ಅತ್ತಾವರ: ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಭಜಿತ ದ.ಕ. ಜಿಲ್ಲೆಯು ಉತ್ತಮ ಸಾಧನೆ ಮಾಡಿದ್ದು, ಇದರ ಪ್ರಗತಿಗೆ ಇಲ್ಲಿ ಶಿಕ್ಷಕರ ಒಗ್ಗಟ್ಟು ಕೂಡ ಕಾರಣವಾಗಿದೆ. ಶಿಕ್ಷಣ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲು ಕೆಲವೊಂದು ಆಡಳಿತಾತ್ಮಕ ಬದಲಾವಣೆಗಳು ಕೂಡ ಅನಿವಾರ್ಯವಾಗಿದೆ ಎಂದು ಶಾಸಕ ಜೆ.ಆರ್. ಲೋಬೋ ಹೇಳಿದರು.
ಅವರು ಮಂಗಳವಾರ ಇಲ್ಲಿನ ಎಸ್.ಎಂ. ಕುಶೆ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಪ.ಪೂ.ಕಾಲೇಜುಗಳ ಪ್ರಾಚಾರ್ಯರ ಸಂಘ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಗೆ ಶೈಕ್ಷಣಿಕವಾಗಿ ಉತ್ತಮ ಹೆಸರಿದ್ದರೂ, ಇಲ್ಲಿನ ಕೆಲವೊಂದು ಅಹಿತಕರ ಘಟನೆಗಳು ಕೆಟ್ಟ ಹೆಸರು ತರುತ್ತಿದೆ. ಇದರಿಂದ ದೂರದೂರುಗಳಿಂದ ಇಲ್ಲಿಗೆ ಬರಲು ಹಿಂದೇಟು ಹಾಕುವ ಸ್ಥಿತಿಯೂ ನಿರ್ಮಾಣವಾಗಬಹುದು ಎಂದು ಹೇಳಿದರು.
ರಾಜ್ಯದ ಸರಕಾರಿ ಶಾಲೆಗಳು ಜಿ.ಪಂ.ಗಳ ಕೆಳಗೆ ಬರುತ್ತಿರುವುದರಿಂದ ನಗರ ಪ್ರದೇಶಗಳ ಶಾಲೆಗಳನ್ನು ಕೇಳುವವರೇ ಇಲ್ಲವಾಗಿದೆ. ಈ ಕುರಿತು ಶಾಸನ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ ಎಂದರು.
ಮಂಗಳೂರು ವಿವಿ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಡಾ| ರವಿಶಂಕರ್ ಉಪನ್ಯಾಸ ನೀಡಿ, ಶಿಕ್ಷಕರು ವಿದ್ಯಾರ್ಥಿಗಳ ಭಾವನೆಯನ್ನು ಅರ್ಥ ಮಾಡಿಕೊಂಡು ಅವರಿಗೆ ಅವಕಾಶಗಳನ್ನು ನೀಡಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ಶಿಕ್ಷಕರು ನಿರಂತರವಾಗಿ ಅಧ್ಯಯನ ಶೀಲರಾಗಿದ್ದಾಗ ಅವರ ಜ್ಞಾನವೂ ಬೆಳೆಯುತ್ತದೆ ಎಂದರು.