Advertisement

ರಾಯಚೂರಲ್ಲಿ ನಡೆದಿದೆ “ನಾಯಕ’ಕಾದಾಟ

11:29 PM Apr 14, 2019 | Lakshmi GovindaRaju |

ರಾಯಚೂರು: ಇಷ್ಟು ವರ್ಷ ಜಾತಿ, ಕುಟುಂಬ ರಾಜಕಾರಣ, ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ನಡೆಯುತ್ತಿದ್ದ ಲೋಕಸಭಾ ಚುನಾವಣೆ ಈ ಬಾರಿ ದೇಶದ ಅಭಿವೃದ್ಧಿ ಆಧಾರಿತವಾಗಿ ನಡೆಯುತ್ತಿರುವುದು ರಾಯಚೂರು ಲೋಕಸಭಾ ಕ್ಷೇತ್ರದ ವಿಶೇಷತೆ.

Advertisement

ಕಣ ಚಿತ್ರಣ: ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಈ ಕ್ಷೇತ್ರಕ್ಕೆ ನಡೆದ 16 ಚುನಾವಣೆಗಳಲ್ಲಿ ಬಿಜೆಪಿ ಸೇರಿ ಇತರರು ಗೆದ್ದಿರುವುದು ಕೇವಲ ಮೂರು ಬಾರಿ. ಆದರೆ, ಮೋದಿ ಪ್ರಬಲ ಅಲೆಯನ್ನೇ ನೆಚ್ಚಿಕೊಂಡಿರುವ ಬಿಜೆಪಿ ಈ ಬಾರಿ ದೇಶಾಭಿವೃದ್ಧಿ ಅಸ್ತ್ರ ಪ್ರಯೋಗಿಸುವ ಮೂಲಕ ಕಾಂಗ್ರೆಸ್‌ ಮಣಿಸುವ ತಂತ್ರಗಾರಿಕೆ ಹೆಣೆದಿದೆ.

ಕಾಂಗ್ರೆಸ್‌ನ ಹಾಲಿ ಸಂಸದ ಬಿ.ವಿ.ನಾಯಕ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದರೆ, ಬಿಜೆಪಿ, ಕಾಂಗ್ರೆಸ್‌ ವಲಸಿಗ, ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕರನ್ನು ಅಖಾಡಕ್ಕಿಳಿಸಿದೆ. ಹಿಂದೆ ಈ ಕ್ಷೇತ್ರದಿಂದ ವೆಂಕಟೇಶ ನಾಯಕ ನಾಲ್ಕು ಬಾರಿ ಆಯ್ಕೆಯಾಗಿದ್ದರೆ, ಈಗ ಅವರ ಪುತ್ರ ಬಿ.ವಿ.ನಾಯಕ ಒಂದು ಅವ ಧಿ ಪೂರ್ಣಗೊಳಿಸಿದ್ದಾರೆ.

ಐದು ಅವಧಿಗೆ ತಂದೆ-ಮಕ್ಕಳು ಅಧಿ ಕಾರ ನಡೆಸಿದರೂ ಕ್ಷೇತ್ರ ಮಾತ್ರ ಅಭಿವೃದ್ಧಿ ಹೊಂದಿಲ್ಲ ಎಂಬ ಅಸ್ತ್ರವನ್ನೇ ಬಿಜೆಪಿ ನಾಯಕರು ಪ್ರಚಾರದಲ್ಲಿ ಪ್ರಯೋಗಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಹಾಲಿ ಸಂಸದರ ವಿರೋಧಿ ಅಲೆ, ಮೋದಿ ಅಲೆ ಇದ್ದು, ಬಿಜೆಪಿ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯತ್ನದಲ್ಲಿದೆ.

