ಇಂದಿನ ಜನಪ್ರತಿನಿಧಿಗಳಿಗೆ ಸಂಸತ್ತಿನೊಳಗೆ ಮಾತನಾಡುವುದು ಮತ್ತು ಚುನಾವಣಾ ರ್ಯಾಲಿಯಲ್ಲಿ ಮಾತನಾಡುವುದರ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಬಹುತೇಕ ಸಂದರ್ಭದಲ್ಲಿ ಹಳಿಯುವುದಕ್ಕೆ, ಟೀಕಿಸುವುದಕ್ಕೆ , ಗೇಲಿ ಮಾಡುವುದಕ್ಕಷ್ಟೇ ಸಂಸತ್ತಿನಲ್ಲಿ ಮಾಡುವ ಭಾಷಣ ಸೀಮಿತವಾಗುತ್ತಿರುವುದು ದುರದೃಷ್ಟಕಾರಿ ಬೆಳವಣಿಗೆ.
ಲೋಕಸಭೆಯಲ್ಲಿಂದು ನಡೆದಿರುವ ಘಟನೆ ಪ್ರಜಾತಂತ್ರದ ಪವಿತ್ರ ದೇಗುಲ ಎಂದು ಅರಿಯಲ್ಪಡುವ ಸಂಸತ್ತಿನ ಇತಿಹಾಸದಲ್ಲೊಂದು ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಬಹುತೇಕ ಮಾರಾಮಾರಿಯೇ ನಡೆಯುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಹಾಗೆಂದು ಸಂಸತ್ತಿನೊಳಗೆ ಈ ಮಾದರಿಯ ಘಟನೆ ನಡೆಯುವುತ್ತಿರುವುದು ಹೊಸದಲ್ಲವಾದರೂ ಪದೇ ಪದೆ ನಮ್ಮ ಜನಪ್ರತಿನಿಧಿಗಳು ಹೀಗೆ ಬೀದಿ ಗೂಂಡಾಗಳಂತೆ ಒಬ್ಬರ ಮೇಲೊಬ್ಬರು ಏರಿ ಹೋಗುವುದು ಒಟ್ಟಾರೆಯಾಗಿ ಸಂಸದೀಯ ವ್ಯವಸ್ಥೆ ಮೇಲಿರುವ ಅಭಿಮಾನ ಮತ್ತು ವಿಶ್ವಾಸಕ್ಕೆ ಚ್ಯುತಿಯುಂಟು ಮಾಡುತ್ತಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಪ್ರಶ್ನೆಯೊಂದಕ್ಕೆ ಉತ್ತರಿಸುವುದಕ್ಕೆ ಮುಂಚಿತವಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ದಿಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿಯ ಕುರಿತು ನೀಡಿದ ಹೇಳಿಕೆಯನ್ನು ಖಂಡಿಸಿದಾಗ ಗದ್ದಲ ಪ್ರಾರಂಭವಾಯಿತು. ಸ್ಪೀಕರ್ ಓಂ ಬಿರ್ಲಾ ಅವರು ಪ್ರಶ್ನೆಗೆ ಮಾತ್ರ ಉತ್ತರಿಸಿ ಎಂದರೂ ಹರ್ಷವರ್ಧನ್ ಖಂಡನಾ ಹೇಳಿಕೆಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರು ಬಲವಾಗಿ ಪ್ರತಿಭಟಿಸಿ ಹರ್ಷವರ್ಧನ್ ಅವರತ್ತ ನುಗ್ಗಿ ಬಂದರು. ತಮಿಳುನಾಡಿನ ಕಾಂಗ್ರೆಸ್ ಸಂಸದ ಮಾಣಿಕಂ ಟಾಗೋರ್ ಕೈಮಾಡಲು ಮುಂದಾದಾಗ ಬಿಜೆಪಿ ಸಂಸದರು ಅವರನ್ನು ತಡೆದರು. ಸ್ಮತಿ ಇರಾನಿ ಸೇರಿದಂತೆ ಆಳುವ ಪಕ್ಷದ ಹಲವು ಸದಸ್ಯರು ಪರಿಸ್ಥಿತಿಯನ್ನು ತಹಬಂದಿಗೆ ತಂದರೇನೋ ನಿಜ. ಆದರೆ ಇಡೀ ದೇಶ ಸಂಸದರ ಲಜ್ಜೆಗೇಡಿ ವರ್ತನೆಗೆ ಸಾಕ್ಷಿಯಾಯಿತು.
ಕಳೆದ ವರ್ಷವೂ ಕೇರಳದ ಕಾಂಗ್ರೆಸ್ ಸದಸ್ಯರಿಬ್ಬರು ಇದೇ ರೀತಿ ಲೋಕಸಭೆಯಲ್ಲಿ ರಂಪಾಟ ಮಾಡಿದ್ದರು. ಸ್ಪೀಕರ್ ಅವರಿಬ್ಬರನ್ನು ಅನಂತರ ಅಮಾನತುಗೊಳಿಸಿದ್ದರು. ಸದನದೊಳಗೆ ಗದ್ದಲ ಎಬ್ಬಿಸುವ, ಸಭಾಪತಿಯ ಸೂಚನೆಗಳನ್ನು ಪಾಲಿಸದ ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರ ಸ್ಪೀಕರ್‌ಗೆ ಇದೆ. ಹಲವು ಬಾರಿ ಇಂಥ ವರ್ತನೆಗಳಿಂದ ಸದಸ್ಯರು ಅಮಾನತಿನ ಶಿಕ್ಷೆಗೆ ಒಳಗಾಗಿದ್ದಾರೆ. ಅದಾಗ್ಯೂ ಅವರ ವರ್ತನೆ ಬದಲಾಗದಿರುವುದು ವಿಷಾದನೀಯ. ಒಟ್ಟಾರೆ ಘಟನೆ ಸಂಸದರ ಸಂಸದೀಯ ಪ್ರೌಢಿಮೆ ಯಾವ ಮಟ್ಟದಲ್ಲಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಂತಿದೆ.
