Advertisement

ಪರಿಸರ ಸಂಪತ್ತಿನ ನಿಷ್ಕಾಳಜಿ ಶೋಚನೀಯ; ಪರಿಸರವಾದಿ ಹೆಬ್ಳೀಕರ್‌

12:34 PM Feb 25, 2023 | Team Udayavani |

ಧಾರವಾಡ: ನಾಗರಿಕತೆ ಹುಟ್ಟಿದ್ದು ಪರಿಸರದ ಮೇಲೆ. ಹೀಗೆ ವಿಕಸಿತಗೊಂಡ ನಾಗರಿಕತೆ ಇಂದು ಅಳಿವಿನಂಚಿನಲ್ಲಿದೆ. ನಮ್ಮ ನೆಲದ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಪರಿಸರವನ್ನು ರಕ್ಷಿಸಬೇಕು ಎಂದು ಪರಿಸರವಾದಿ ಸುರೇಶ ಹೆಬ್ಳೀಕರ್‌ ಹೇಳಿದರು.

Advertisement

ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರಿನ ಅಸೀಮಾ ಪ್ರತಿಷ್ಠಾನ ಹಾಗೂ ಮೈಸೂರಿನ ಫೋಟೋ ಜರ್ನಲಿಸಂ ಅಕಾಡೆಮಿ ಆಶ್ರಯದಲ್ಲಿ ನಡೆದ ಪತ್ರಿಕೋದ್ಯಮ ವಿಭಾಗದ 40ನೇ ವರ್ಷಾಚರಣೆ ಮತ್ತು ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶದ ಜನರಲ್ಲಿ ಇರುವ ಜ್ಞಾನ ಬೇರೆ ಯಾವ ಪಾಶ್ಚಿಮಾತ್ಯ ದೇಶಗಳಲ್ಲಿ ಇಲ್ಲ. ಆದರೆ ಇಲ್ಲಿನ ಜನರು ಪರಿಸರ ಸಂಪತ್ತಿನ ಬಗೆಗೆ ಇರುವ ನಿಷ್ಕಾಳಜಿ ಶೋಚನೀಯ. ಸಾಮಾಜಿಕತೆ, ಆರ್ಥಿಕತೆ, ಸಂಸ್ಕೃತಿ ಎಲ್ಲವೂ ಪರಿಸರ ನೀಡಿದ ಕೊಡುಗೆಗಳು. ಆದರೆ ದೇಶವು ಆರ್ಥಿಕತೆಯಲ್ಲಿ ಮುಂದುವರಿಯಬೇಕೆಂಬ ದುರಾಸೆಯಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯತೆಗೂ ಮೀರಿ ಬಳಸುತ್ತಿದೆ. ನಿಸರ್ಗದ ಮೇಲಿನ ಒತ್ತಡದ ಪರಿಣಾಮ ಪ್ರಪಂಚದಲ್ಲಿ
ಮುಂದುವರಿದ ದೇಶಗಳೆಲ್ಲ ಭೂಕಂಪ ಹಾಗೂ ಹವಾಮಾನ ವೈಪರಿತ್ಯದಂತಹ ಪರಿಣಾಮಗಳನ್ನು ಎದುರಿಸುತ್ತಿವೆ ಎಂದರು.

ಅಸೀಮಾ ಪತಿಷ್ಠಾನದ ಪ್ರಮೋದ ಸುಬ್ಬರಾವ್‌ ಮಾತನಾಡಿ, ಪರಿಸರ ಯಾವುದೇ ಸ್ವಾರ್ಥವಿಲ್ಲದೆ ಮನುಷ್ಯರ ಅಗತ್ಯತೆಗಳನ್ನು ಒದಗಿಸುತ್ತದೆ. ಆದರೆ ಮನುಷ್ಯ ತ್ಯಾಜ್ಯ ವಸ್ತುಗಳನ್ನು ಹಾಗೂ ಅನೇಕ ರೀತಿಯಿಂದ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಮನುಷ್ಯ ಸ್ವಾರ್ಥ ಕಡಿಮೆ ಮಾಡಿ ಪರಿಸರದ ಕಡೆಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ರಶ್ಮಿ ಎಸ್‌. ಮಾತನಾಡಿ, ಸ್ಥಳೀಯ ಪಾರಂಪರಿಕ ಜ್ಞಾನವನ್ನು ಅರಿತುಕೊಳ್ಳಬೇಕು. ಕೃತಕ ಬುದ್ಧಿಮತ್ತೆಯು ಇಂದು ಪತ್ರಕರ್ತರ ಸ್ಥಾನವನ್ನು ಕಬಳಿಸುವ ಸಂದರ್ಭದಲ್ಲಿ ಮಾನವೀಯತೆಗಾಗಿ ಪತ್ರಿಕೋದ್ಯಮ ಕೆಲಸ ಮಾಡಬೇಕಿದೆ. ಪತ್ರಿಕೋದ್ಯಮವನ್ನು ಅನ್ನಕ್ಕಾಗಿ ಮಾಡಬಾರದು, ಅಂತಃಕರಣಕ್ಕೆ ಮಾಡಬೇಕು.

