Advertisement

ಹೆಸರಿಗೆ ಮಾತ್ರ ಎಂಬಂತಿದೆ ತೊಗರಿ ಅಭಿವೃದ್ದಿ ಮಂಡಳಿ

09:59 AM Jun 13, 2022 | Team Udayavani |

ಕಲಬುರಗಿ: ಎರಡು ದಶಕಗಳ ಹಿಂದೆ ಈ ಭಾಗದ ತೊಗರಿ ಅಭಿವೃದ್ಧಿ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದ ತೊಗರಿ ಅಭಿವೃದ್ಧಿ ಮಂಡಳಿ ಹೆಸರಿಗೆ ಮಾತ್ರ ಎಂಬಂತಿದೆ.

Advertisement

ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅಸ್ತಿತ್ವಕ್ಕೆ ಬಂದಿರುವ ತೊಗರಿ ಅಭಿವೃದ್ಧಿ ಮಂಡಳಿ ಆರಂಭಗೊಂಡ ದಿನದಿಂದಲೂ ಇಂದಿನವರೆಗೂ ಹಾಗೆ ಇದೆ. ಎಳ್ಳು ಕಾಳಷ್ಟು ಪ್ರಗತಿ ಇಲ್ಲ. 5 ಕೋ.ರೂ ಅನುದಾನದೊಂದಿಗೆ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ತದ ನಂತರ ನಯಾಪೈಸೆ ಅನುದಾನ ದೊರಕಿಲ್ಲ. ಯಾವುದೋ ಸಾಂಸ್ಕೃತಿಕ ಸಂಘಕ್ಕೆ ನೂರಾರು ಕೋ. ರೂ. ನೀಡುವ ಸರ್ಕಾರ ಲಕ್ಷಾಂತರ ರೈತರ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಸ್ಥಿತಿಯನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ತೊಗರಿ ಅಭಿವೃದ್ಧಿ-ಉತ್ತೇಜನಕ್ಕೆ ನಿರ್ಲಕ್ಷ್ಯತನ ವಹಿಸಿರುವುದು ಒಂದು ದುರಂತವೆಂದೇ ಹೇಳಬಹುದು.

ತೊಗರಿ ಅಭಿವೃದ್ಧಿ ಮಂಡಳಿ ಕಾಫಿ, ತೆಂಗು ಅಭಿವೃದ್ಧಿ ಮಂಡಳಿಯಷ್ಟು ಸಬಲತೆ ಹೊಂದಿದ್ದರೆ ತೊಗರಿ ಬೆಂಬಲ ಬೆಲೆ ಹೆಸರಿಗಿಂತ ಹೆಚ್ಚಾಗಿರುವಲ್ಲಿ ಯಾವುದೇ ಅನುಮಾನ ಇರುತ್ತಿರಲಿಲ್ಲ. ಮೊದಲು ಸ್ಥಳೀಯವಾಗಿಯೇ ಅಭಿವೃದ್ಧಿಗೆ ಸೂಕ್ತ ವಾತಾವರಣ ಕಲ್ಪಿಸದೇ ಇದ್ದು, ಕೇಂದ್ರದತ್ತ ಬೊಟ್ಟು ಮಾಡುವುದು ಸಮಂಜಸವೆನಿಸಲ್ಲ.

ವಿಧಾನಸಭಾ ಅಧಿವೇಶನದಲ್ಲಿ ಕಬ್ಬು, ರೇಷ್ಮೆ, ಕಾಫಿ, ಭತ್ತ, ರಾಗಿ, ತೆಂಗು ಸೇರಿದಂತೆ ಇತರೆ ಬೆಳೆಗಳ ಕುರಿತಾಗಿ ಚರ್ಚೆಯಾಗುತ್ತದೆ. ಆದರೆ ತೊಗರಿ ಬಗ್ಗೆ ಹೆಚ್ಚಿನ ಚರ್ಚೆಯಾದ ಉದಾಹರಣೆಯೇ ಇಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂದಾಜು 20 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗುವ ತೊಗರಿಗೆ ಸೂಕ್ತ ಬೆಂಬಲ ಬೆಲೆ, ಮಾರುಕಟ್ಟೆಯಲ್ಲಿ ಕೃಷಿ ವೆಚ್ಚಕ್ಕಾಗುವ ಖರ್ಚಿಗಿಂತ ಹೆಚ್ಚಿನ ಬೆಲೆ ಸ್ಥಿರವಾಗದಿರುವುದು ನಿಜಕ್ಕೂ ಆತ್ಮಾವಲೋಕನ ಮಾಡುವಂತಿದೆ.

