Advertisement

ಸುಮಲತಾಗೆ ಪರಿಷತ್‌ ಭಾಗ್ಯ? ರವಿಕುಮಾರ್‌ಗೆ ಮತ್ತೆ ಅವಕಾಶ, ಸಿ.ಟಿ.ರವಿಗೆ ಶಾಕ್‌?

12:26 AM Jun 01, 2024 | Team Udayavani |

ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶನಿವಾರ ಬಿಡುಗಡೆ ಆಗುವ ಸಾಧ್ಯತೆ ನಿಚ್ಚಳವಾಗಿದ್ದು, ಅಚ್ಚರಿಯ ಹೆಸರೊಂದು ಸಂಭಾವ್ಯರ ಪಟ್ಟಿಯಲ್ಲಿ ಕೇಳಿ ಬಂದಿದೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಎಚ್‌.ಡಿ. ಕುಮಾರಸ್ವಾಮಿಗೆ ಬಿಟ್ಟುಕೊಟ್ಟ ಸಂಸದೆ ಸುಮಲತಾ ಅಂಬರೀಷ್‌ ಅವರನ್ನು ಮೇಲ್ಮನೆ ಅಭ್ಯರ್ಥಿ ಆಗಿಸುವುದಕ್ಕೆ ಬಿಜೆಪಿ ವರಿಷ್ಠರು ಒಲವು ತೋರಿಸಿದ್ದಾರೆ ಎನ್ನಲಾಗಿದೆ.

Advertisement

ಅಭ್ಯರ್ಥಿ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿದ ಬಳಿಕ 15 ಹೆಸರು ಗಳನ್ನು ರಾಜ್ಯ ಘಟಕ ದಿಂದ ದಿಲ್ಲಿಗೆ ಕಳುಹಿಸಲಾಗಿತ್ತು. ಆದರೆ ಅದರಲ್ಲಿ ಸುಮಲತಾ ಹೆಸರು ಆದ್ಯತೆಯಲ್ಲಿ ಇರಲಿಲ್ಲ. ಈಗ ವರಿಷ್ಠರು ರಾಜ್ಯ ನಾಯಕರನ್ನು ಮತ್ತೆ ಸ್ತಬ್ಧಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದು, ಸುಮಲತಾ ಜತೆಗೆ ಎಬಿವಿಪಿ ಹಿನ್ನೆಲೆಯ ಶಿಕ್ಷಣ ತಜ್ಞ ಮ. ನಾಗರಾಜ್‌ ಹೆಸರನ್ನೂ ಅಂತಿಮಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ರಾಜ್ಯ ನಾಯಕರು ಕಳುಹಿಸಿದ ಪಟ್ಟಿಯಲ್ಲಿ ಹಾಲಿ ಸದಸ್ಯ ಎನ್‌.ರವಿಕುಮಾರ್‌ ಮಾತ್ರ ಉಳಿದುಕೊಳ್ಳುವುದು ಬಹುತೇಕ ಖಚಿತ ಆಗಿದೆ.

ಸಿ.ಟಿ.ರವಿಗೆ ಶಾಕ್‌ ?
ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ಮೇಲ್ಮನೆಗೆ ಕಳುಹಿಸಲು ಅನೇಕ ಹಿರಿಯರು ಆಸಕ್ತಿ ತೋರಿದ್ದರು. ಸಂಭಾವ್ಯರ ಪಟ್ಟಿಯಲ್ಲಿ ಅವರ ಹೆಸರೂ ಇತ್ತು. ಆದರೆ ವರಿಷ್ಠರು ಈ ಬಗ್ಗೆ ಒಲವು ಹೊಂದಿಲ್ಲ ಎನ್ನಲಾಗುತ್ತಿದೆ. ವಿಪಕ್ಷ ನಾಯಕ ಆರ್‌.ಅಶೋಕ್‌, ಡಾ| ಸಿ.ಎನ್‌.ಅಶ್ವತ್ಥನಾರಾಯಣ ಸಹಿತ ಅನೇಕರು ಕೋರ್‌ ಕಮಿಟಿ ಸಭೆಯಲ್ಲಿ ಸೋತವರಿಗೆ ಟಿಕೆಟ್‌ ಬೇಡ ಎನ್ನುವ ಮೂಲಕ ಸಿ.ಟಿ.ರವಿ ಆಯ್ಕೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಸುಮಲತಾಗೆ ಟಿಕೆಟ್‌ ನೀಡುವ ಮೂಲಕ ಮಹಿಳೆ ಹಾಗೂ ಒಕ್ಕಲಿಗ ಕೋಟಾವನ್ನು ಏಕಕಾಲಕ್ಕೆ ಭರ್ತಿಮಾಡುವ ಜತೆಗೆ, ಲೋಕಸಭಾ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ನೀಡಿರುವ ಭರವಸೆಯನ್ನೂ ಈಡೇರಿಸಿದಂತಾಗುತ್ತದೆ ಎಂಬುದು ವರಿಷ್ಠರ ಲೆಕ್ಕಾಚಾರ.

Advertisement

ಮ.ನಾಗರಾಜ್‌ ಹೆಸರನ್ನು ಸಂಘ-ಪರಿವಾರವೇ ಸೂಚಿಸಿದೆ ಎನ್ನಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಪಕ್ಷ ನಿಷ್ಠೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೂ ಆದ್ಯತೆ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರ ಇಲ್ಲಿದೆ. ಆದರೆ ಹಿಂದುಳಿದ ವರ್ಗಕ್ಕೆ ಸೇರಿದ ಇಬ್ಬರಿಗೆ ಅವಕಾಶ ನೀಡುತ್ತಾರೆಯೇ ಎಂಬ ಪ್ರಶ್ನೆ ಇದೆ. ಎಲ್ಲ ಕುತೂಹಲಕ್ಕೂ ಶನಿವಾರ ಸಂಜೆ ತೆರೆ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next