Advertisement

ಹೊಸ ಚಿತ್ರ; ಹಳೇ ಮಾತು: ಒಂದು ಶಾಕಿಂಗ್‌ ಕನಸು

03:50 AM Mar 03, 2017 | |

ಹೆಸರು ಕೇಳಿದೇಟಿಗೆ ಶಾಕ್‌ ಆಗಿಬಿಟ್ಟರಂತೆ ವಿಜಯ್‌ ರಾಘವೇಂದ್ರ. ಮೊದಲಿಗೆ ಆ ಹೆಸರಿನ ಚಿತ್ರ ಬಂದು ಇವತ್ತಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಇನ್ನು ಆ ಚಿತ್ರದ ಹಾಡುಗಳು ಈಗಲೂ ಜನಪ್ರಿಯವಾಗಿವೆ. ಹಾಗಿರುವಾಗ ಅದೇ “ಎರಡು ಕನಸು’ ಎಂಬ ಹೆಸರಿನ ಚಿತ್ರದಲ್ಲಿ ನಟಿಸಿದರೆ, ಹೋಲಿಕೆಗಳನ್ನು ಹೇಗೆ ತಡೆದುಕೊಳ್ಳಬೇಕು ಎಂಬ ಪ್ರಶ್ನೆ ಬಂದಿದೆ. ಕೊನೆಗೆ ನಿರ್ದೇಶಕರು ಹೇಳಿದ
ಕಥೆಗೆ ಹೆಸರು ಸೂಕ್ತ ಎನಿಸಿತಂತೆ. ನಂತರ ಹಾಡುಗಳನ್ನು ಕೇಳಿ ಇನ್ನಷ್ಟು ನಂಬಿಕೆ ಬಂತಂತೆ. ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಿದ್ದು, ಡಬ್ಬಿಂಗ್‌ ಸಂದರ್ಭದಲ್ಲಿ ಚಿತ್ರವನ್ನು ನೋಡಿದಾಗ … “ಎರಡು ಕನಸು’ ಚಿತ್ರದ ಬಿಡುಗಡೆಯ ಪತ್ರಿಕಾಗೋಷ್ಠಿ ಅದು. ಈಗಾಗಲೇ
ಒಂದೆರೆಡು ಬಾರಿ ಮಾಧ್ಯಮದವರೊಂದಿಗೆ ತಮ್ಮ ಚಿತ್ರದ ಬಗ್ಗೆ ನಿರ್ದೇಶಕ ಮದನ್‌ ಅವರು ಮಾತಾಡಿದ್ದರಿಂದ, ಹೊಸದೇನೂ ಉಳಿದಿರಲಿಲ್ಲ. ಹೊಸದೇನನ್ನೂ ಬಿಟ್ಟುಕೊಡುವ ಆಶಯ ಚಿತ್ರತಂಡಕ್ಕೂ ಇರಲಿಲ್ಲ. ಬಿಟ್ಟುಕೊಟ್ಟರೆ, ಚಿತ್ರಕ್ಕೆ ಪೆಟ್ಟು ಬೀಳಬಹುದೇನೋ ಎಂಬ ಭಯವಿದ್ದರೂ ಇರಬಹುದು. ಹಾಗಾಗಿ ವೇದಿಕೆಯಲ್ಲಿ ಹಲವರಿದ್ದರೂ, ಸಹಕಾರ-ಪ್ರೋತ್ಸಾಹ-ಧನ್ಯವಾದಗಳನ್ನು ಬಿಟ್ಟು ಹೆಚ್ಚು ಮಾತಾಡುವುದಕ್ಕೆ ಹೋಗಲಿಲ್ಲ.

Advertisement

ಮೊದಲಿಗೆ ಮಾತಾಡಿದ್ದೇ ನಿರ್ಮಾಪಕ ಅಶೋಕ್‌. ಅವರು ಕಳೆದ 30 ವರ್ಷಗಳಿಂದ ಚಿತ್ರ ನೋಡಿಲ್ಲವಂತೆ. ಈಗ “ಎರಡು ಕನಸು’ ಚಿತ್ರವನ್ನು ನೋಡಿದ್ದಾರೆ. ಬರೀ ಬೇರೆ ಚಿತ್ರಗಳ ಬಗ್ಗೆ ಕೇಳಿ ಗೊತ್ತಿರುವುದರಿಂದಲೇ, ಅವರು ತಮ್ಮ ಚಿತ್ರವು ಆ ಎಲ್ಲಾ ಚಿತ್ರಗಳನ್ನು ಮೀರಿಸುವ ಹಾಗಿದೆ ಎಂದು ಖುಷಿಪಟ್ಟರು. ಅಷ್ಟೇ ಅಲ್ಲ, ಈ ಚಿತ್ರ ಅದೆಷ್ಟು ಚೆನ್ನಾಗಿ ಬಂದಿದೆ ಎಂದರೆ, 10 ಸಾರಿಯಾದರೂ
ನೋಡಬೇಕೆಂದನಿಸುತ್ತಿದೆ ಎಂದರು. 

ಈ ಚಿತ್ರವನ್ನು ಅವರ ಮಗ ಮದನ್‌ ನಿರ್ದೇಶಿಸಿದ್ದಾರೆ. ಆದರ್ಶದಲ್ಲಿ  ಕಲಿತಿರುವ, ಒಂದಿಷ್ಟು ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಮದನ್‌, ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಇದೊಂದು ಒಳ್ಳೆಯ ಮನರಂಜನೆಯ ಚಿತ್ರ ಎಂದು ಅವರೂ ಅಭಿಪ್ರಾಯಪಟ್ಟರು. “ಎರಡು ಕನಸು’ ಎಂಬ ಹೆಸರನ್ನು ಸುಮ್ಮನೆ ಇಟ್ಟಿದ್ದಲ್ಲ, ಚಿತ್ರಕ್ಕೆ ಅವಶ್ಯಕತೆ ಇದ್ದುದರಿಂದಲೇ ಇಟ್ಟಿದ್ದು ಎಂದು ಅವರು ಸಹ ಅನುಮೋದಿಸಿದರು.

ಈ ಚಿತ್ರದಲ್ಲಿ ಹಿರಿಯ ನಟರಾದ ಉಮೇಶ್‌, ಆರ್‌.ಎನ್‌. ಸುದರ್ಶನ್‌, ಕಿಶೋರಿ ಭಲ್ಲಾಳ್‌ ಸೇರಿದಂತೆ ಹಲವರು ನಟಿಸಿದ್ದಾರೆ. ಆದರೆ, ಕಲಾವಿದರ ಪೈಕಿ ಇಬ್ಬರು ನಾಯಕಿಯರಾದ ಕಾರುಣ್ಯ ರಾಮ್‌ ಮತ್ತು ಕೃಷಿ ತಪಂಡಾ ಮಾತ್ರ ಬಂದಿದ್ದರು. ಇಬ್ಬರೂ ಅನುಭವ 
ಚೆನ್ನಾಗಿತ್ತು, ಕೆಲಸ ಖುಷಿಯಾಗಿತ್ತು ಎನ್ನುವಷ್ಟರಲ್ಲಿ ಪತ್ರಿಕಾಗೋಷ್ಠಿಯೇ ಮುಗಿದು ಹೋಯಿತು. 

Advertisement

Udayavani is now on Telegram. Click here to join our channel and stay updated with the latest news.

Next