ತೊಗರಿ ಬೆಂಬಲ ಬೆಲೆಯಲ್ಲಿನ ಶೋಷಣೆ, ಜನಪ್ರತಿನಿಧಿಗಳ ನಿರ್ಲಕ್ಷ್ಯತನ, ಬೆಳೆವಿಮೆ ಮಂಜೂರಾತಿಯಲ್ಲೂ ಅನ್ಯಾಯ ಕುರಿತಾಗಿ ಬರೆಯಲು ಹೋದರೆ ಧಾರಾವಾಹಿಯಾಗುತ್ತದೆ. ಹೀಗಾಗಿ ಇದಕ್ಕೆ ಸಾರ್ವಜನಿಕ ವ್ಯಾಪಕ ಹೋರಾಟವೇ ಸೂಕ್ತ ಮದ್ದಾಗಿದೆ. ಪ್ರಮುಖವಾಗಿ ಯಾವುದೇ ಜನಪ್ರತಿನಿಧಿ ತಮ್ಮ ಬಳಿ ಬಂದಾಗ ತೊಗರಿ ಬೆಲೆ ಹೆಚ್ಚಾಗಲು ಏನು ಮಾಡುತ್ತೀರಿ? ಎಂದು ಪ್ರತಿಯೊಬ್ಬ ರೈತರು ಕೇಳಬೇಕು. ಹೀಗೆ ಕೇಳುವುದು ಒಂದು ಜನಾಂದೋಲನವಾದಲ್ಲಿ ತಕ್ಕಮಟ್ಟಿಗೆ ತೊಗರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

Advertisement

ಕೆಎಂಫ್ ಮಾದರಿಯಲ್ಲಾಗಲಿ ತೊಗರಿ ಮಂಡಳಿ

ಹಾಲು ಉತ್ಪಾದಕರ ಸಹಕಾರ ಮಂಡಳಿಯಂತೆ ತೊಗರಿ ಅಭಿವೃದ್ಧಿ ಮಂಡಳಿಯಾದಲ್ಲಿ ಜತೆಗೆ ಸರ್ಕಾರದ ವಿವಿಧ ಯೋಜನೆಗಳಿಗೆ ಸರ್ಕಾರದಿಂದಲೇ ದಾಲ್‌ಮಿಲ್‌ ಸ್ಥಾಪಿಸಿ ಅದರಿಂದ ಬೇಳೆ ತಯಾರಿಸಿ ಪೂರೈಸಿದಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂ. ಉಳಿಕೆಯಾಗುತ್ತದೆಯಲ್ಲದೇ ತೊಗರಿಗೂ ಉತ್ತಮ ಬೆಲೆ ಜತೆಗೆ ಬೆಂಬಲ ಬೆಲೆ ಹೆಚ್ಚಳಕ್ಕೂ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಣ್ಣದಾದ ಪ್ರಯತ್ನ ಮಾಡುತ್ತಿಲ್ಲ. ಸುಮ್ಮನೆ ಹೇಳಿಕೆ ಕೊಡುವುದಕ್ಕೆ ಮಾತ್ರ ಸಿಮೀತವಾಗಿರುವುದು ತೊಗರಿ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ.

ತೊಗರಿ ಅಭಿವೃದ್ಧಿ ಮಂಡಳಿಯು ಕಾಫಿ ಮಂಡಳಿಯಂತಾಗಲಿ. ಕಾಫಿ ಮಂಡಳಿಗಿರುವ ಹಣಕಾಸು ವ್ಯವಹಾರದ ಅಧಿಕಾರ, ಅನುದಾನ ನಮ್ಮ ತೊಗರಿ ಮಂಡಳಿಗೂ ನೀಡಿದರೆ ಕಲಬುರಗಿ ತೊಗರಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿ ಬೆಲೆ ಹೆಚ್ಚಿಸಿಕೊಳ್ಳಬ ಹುದಾಗಿದೆ. ಕಲಬುರಗಿ ತೊಗರಿ ವಿದೇಶಕ್ಕೂ ರಫ್ತಾಗಲಿ. ಆಗ ನಮ್ಮ ತೊಗರಿ ಮೌಲ್ಯ ಎಷ್ಟು ಎಂಬುದು ಗೊತ್ತಾಗುತ್ತದೆ. ಬಸವರಾಜ ಇಂಗಿನ್‌, ಅಧ್ಯಕ್ಷ, ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂಘ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next