Advertisement

ಜ್ಞಾನ ಹಂಚಿಕೆಯಾಗಬೇಕು ಹೊರತು ಮಾರಾಟವಾಗಬಾರದು. ಪಾರಂಪರಿಕ ಜ್ಞಾನವನ್ನು ಪತ್ರಿಕೋದ್ಯಮದವರು ದಾಖಲಿಸಲು ಸಾಧ್ಯ. ಸಣ್ಣ ಸಣ್ಣ ವಿಷಯಗಳನ್ನು ಬೆನ್ನತ್ತಿ ಹೋಗಿ ದಾಖಲೆಗಳನ್ನು ನೀಡಿ ಚಳವಳಿಯ ಕಾಲವನ್ನು ಸೃಷ್ಟಿಸಬೇಕು ಎಂದರು.

ವಿಭಾಗದ ಮುಖ್ಯಸ್ಥ ಡಾ| ಜೆ.ಎಂ ಚಂದುನವರ, ಫೋಟೊ ಜರ್ನಲಿಸಂ ಅಕಾಡೆಮಿಯ ಮಂಜುನಾಥ ಎಂ. ಆರ್‌ ಮಾತನಾಡಿದರು. ಡಾ| ಸಂಜಯಕುಮಾರ ಮಾಲಗತ್ತಿ ಸ್ವಾಗತಿಸಿದರು. ಜಯಶ್ರೀ ಪ್ರಾರ್ಥಿಸಿದರು. ಮಮತಾ ನಾಯ್ಡು ಹಾಗೂ ಶಿವರಾಜ ವಿಶ್ವನಾಥ ಪರಿಚಯಿಸಿದರು. ಆದಿತ್ಯ ಯಲಿಗಾರ ನಿರೂಪಿಸಿದರು. ಗಂಗಾಧರ ಕಾಂಬಳೆ ವಂದಿಸಿದರು.

ಬಹುಮಾನ ವಿತರಣೆ
ಪತ್ರಿಕೋದ್ಯಮ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವಿವಿ ಪತ್ರಿಕೋದ್ಯಮ ವಿಭಾಗದ ಶಿವರಾಜ ವಿಶ್ವನಾಥ, ದ್ವಿತೀಯ ಸ್ಥಾನ ಪಡೆದ ರಾಯಾಪುರದ ಎಸ್‌ಜೆಎಂಸಿ ಪದವಿ ಕಾಲೇಜಿನ ರವಿಕುಮಾರ ಚನ್ನಹಳ್ಳಿ, ತೃತೀಯ ಸ್ಥಾನ ಪಡೆದ ಹುಬ್ಬಳ್ಳಿಯ ಕೆಎಲ್‌ಇ ಎಸ್‌ಕೆ ಆರ್ಟ್ಸ್ ಕಾಲೇಜಿನ ಗ್ಲೋರಿಯಾ ರಾಜೀವ್‌ ಹಾಗೂ ಪರಿಸರ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹುಬ್ಬಳ್ಳಿಯ ಪಿ.ಸಿ.ಜಾಬಿನ್‌ ಕಾಲೇಜಿನ ಐಶ್ವರ್ಯಾ, ದ್ವಿತೀಯ ಸ್ಥಾನ ಪಡೆದ ಕೆಎಸ್‌ ಎಸ್‌ ಪದವಿ ಕಾಲೇಜಿನ ಚನ್ನವೀರಪ್ಪ, ದ್ವಿತೀಯ ಸ್ಥಾನ ಪಡೆದ ಪವಿತ್ರಾ ಅವರಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next