ಕಳೆದ ವರ್ಷದ ಘಟನೆಯ ಹಿನ್ನೆಲೆಯಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜಕೀಯ ಪಕ್ಷಗಳು ತಮ್ಮ ಸಂಸದರು ಹಾಗೂ ಶಾಸಕರಿಗೆ ನೀತಿ ಸಂಹಿತೆಯೊಂದನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ನೀತಿ ಸಂಹಿತೆ ಅಲ್ಲದಿದ್ದರೂ ಕನಿಷ್ಠ ವಿಧಾನಸಭೆ ಅಥವಾ ಸಂಸತ್ತಿನೊಳಗೆ ಯಾವ ರೀತಿ ವರ್ತಿಸಬೇಕು, ಅಲ್ಲಿ ನಿಭಾಯಿಸಬೇಕಾಗಿರುವ ಕರ್ತವ್ಯ ಮತ್ತು ಜವಾಬ್ದಾರಿಗಳೇನು ಎಂಬುದರ ಬಗ್ಗೆ ತರಬೇತಿ ನೀಡುವ ಅಗತ್ಯವಂತೂ ಇದೆ. ಇದಕ್ಕೆ ವಿಪಕ್ಷ ಅಥವಾ ಆಡಳಿತ ಪಕ್ಷ ಎಂಬ ಭೇದವಿಲ್ಲ. ಸಂದರ್ಭ ಬಂದಾಗ ಎಲ್ಲರೂ ಈ ಮಾದರಿಯ ರಂಪಾಟವನ್ನು ಮಾಡುವವರೇ.
ಯಾವುದೇ ಸಂದರ್ಭದಲ್ಲೂ ಸದಸ್ಯರು ಪ್ರತಿಭಟಿಸಲು ಸದನದ ಬಾವಿಗೆ ಇಳಿಯಬಾರದು, ಘೋಷಣೆಗಳನ್ನು ಕೂಗಬಾರದು, ಯಾವುದೇ ರೀತಿಯ ರಂಪಾಟಗಳನ್ನು ಮಾಡಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ರಚಿಸುವುದು ಅಗತ್ಯ. ಇಂದಿನ ಜನಪ್ರತಿನಿಧಿಗಳಿಗೆ ಸಂಸತ್ತಿನೊಳಗೆ ಮಾತನಾಡುವುದು ಮತ್ತು ಚುನಾವಣಾ ರ್ಯಾಲಿಯಲ್ಲಿ ಮಾತನಾಡುವುದರ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಬಹುತೇಕ ಸಂದರ್ಭದಲ್ಲಿ ಹಳಿಯುವುದಕ್ಕೆ, ಟೀಕಿಸುವುದಕ್ಕೆ , ಗೇಲಿ ಮಾಡುವುದಕ್ಕಷ್ಟೇ ಸಂಸತ್ತಿನಲ್ಲಿ ಮಾಡುವ ಭಾಷಣ ಸೀಮಿತವಾಗುತ್ತಿರುವುದು ದುರದೃಷ್ಟಕಾರಿ ಬೆಳವಣಿಗೆ. ವಿಷಯದ ಆಳವಾದ ಅಧ್ಯಯನ, ಮಾಹಿತಿ ಸಂಗ್ರಹ, ಭಾಷಾ ಪ್ರೌಢಿಮೆ ಇತ್ಯಾದಿ ಅರ್ಹತೆಗಳ ಕೊರತೆಯಿಂದಾಗಿ ಜನಪ್ರತಿನಿಧಿಗಳು ಬೀದಿ ಹೋರಾಟದ ದೃಶ್ಯವನ್ನು ಸಂಸತ್ತಿನಲ್ಲಿ ಸೃಷ್ಟಿಸುತ್ತಿದ್ದಾರೆ.
ಸಂಸತ್ತಿನಲ್ಲಿ ಗದ್ದಲ ಎಬ್ಬಿಸುವುದನ್ನು ಡಾ| ಅಂಬೇಡ್ಕರ್ “ಅರಾಜಕತೆಯ ಭಾಷೆ’ ಎಂದು ಕರೆದಿದ್ದರು. ಜನಪ್ರತಿನಿಧಿಗಳಿಗೆ ಸಂಸತ್ತಿನಂಥ ಪವಿತ್ರ ಜಾಗದಲ್ಲೂ ಸುಸಂಸ್ಕೃತವಾದ ವರ್ತನೆಯನ್ನು ತೋರಿಸಲು ಸಾಧ್ಯವಾಗುವುದಿಲ್ಲ ಎಂದಾದರೆ, ಸಭ್ಯವಾದ ಚರ್ಚೆಗಳನ್ನು ನಡೆಸುವುದಿಲ್ಲ ಎಂದಾದರೆ ಪ್ರಜಾತಂತ್ರದ ಘನತೆಯನ್ನು ಉಳಿಸುವ ಸಲುವಾಗಿಯಾದರೂ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರಚಿಸುವುದು ಅಗತ್ಯ.