Advertisement

ರಕ್ಷಣೆಗೆ ಕೋರಿ ಎಸ್ಪಿ ಕಚೇರಿಗೆ ಬಂದ ನವ ಜೋಡಿ

04:28 PM Aug 18, 2017 | |

ಕೋಪ್ಪಳ: ಪ್ರೀತಿ, ಪ್ರಣಯದಲ್ಲಿ ಬಿದ್ದಿರುವ ನವ ಜೋಡಿಯು ಇತ್ತೀಚೆಗಷ್ಟೆ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಪಾಲಕರ ಭಯಕ್ಕೆ ಹೆದರಿ ತಮಗೆ ರಕ್ಷಣೆ ನೀಡುವಂತೆ ಕೊಪ್ಪಳ ಎಸ್ಪಿ ಕಚೇರಿ ಮೆಟ್ಟಿಲೇರಿದ ಘಟನೆ ಗುರುವಾರ ನಡೆದಿದೆ. ಗೋವಾ ಮೂಲದ ಯುವತಿ ಅನಿತಾ ರಾಥೋಡ್‌ ಹಾಗೂ ಗಂಗಾವತಿ ತಾಲೂಕಿನ ಡಣಾಪುರ ನಿವಾಸಿ ಸುರೇಶ್‌ ನಾಯಕ್‌ ಅವರೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನವಜೋಡಿಗಳು. ಅನಿತಾ ರಾಥೋಡ್‌ ಗೋವಾದಲ್ಲಿಯೇ ತನ್ನ ಪದವಿ ಅಭ್ಯಾಸ ಪೂರ್ಣಗೊಳಿಸಿದ್ದಾಳೆ. ಆದರೆ ಗಂಗಾವತಿ ತಾಲೂಕಿನ ಡಣಾಪೂರದಲ್ಲಿ ಅವರ ಅಜ್ಜಿಯ ಮನೆ ಇದ್ದ ಕಾರಣ ಹಲವು ವರ್ಷದಿಂದ ಬಂದು ಹೋಗುತ್ತಿದ್ದಳು. ಈ ಮಧ್ಯೆ ಸುರೇಶ ನಾಯಕ್‌ ಜೊತೆ ಸ್ನೇಹ ಬೆಳೆದು ಅದು ಪ್ರೇಮಕ್ಕೆ ತಿರುಗಿದೆ. ಹೀಗಾಗಿ ಇಬ್ಬರು ಕಳೆದ 9 ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸಿದ್ದಾರೆ. ಸುರೇಶ ನಾಯಕ್‌ ಗಂಗಾವತಿಯಲ್ಲಿ ಮೆಡಿಕಲ್‌ ಶಾಪ್‌ ನಡೆಸುತ್ತಿದ್ದಾನೆ. ಇಬ್ಬರ ಪ್ರೀತಿ ಎರಡೂ ಕುಟುಂಬಕ್ಕೆಗೊತ್ತಾಗಿದೆ. ಸುರೇಶ ಮನೆಯಲ್ಲಿ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಆದರೆ ಅನಿತಾ ಅವರ ಮನೆಯಲ್ಲಿ ಪ್ರೀತಿಯ ವಿಷಯ ಗೊತ್ತಾಗಿದೆ. ಇದರಿಂದ ಯುವತಿ ತಂದೆ-ತಾಯಿ ಆಕೆಗೆ ಬುದ್ಧಿ ಮಾತು ಹೇಳಿದ್ದಾರೆ. ಇದನ್ನು ಧಿಕ್ಕರಿಸಿದ ಈ ಜೋಡಿ ಆ.10ರಂದು ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಲು ತೆರಳುತ್ತಿದ್ದಂತೆ ಯುವತಿ ಸಂಬಂಧಿಕರು ಇವರ ಬೆನ್ನು ಹತ್ತಿದ್ದಾರೆ. ಇದರಿಂದ ಭಯಗೊಂಡ ಈ ಜೋಡಿಯು ಕಳೆದ ಏಳು ದಿನಗಳಿಂದ
ವಿವಿಧೆಡೆ ಸುತ್ತಾಡಿದ್ದಾರೆ. ಇವರಿಬ್ಬರ ಪ್ರೀತಿಗೆ ಸ್ನೇಹ ಬಳಗವೂ ಸಾಥ್‌ ನೀಡಿದೆ. ಕೊನೆಗೆ ಪರಿಸ್ಥಿತಿ ಕೈ ಚೆಲ್ಲುವ ಹಂತಕ್ಕೆ ತಲುಪಿದ ವೇಳೆ ಸ್ನೇಹಿತರೊಂದಿಗೆ ಕೊಪ್ಪಳ ಎಸ್ಪಿ ಕಚೇರಿಗೆ ಬಂದು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಅನಿತಾ ಅವರ ತಂದೆ ರಾಜು ರಾಥೋಡ್‌ ಅವರು ಎಸ್ಪಿ ಕಚೇರಿಗೆ ದೌಡಾಯಿಸಿ ಮಗಳೊಂದಿಗೆ ವಾಕ್ಸಮರ ನಡೆಸಿ, ಅಳಲು ತೋಡಿಕೊಂಡರು. ಕೊನೆಗೆ ಸ್ಥಳೀಯ ಪೊಲೀಸರೇ ಪರಿಸ್ಥಿತಿ ತಿಳಿಗೊಳಿಸಿ ಎಸ್ಪಿ ಅವರ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾಡಿಕೊಳ್ಳುವಂತೆ ಯುವತಿ ಪಾಲಕರಿಗೆ ಸಲಹೆ ನೀಡಿದ ಪ್ರಸಂಗ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next