ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ತಲೆ ಎತ್ತುತ್ತಿರುವ ನೂತನ ಸಂಸತ್ ಭವನವು “ಭಾರತದ ಅಸ್ಮಿತೆ’ (ಭಾರತ್ ಕೀ ಜಾನ್‌ಕಿ)ಯನ್ನು ಬಿಂಬಿಸುವಂತಿರಬೇಕು ಎಂಬ ಉದ್ದೇಶದಿಂದ ಕಲೆ ಮತ್ತು ಸಂಸ್ಕೃತಿ ತಜ್ಞರನ್ನು ಒಳಗೊಂಡ ಕನಿಷ್ಠ ಮೂರು ಸಮಿತಿಗಳು ಹಗಲಿರುಳೆನ್ನದೆ ಶ್ರಮಿಸುತ್ತಿವೆ.
ಸಂಸ್ಕೃತಿ ಕಾರ್ಯದರ್ಶಿ ಗೋವಿಂದ ಮೋಹನ್ ನೇತೃತ್ವದ ಈ ಉನ್ನತ ಮಟ್ಟದ ಸಮಿತಿಗಳಲ್ಲಿ ಕರ್ನಾ ಟಕದವರಾದ ಶೈಕ್ಷಣಿಕ-ಬುಡಕಟ್ಟು ಶಿಕ್ಷಣ ತಜ್ಞ, ಕೊಪ್ಪಳ ಮೂಲದ ಟಿ.ವಿ. ಕಟ್ಟೀಮನಿ, ಪ್ರಸಾರ ಭಾರತಿ ಮಾಜಿ ಮುಖ್ಯಸ್ಥ ಮತ್ತು ಲೇಖಕ ಅರಕಲಗೂಡು ಸೂರ್ಯಪ್ರಕಾಶ್ ಅವರೂ ಇದ್ದಾರೆ.
ಇವರಲ್ಲದೆ ಸಿಬಿಎಫ್ ಸಿ ಮುಖ್ಯಸ್ಥ ಪ್ರಸೂನ್ ಜೋಷಿ, ಪುರಾತತ್ವಜ್ಞ ಕೆ.ಕೆ. ಮುಹಮ್ಮದ್, ನೃತ್ಯಪಟು ಪದ್ಮಾ ಸುಬ್ರಮಣ್ಯಂ, ಅಮೆರಿಕನ್-ಭಾರತೀಯ ವಾಸ್ತುಶಿಲ್ಪಿ, ನಗರ ಯೋಜನೆ ತಜ್ಞ ಕ್ರಿಸ್ಟೋಫರ್ ಬೆನ್ನಿಂಗರ್, ಭಾರತೀಯ ಐತಿಹಾಸಿಕ ಸಂಶೋಧನ ಮಂಡಳಿಯ ಮುಖ್ಯಸ್ಥ ರಘುವೇಂದ್ರ ತನ್ವಾರ್ ಕೂಡ ಈ ಸಮಿತಿಗಳಲ್ಲಿದ್ದಾರೆ.
ಭವನದೊಳಗಿನ ವಿನ್ಯಾಸಗಳು ದೇಶದ ಮೌಲ್ಯ ಗಳನ್ನು ಪ್ರತಿನಿಧಿಸುವಂತಿರಬೇಕು. ಅವು ಅತ್ಯಂತ ನವಿರಾಗಿರಬೇಕು, ಹೆಚ್ಚು ತಂತ್ರಜ್ಞಾನಗಳ ಬಳಕೆ ಬೇಡ ಎಂದು ಸಮಿತಿಯ ಸದಸ್ಯರು ನಿರ್ಧರಿಸಿದ್ದಾರೆ. ಇದು ವಸ್ತುಸಂಗ್ರಹಾಲಯ ಅಥವಾ ಕಲಾ ಗ್ಯಾಲರಿಯಲ್ಲ ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಉತ್ತಮ ವಿನ್ಯಾಸಗಳನ್ನು ಇಲ್ಲಿ ಪ್ರತಿಬಿಂಬಿಸಲು ಬಯಸಿದ್ದೇವೆ ಎಂದು ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ವೈವಿಧ್ಯಮಯ ಸಂಪ್ರದಾಯಗಳ ಪ್ರತಿಬಿಂಬ
ಸಂಸತ್ ಭವನದ ಆಂತರಿಕ ವಿನ್ಯಾಸ ಸಹಿತ ಒಟ್ಟಾರೆ ನೋಟವನ್ನು ಅಂತಿಮಗೊಳಿಸುವ ಕೆಲಸವನ್ನು ಮೂರು ಸಮಿತಿಗಳು ಆರಂಭಿಸಿವೆ. ಭವನವು ವೇದ, ಉಪನಿಷತ್, ಯೋಗ, ಭಕ್ತಿ ಚಳವಳಿ, ಸೂಫಿ ಮತ್ತು ಕಬೀರಪಂಥ, ಸಿಕ್ಖ್ ಗುರುಗಳ ತ್ಯಾಗ, ಜಾನಪದ ಸೇರಿದಂತೆ ಭಾರತದ ವೈವಿಧ್ಯಮಯ ಸಂಪ್ರದಾಯಗಳನ್ನು ಪ್ರತಿ ಬಿಂಬಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.