕ್ಕಟವಾಗಿರಬೇಕು. ಎಲ್ಲ ನಾಗರಿಕ ಸೌಲಭ್ಯ ಎಂಬ ಕಾರಣಕ್ಕಾಗಿ ಇಷ್ಟೊಂದು ಅನುದಾನ ನೀಡಿದ್ದೇನೆ. ಹಿಂದೆ ಹಣಕಾಸು ಮಂತ್ರಿಯಾಗಿದ್ದಾಗ ಕಬಿನಿ, ಮೇಳಾಪುರ ಯೋಜನೆಗಳ ಮೂಲಕ ನಗರಕ್ಕೆ ಕುಡಿಯುವ ನೀರು ಒದಗಿಸಿದ್ದೇನೆ ಎಂದರು.

ಎಲ್ಲಾದ್ರು ಇರ್ಲಿ ಪಾಪ!
ಹಿಂದೆ ಕ್ಷೇತ್ರದವರೇ ಜಿಲ್ಲಾ ಮಂತ್ರಿ (ರಾಮದಾಸ್‌) ಆಗಿದ್ರು, ನಗರದ ಅಭಿವೃದ್ಧಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಹೇಳಲಿ, ಮಹಾರಾಣಿ ಕಾಲೇಜು, ಹಾಸ್ಟೆಲ್‌ ಕಟ್ಟಡವನ್ನು ನಾವು ಬಂದು ಮಾಡಬೇಕಾಯಿತು ಎಂದಾಗ ಸಭಿಕರ ಸಾಲಿನಲ್ಲಿ ಮುಂದೆ ಕುಳಿತಿದ್ದ ಕೆಲವರು ಎದುರುಗಡೆಯೇ ರಾಮದಾಸ್‌ ಅವರ ಮನೆ ಸಾರ್‌ ಎಂದು ಗಮನಕ್ಕೆ ತಂದರು.

Advertisement

ಓ ಅವರ ಮನೆ ಎದುರುಗಡೆಯೇ ಇದೆಯಾ? ತನೆ ಗೊತ್ತಿರಲಿಲ್ಲ. ಅವರು ಎಲ್ಲಾದ್ರು ಇರ್ಲಿ ಪಾಪ ಎಂದು ಉದ್ಗರಿಸಿದ ಮುಖ್ಯಮಂತ್ರಿ, ಎರಡನೇ ಬಾರಿ ಈ ಕ್ಷೇತ್ರದ ಶಾಸಕರಾಗಿರುವ ಸೋಮಶೇಖರ್‌ ಮತ್ತೆ ಗೆಲ್ಲುತ್ತಾರೆ. ಸೋಮಶೇಖರ್‌ ರಾಜಕೀಯದಲ್ಲಿ ಢೋಂಗಿ ಕೆಲಸ ಮಾಡಲ್ಲ. 

ಹಣ ಕೂಡ ಮಾಡಿಕೊಂಡಿಲ್ಲ. ಎಂಎಲ್‌ಎ ಆದ ಮೇಲೆ ಕೈಯಿಂದಲೇ ಹಣ ಕಳೆದುಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿಕೊಡುವಂತೆ ಪ್ರತಿ ಬಾರಿ ತನ್ನ ಬಳಿ ಬಂದಾಗೆಲ್ಲ ಸಾಲ ಮಾಡಿಕೊಂಡು ಬಿಟ್ಟಿದ್ದೀನಿ ಎನ್ನುತ್ತಿರುತ್ತಾರೆ ಎಂದರು.  ಈ ವೇಳೆ ಸಭಿಕರಲ್ಲಿ ಕೆಲವರು ಸೋಮಶೇಖರ್‌ ಅವರನ್ನು ಮಂತ್ರಿ ಮಾಡುವಂತೆ ಕೇಳಿದಾಗ, ಎಲ್ಲರನ್ನೂ ಮಂತ್ರಿ ಮಾಡಲು ಆಗುವುದಿಲ್ಲ. ತಾನು ಸಿಎಂ ಆದರೂ ಮೈಸೂರಿಗೆ ನಾನೇ ಮಂತ್ರಿ ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next