ಕುಂದಾಪುರ: ಬಂಡವಾಳಶಾಹಿ, ಆಳುವ ವರ್ಗದ ಸರ್ವಾಧಿಕಾರಿ ಧೋರಣೆಯಿಂದಾಗಿ ದುಡಿಯುವ ವರ್ಗ, ರೈತರು, ಕೂಲಿ – ಕಾರ್ಮಿಕ ವರ್ಗದವರು ಈಗಲೂ ಮೂಲ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮೂಲ ಪರಿಹಾರಕ್ಕಾಗಿ ಎಲ್ಲ ಸಂಘಟನೆಗಳು ಸಂಘಟಿತರಾಗಿ ಹೋರಾಡಬೇಕಾದ ಅಗತ್ಯವಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ. ಶಂಕರ್ ಹೇಳಿದರು.
ಬುಧವಾರ ಇಲ್ಲಿನ ಶಾಸ್ತ್ರಿ ವೃತ್ತದ ಬಳಿ ಸಿಐಟಿಯು ಕುಂದಾಪುರ ಘಟಕದ ವತಿಯಿಂದ ಮೇ ದಿನಾಚರಣೆ ಪ್ರಯುಕ್ತ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಜನವರಿಯಲ್ಲಿ ರಾಷ್ಟ್ರಾದ್ಯಂತ ನಡೆದ ಕಾರ್ಮಿಕ ವರ್ಗದ ಬೃಹತ್ ರ್ಯಾಲಿಯಲ್ಲಿ 20 ಕೋಟಿಗೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ಆಳುವ ವರ್ಗದ, ಬಂಡವಾಳ ಶಾಹಿ, ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ಬದಲಾವಣೆ ಬಯಸಿದ್ದು ಸ್ಪಷ್ಟವಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸದಿದ್ದರೂ ಅದೇ ರೀತಿಯ ವಾತವಾರಣವಿದೆ. ದೇಶದ ಏಕತೆ, ಸಮಾನತೆಗಾಗಿ ನಾವೆಲ್ಲ ಮತ್ತೂಮ್ಮೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದರು.
ಸಿಐಟಿಯು ಕುಂದಾಪುರ ಘಟಕದ ಅಧ್ಯಕ್ಷ ಎಚ್. ನರಸಿಂಹ ಅಧ್ಯಕ್ಷತೆ ವಹಿಸಿದ್ದರು. ಸಿಡಬ್ಲ್ಯುಎಫ್‌ಐನ ಅಧ್ಯಕ್ಷ ಯು. ದಾಸ್ ಭಂಡಾರಿ, ಹೆಂಚು ಕಾರ್ಮಿಕ ಸಂಘದ ಅಧ್ಯಕ್ಷ ವಿ. ನರಸಿಂಹ, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಪ್ರ. ಕಾರ್ಯದರ್ಶಿ ಬಲ್ಕಿàಸ್ ಬಾನು, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ರತಿ ಶೆಟ್ಟಿ, ರಿಕ್ಷಾ ಚಾಲಕ – ಮಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಬರೆಕಟ್ಟು, ಡಿವೈಎಫ್‌ಐ ರಾಜೇಶ ವಡೇರಹೋಬಳಿ, ಅಕ್ಷರದಾಸೋಹ ಸಂಘಟನೆ ಕಾರ್ಯದರ್ಶಿ ನಾಗರತ್ನಾ, ರಮೇಶ್ ಗುಲ್ವಾಡಿ ಮತ್ತಿತರರು ಉಪಸ್ಥಿತರಿದ್ದರು.ಸಿಡಬ್ಲ್ಯುಎಫ್‌ಐ ಪ್ರ. ಕಾರ್ಯದರ್ಶಿ ಸುರೇಶ್ ಕಲ್ಲಾಗರ ಸ್ವಾಗತಿಸಿದರು. ಸಂತೋಷ್ ಹೆಮ್ಮಾಡಿ ವಂದಿಸಿದರು.
ಬೃಹತ್ ಜಾಥಾ
ಸಮಾವೇಶಕ್ಕೂ ಮುನ್ನ ಕಾರ್ಮಿಕ ದಿನಾಚರಣೆ ಅಂಗವಾಗಿ ಕುಂದಾಪುರ ಶಾಸಿŒ ವೃತ್ತದಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಜಾಥಾವು ಪಾರಿಜಾತ ಸರ್ಕಲ್ ಮೂಲಕವಾಗಿ ಹೊಸ ಬಸ್ ನಿಲ್ದಾಣವಾಗಿ ಬಳಿಕ ಶಾಸ್ತ್ರಿ ವೃತ್ತದ ಬಳಿ ಸಮಾಪನಗೊಂಡಿತು. ಈ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.