Advertisement

ದಾಸ್ಯದ ಸಂಕೋಲೆ ಕಳಚಿದ ಸಿಂಹಾವಲೋಕನ ಅಗತ್ಯ

02:05 PM May 29, 2022 | Niyatha Bhat |

ಹೊಸನಗರ: ದೇಶದ ದಾಸ್ಯದ ಸಂಕೋಲೆ ಕಳಚಿ ಮುಕ್ಕಾಲು ಶತಮಾನ ಕಳೆದಿದೆ. ಈ ದೇಶ ನಡೆದು ಬಂದ ದಾರಿಯ ಬಗ್ಗೆ ಸಿಂಹಾಲೋಕನದ ಅಗತ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ತಾಲೂಕಿನ ಇತಿಹಾಸ ಪ್ರಸಿದ್ಧ ತಾಲೂಕಿನ ಬಿದನೂರು ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ, ಮೂಡುಗೊಪ್ಪ ಗ್ರಾಪಂ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ “ಅಮೃತ ಭಾರತೀಗೆ ಕನ್ನಡದಾರತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರ ಋಣದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಎರಡು ರೀತಿಯ ಹೋರಾಟ ನಡೆಯುತ್ತದೆ. ಮಹಾತ್ಮ ಗಾಂಧಿಧೀಜಿಯ ಶಾಂತಿ, ಅಹಿಂಸಾತ್ಮಕ ಹೋರಾಟ ಸಹಸ್ರಾರು ಮಂದಿಯನ್ನು ಆಕರ್ಷಿಸುತ್ತಿದೆ. ಮತ್ತೂಂದು ಮಗ್ಗುಲಲ್ಲಿ ಶಾಂತಿಯಿಂದ ಸ್ವಾತಂತ್ರ್ಯ ಸಿಗದು. ಕ್ರಾಂತಿಯ ಕಿಡಿಯಿಂದ ಮಾತ್ರ ಸಾಧ್ಯ ಎಂದು ಹೋರಾಟ ನಡೆಸುತ್ತಾರೆ. ನೇಣುಗಂಬವನ್ನು ಏರುತ್ತಾರೆ. ಸಾವಿಗೆ ಅಂಜದೆ ದೇಶಕ್ಕಾಗಿ ಜೀವ ಬಲಿಕೊಟ್ಟವರ ಸಂಖ್ಯೆ ಕೂಡ ಹೆಚ್ಚಿದೆ ಎಂದರು.

ಇಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್‌ ಅವರ ಜನುಮದಿನ. ಸಾವರ್ಕರ್‌ ಬಗ್ಗೆ ಬೇಕಾದಷ್ಟು ಬಾಯಿಗೆ ಬಂದಂತೆ ಮಾತನಾಡುವವರು ಇದ್ದಾರೆ. ಆದರೆ ಸಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್‌ ಅವರಂತವರು ವಿರಳ. ಅವರನ್ನು ಇಂಗ್ಲಿಷರು ಜೈಲಿನಲ್ಲಿನಿಟ್ಟು, ನಡೆಸಿಕೊಂಡ ರೀತಿ ಹೇಯವಾಗಿತ್ತು. ವಿಶೇಷವಾಗಿ ವಿನ್ಯಾಸ ಮಾಡಿರುವ ಜೈಲಿಗೆ ಭೇಟಿ ನೀಡಿ ವಾಪಸ್‌ ಬರುವಾಗ ಸಾವರ್ಕರ್‌ ಅವರನ್ನು ನೆನೆದು ಕಟುಕರ ಕಣ್ಣಲ್ಲೂ ಕೂಡ ನೀರು ಬರುತ್ತದೆ ಎಂದರು.

ದೇಶಕ್ಕಾಗಿ ಬಲಿಯಾದ ಇಂತಹ ಸಾವಿರಾರು ಜನರು ಹುತಾತ್ಮರಾಗಿದ್ದಾರೆ. ಇದೆನ್ನೆಲ್ಲ ಗಮನದಲ್ಲಿಟ್ಟುಕೊಂಡು ನಾವೆಲ್ಲಾ ಸಂಕಲ್ಪ ಮಾಡಬೇಕಿದೆ. ವ್ಯಕ್ತಿ ಮತ್ತು ದೇಶದ ವಿಚಾರ ಬಂದಾಗ ದೇಶ ಮೊದಲು ಎಂಬ ಭಾವನೆಯನ್ನು ಹೊಂದಬೇಕಿದೆ ಎಂದರು.

ಪ್ರಾಮಾಣಿಕತೆಯ ಕೊರತೆ

Advertisement

ನಮ್ಮ ದೇಶದಲ್ಲಿ ಎಲ್ಲಾ ಶ್ರೀಮಂತಿಕೆ ಇದೆ. ಆದರೆ ಪ್ರಾಮಾಣಿಕತೆಯ ಕೊರತೆ ಇದೆ. ದೇಶದಲ್ಲಿ ಭ್ರಷ್ಟಾಚಾರ ಹೋಗಿ ಪ್ರಾಮಾಣಿಕತೆ ಮೇಳೈಸಿದ್ದರೆ ಅಮೆರಿಕಕ್ಕೂ ನಾವು ಸಾಲ ಕೊಡಬಹುದು. ನಮ್ಮ ಬೆವರ ಹನಿಯಿಂದ ನಾವು ಬದುಕಬೇಕು ಎಂಬ ನಿರ್ಧಾರಕ್ಕೆ ಬರಬೇಕಿದೆ. ನಮ್ಮ ದೇಶ ಜನಸಂಖ್ಯೆಯಲ್ಲಿ ಮತ್ತು ವಿಸ್ತೀರ್ಣದಲ್ಲಿ ಎರಡನೇ ದೊಡ್ಡ ದೇಶವಾಗಿದೆ ಎಂದರು. ಪತ್ರಕರ್ತ ಸಂತೋಷ ತಮ್ಮಯ್ಯ ಉಪನ್ಯಾಸ ನೀಡಿದರು.

