ತೇರದಾಳ: ಸಮೀಪದ ಹಳಿಂಗಳಿ ಗ್ರಾಮದ ಲೋಕನ್ನವರ ವಸ್ತಿ ತೋಟದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣವಾಗಿದ್ದರೂ ಉದ್ಘಾಟನೆ ಭಾಗ್ಯ ಇಲ್ಲದಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
ಸರಕಾರದ ಲಕ್ಷಾಂತರ ರೂ.ಗಳ ಅನುದಾನದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದ್ದರೂ ನಾನಾ ಕಾರಣಗಳಿಂದ ಉದ್ಘಾಟನೆ ಭಾಗ್ಯವಿಲ್ಲದೇ ಬಾಗಿಲು ಮುಚ್ಚಿದೆ. ಇದರಿಂದ ಸಣ್ಣಪುಟ್ಟ ಮಕ್ಕಳು ಇಕ್ಕಟ್ಟಾದ ಸ್ಥಳಾವಕಾಶ ಹೊಂದಿದ ಸಮೀಪದ ದೇವಸ್ಥಾನವೊಂದರ ಕೊಠಡಿಯಲ್ಲೇ ಹಾಜರಾಗಬೇಕಾದ ದುಃಸ್ಥಿತಿ ಬಂದಿದೆ. ಮಕ್ಕಳ ಪಾಠ-ಊಟೋಪಚಾರಗಳು ಇಲ್ಲಿಯೇ ನಡೆದಿವೆ. ಇಂತಹ ಚಿಕ್ಕ ಕೊಠಡಿಯಲ್ಲೇ ಬಾಣಂತಿಯರು, ಗರ್ಭಿಣಿಯರು ಬಂದು ಊಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಪ್ರಸಕ್ತ ವರ್ಷದಲ್ಲಿ ಅಂದಾಜು ಹತ್ತು ಮಕ್ಕಳಿದ್ದು, ನಾಲ್ಕು ಜನ ಗರ್ಭಿಣಿಯರು, ಓರ್ವ ಬಾಣಂತಿ ಇದ್ದಾರೆ. ಹೀಗಾಗಿ ಅತಿ ಚಿಕ್ಕ ಸಂಖ್ಯೆಯನ್ನು ಹೊಂದಿದ ಅಂಗನವಾಡಿ ಕೇಂದ್ರದ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂಬುದು ಅನೇಕರ ಅಭಿಪ್ರಾಯವಾಗಿದೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈವರೆಗೂ ಅಂಗನವಾಡಿಯ ನೂತನ ಕಟ್ಟಡ ಉದ್ಘಾಟನೆ ಮಾಡಲಾಗಿಲ್ಲ. ಈಗಾಗಲೇ ಸ್ಥಳಿಯರೊಂದಿಗೆ ಮಾತನಾಡಿದ್ದೇವೆ. ಬರುವ ವಾರದಲ್ಲಿ ಕಟ್ಟಡ ಉದ್ಘಾಟನೆಯಾಗಲಿದೆ ಎನ್ನುತ್ತಾರೆ ಅಂಗನವಾಡಿ ಮೇಲ್ವಿಚಾರಕಿ ಉಮಾ ಹಡಗಲಿ.
ಅಂಗನವಾಡಿಗೆ ಮೇ 31ರವರೆಗೆ ರಜೆ ಇದ್ದು, ಜೂ.1ರಂದು ಕೇಂದ್ರವು ಪುನರ್ ಆರಂಭಗೊಂಡಿದೆ. ಈ ಭಾಗದಲ್ಲಿ ದೇವಿ ಜಾತ್ರೆ ಇರುವುದರಿಂದ ಹಿರಿಯರು ಖಾಲಿ ಇರಲಿಲ್ಲ. ಈಗಾಗಲೇ ಮೇಲಧಿಕಾರಿಗಳು ಸೂಚಿಸಿದಂತೆ ಹಿರಿಯರ ಸಮ್ಮುಖದಲ್ಲಿ ಸದ್ಯದಲ್ಲೇ ನೂತನ ಕಟ್ಟಡ ಉದ್ಘಾಟಿಸುವ ಕಾರ್ಯ ನಡೆಯಲಿದೆ ಎನ್ನುತ್ತಾರೆ ಹಳಿಂಗಳಿಯ ಅಂಗನವಾಡಿ ಕಾರ್ಯಕರ್ತೆ ಎಸ್.ಎಂ. ಮದಲಮಟ್ಟಿ.