Advertisement

ಸಾಮಾಜಿಕ ಕ್ಷೇತ್ರದಲ್ಲಿ ರಚನಾತ್ಮಕ ಬದಲಾವಣೆ ಅಗತ್ಯ

11:09 AM Feb 12, 2019 | |

ಸಾಗರ: ಸಾಮಾಜಿಕ ಕ್ಷೇತ್ರದಲ್ಲಿ ರಚನಾತ್ಮಕ ಬದಲಾವಣೆ ಅಗತ್ಯವಾಗಿದೆ. ಅಂತಹ ಬದಲಾವಣೆಗೆ ಚರಕದಂತಹ ಯಶಸ್ವಿ ಸಂಸ್ಥೆಗಳು ಮಾದರಿಯಾಗಿವೆ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಜಸ್ಬೀರ್‌ ಸಿಂಗ್‌ ಹೇಳಿದರು.

Advertisement

ತಾಲೂಕಿನ ಹೆಗ್ಗೋಡಿನ ಚರಕ ಆವರಣದಲ್ಲಿ ಭಾನುವಾರ ಚರಕ ಉತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಕಾಯಕ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಈಗ ಮಾತು ಮತ್ತು ಕೃತಿಯ ನಡುವೆ ಅಂತರ ನಿರ್ಮಾಣವಾಗಿದೆ. ನಮ್ಮ ಜೀವನ ಕ್ರಮ ಮತ್ತು ವಿಚಾರಗಳು, ಮಾತುಗಳು ಭಿನ್ನವಾಗಿವೆ. ಜೀವನ ಮತ್ತು ವಿಚಾರಗಳ ನಡುವೆ ಪ್ರತ್ಯೇಕತೆ ನಿರ್ಮಾಣವಾಗಿದೆ. ಅದರಲ್ಲಿಯೂ ರಾಜಕೀಯದಲ್ಲಿ ಈ ಅಂತರ ಹೆಚ್ಚಾಗಿದೆ. ಇಂತಹ ಕಾಲದಲ್ಲಿ ಸಾಮಾಜಿಕ ಬದಲಾವಣೆ ಅನಿವಾರ್ಯವಾಗಿದೆ ಎಂದರು.

ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಗುಡಿ ಕೈಗಾರಿಕೆ, ಗೃಹ ಕೈಗಾರಿಕೆಗಳನ್ನು ಬೆಳೆಸುವ, ಪ್ರೋತ್ಸಾಹಿಸುವ ಕೆಲಸ ಸ್ವಾತಂತ್ರ್ಯದ ನಂತರದ ಯಾವುದೇ ಸರ್ಕಾರಗಳು ಮಾಡಿಲ್ಲ. ಹಳ್ಳಿಗಳಲ್ಲಿನ ಕೈ ಉತ್ಪಾದನೆಗಳ ಪುನಶ್ಚೇತನದ ಬೃಹತ್‌ ಯೋಜನೆಗಳನ್ನು ರೂಪಿಸಿಲ್ಲ. ಕೈ ಉತ್ಪನ್ನಗಳ ವಿಶೇಷತೆ, ಮಹತ್ವವನ್ನು ಚರಕ ಸಾಧಿಸಿ ತೋರಿಸಿದೆ. ಗ್ರಾಮೀಣ ಹೆಣ್ಣುಮಕ್ಕಳಿಗೆ ಉದ್ಯೋಗ ಮತ್ತು ಆತ್ಮವಿಶ್ವಾಸ ನೀಡಿದೆ. ಅಂಥ ಚರಕದ ಮಾದರಿಯಲ್ಲಿ ಗ್ರಾಮೀಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಸುಮಾರು 800 ಜನ ಮಹಿಳೆಯರು ಚರಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತಷ್ಟು ಮಹಿಳೆಯರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಅವರೆಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಿದೆ. ಆದರೆ ಇಲಾಖೆಯ ಸಹಕಾರ ಅಗತ್ಯ. ಇಲಾಖೆ ಮತ್ತಷ್ಟು ಸ್ಪಂದಿಸಿದರೆ, ನೇಕಾರಿಕೆ, ಬಣ್ಣಗಾರಿಕೆ, ಕೈಮಗ್ಗ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಸಾಧ್ಯ ಎಂದರು.

Advertisement

ರೇಣುಕಾ ಪ್ರಾರ್ಥಿಸಿದರು. ಮಧುರಾ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಕೈಮಗ್ಗ ನೇಯ್ಗೆ ವಿಭಾಗದಲ್ಲಿ ಶಾರದಾ ಮತ್ತು ಪಾರ್ವತಿ, ಹೊರ ಊರು ಕೈ ಮಗ್ಗ ನೇಯ್ಗೆ ವಿಭಾಗದಲ್ಲಿ ವ್ಯಾಸರಾಯ ಶೆಟ್ಟಿಗಾರ್‌ ಕಿನ್ನಿಗೋಳಿ, ಈರಣ್ಣ ಹನುಮಂತಪ್ಪ ಕಾಟರಕಿ ಗಜೇಂದ್ರಗಢ, ಹೊಲಿಗೆ ವಿಭಾಗದಲ್ಲಿ ಅನಿತಾ, ನಾಗರತ್ನ, ಇತರೆ ವಿಭಾಗದಲ್ಲಿ ರಮೇಶ್‌ ಎ.ವಿ., ಹೇಮಲತಾ ಹಾಗೂ ದೇಸಿ ಮಾರಾಟ ವಿಭಾಗದಲ್ಲಿ ಭಾಗ್ಯ ಅವರಿಗೆ ಕಾಯಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next