ದಿಲ್ಲಿ ಬಾಗಿಲಿನಿಂದ ಮೆರವಣಿಗೆ

ದಿಲ್ಲಿ ಬಾಗಿಲಿನಿಂದ ಬಿದನೂರು ಕೋಟೆ ಬಾಗಿಲವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಚಂಡೆ ವಾದನ, ನಗಾರಿ ವಾದನ ಸೇರಿದಂತೆ ಸ್ಥಳೀಯ ಶಾಲಾ ಮಕ್ಕಳ ಛದ್ಮವೇಷ ಎಲ್ಲರ ಗಮನ ಸೆಳೆಯಿತು.

ಡಾ| ಸಾಸ್ವೇಹಳ್ಳಿ ಸತೀಶ್‌ ನಿರ್ದೇಶನದಲ್ಲಿ ‘ಏಸೂರ ಕೊಟ್ಟರು ಈಸೂರ ಬಿಡೆವು’ ಎಂಬ ನಾಟಕ ಪ್ರದರ್ಶನಗೊಂಡಿತು. ರಾಷ್ಟ್ರಗೀತೆ, ನಾಡಗೀತೆಗಳನ್ನು ಮೊಳಗಿಸಲಾಯಿತು.

ಜಿಲ್ಲಾಧಿಕಾರಿ ಡಾ| ಸೆಲ್ವಮಣಿ, ಶಿವಮೊಗ್ಗ ಎಸ್ಪಿ ಡಾ| ಲಕ್ಷ್ಮೀಪ್ರಸಾದ್‌, ಸಾಗರ ಎಸಿ ಡಾ| ಎಲ್‌. ನಾಗರಾಜ್‌, ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ, ರಂಗಾಯಣ ಅಧ್ಯಕ್ಷರಾದ ಸಂದೇಶ ಜವಳಿ, ತಹಶೀಲ್ದಾರ್‌ ವಿ.ಎಸ್. ರಾಜೀವ್‌, ತಾಪಂ ಕಾರ್ಯ ನಿರ್ವಹಣಾ ಧಿಕಾರಿ ಸಿ.ಆರ್. ಪ್ರವೀಣ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್‌, ವಿವಿಧ ಇಲಾಖಾಧಿಕಾರಿಗಳು ಇದ್ದರು.

ಪೂರ್ವ ಸಿದ್ಧತೆ ಕೊರತೆ

ಸರ್ಕಾರಿ ಕಾರ್ಯಕ್ರಮವಾಗಿ ನಡೆಯಿತಾದರೂ ಪೂರ್ವಸಿದ್ದತೆ ಇರದ ಕಾರಣ ಊಟ- ಉಪಚಾರ ವಿಚಾರದಲ್ಲಿ ಗೊಂದಲ ಕಂಡು ಬಂದಿತು. ಅಲ್ಲದೆ ಹೊರರಾಜ್ಯ ಸೇರಿದಂತೆ 150ಕ್ಕೂ ಹೆಚ್ಚು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕರ್ತರು, ಸ್ಥಳೀಯ ಶಾಲಾ ಮಕ್ಕಳು, ಹೊರತು ಪಡಿಸಿದರೆ ಸ್ಥಳೀಯರ ಭಾಗವಹಿಸುವಿಕೆ ವಿರಳವಾಗಿತ್ತು. ಅದರಲ್ಲೂ ಕೋಟೆ ಆವರಣದಲ್ಲಿ ಶಾಮಿಯಾನ ಹಾಕಿ ಕಾರ್ಯಕ್ರಮ ಮಾಡಿದ್ದು ವೇದಿಕೆ ಕೋಟೆ ಸೊಬಗು ಸೆಳೆಯುವಲ್ಲಿ ವಿಫಲವಾಯಿತು.

ಸೆಲ್ಫಿ – ಡ್ಯಾನ್ಸ್

ಕಾರ್ಯಕ್ರಮಕ್ಕೆ ಬಂದವರಲ್ಲಿ ಬಹುತೇಕರು ಹೊರಗಡೆಯವರೇ ಆದ ಕಾರಣ ಕೋಟೆ ಸುತ್ತುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಾ ರೀಲ್‌ ಮಾಡುತ್ತ ಸಂಭ್ರಮಿಸಿದ್ದು ಕಂಡು ಬಂದಿತು. ಆದರೆ ಇವರ್ಯಾರೂ ಕಾರ್ಯಕ್ರಮದ ಗೊಡವೆಗೆ ಹೋಗದಿರುವುದು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next