ಜತೆಗೆ, ದೇಶಾಭಿಮಾನ, ಅಭಿವೃದ್ಧಿ ವಿಚಾರಗಳು ಬಿಜೆಪಿಗೆ ವರವಾಗುತ್ತಿವೆ. ಆದರೆ, ಕಳೆದ ಬಾರಿ ಮೋದಿ ಅಲೆ ಮೆಟ್ಟಿ ನಿಂತ ಕಾಂಗ್ರೆಸ್‌ ಅಭ್ಯರ್ಥಿ ಈ ಬಾರಿಯೂ ಅದೇ ಆತ್ಮವಿಶ್ವಾಸದಲ್ಲಿದ್ದಾರೆ. 371 ಕಲಂನಡಿ ವಿಶೇಷ ಸ್ಥಾನಮಾನದ ಕೊಡುಗೆ, ಕಾಂಗ್ರೆಸ್‌ನ ತಳಮಟ್ಟದ ಸಂಘಟನೆ ಅವರ ಬಲ ಎಂದರೆ ತಪ್ಪಿಲ್ಲ. ಜೆಡಿಎಸ್‌ ಬೆಂಬಲ ಅವರ ಆತ್ಮವಿಶ್ವಾಸಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

Advertisement

ಆಂತರಿಕ ಭಿನ್ನಮತವೇ ಸವಾಲು:ಆದರೆ, ಕಾಂಗ್ರೆಸ್‌ಗೆ ಮೈತ್ರಿ ಪಕ್ಷ ಜೆಡಿಎಸ್‌ನ ಆಂತರಿಕ ಭಿನ್ನಮತ ಸವಾಲಾಗಿ ಪರಿಣಮಿಸಿದೆ. ಜೆಡಿಎಸ್‌ ಮತಗಳು ಸಿಗುವುದೋ, ಇಲ್ಲವೋ ಎನ್ನುವ ಗೊಂದಲ ಶುರುವಾಗಿದೆ. ಸ್ಥಳೀಯ ಮಟ್ಟದ ರಾಜಕಾರಣ, ಕಾರ್ಯಕರ್ತರಲ್ಲಿನ ಅಸಮಾಧಾನಗಳು ಇದಕ್ಕೆ ಕಾರಣ.

ಇನ್ನು, ಕಾಂಗ್ರೆಸ್‌ ವಲಸಿಗ ನಾಯಕರೇ ಬಿಜೆಪಿ ಅಭ್ಯರ್ಥಿಯಾಗಿರುವುದು ಮತ ವಿಭಜನೆಗೆ ಅನುವು ಮಾಡಿದೆ. ಅಂತಿಮ ಕಣದಲ್ಲಿ ಐವರು ಅಭ್ಯರ್ಥಿಗಳಿದ್ದು, ಕಾಂಗ್ರೆಸ್‌-ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಉಳಿದಂತೆ ಬಿಎಸ್‌ಪಿ, ಎಸ್‌ಯುಸಿಐ ಹಾಗೂ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳಿದ್ದು, ಅವರಿಂದ ನಿರೀಕ್ಷಿತ ಮಟ್ಟದ ಪೈಪೋಟಿ ಕಂಡು ಬರುತ್ತಿಲ್ಲ.

ಕಾಂಗ್ರೆಸ್‌-ಜೆಡಿಎಸ್‌ ಪ್ರಾಥಮಿಕ ಹಂತದಿಂದಲೂ ಒಂದಾಗಿದ್ದೇ ಆದಲ್ಲಿ ಬಿಜೆಪಿ ಗೆಲುವು ಕಷ್ಟವಾಗಲಿದೆ. ಇನ್ನು, ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯದ ಜತೆಗೆ ಮೋದಿ ಅಲೆ ಯುವ ಮತದಾರರನ್ನು ಸೆಳೆದಿದ್ದೇ ಆದಲ್ಲಿ ಕಾಂಗ್ರೆಸ್‌ಗೆ ಸಂಕಷ್ಟ ತಪ್ಪಿದ್ದಲ್ಲ.

ನಿರ್ಣಾಯಕ ಅಂಶ: ಕಾಂಗ್ರೆಸ್‌ ಅಭ್ಯರ್ಥಿಗೆ ಕ್ಷೇತ್ರದಲ್ಲಿ ವಿರೋ ಧಿ ಅಲೆ ಹೆಚ್ಚಾಗಿದ್ದು, ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಹೀಗಾಗಿ, ಮೋದಿ ಹೆಸರಲ್ಲಿ ಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರು ಅಭಿವೃದ್ಧಿ ನೆಪ ಹೇಳುತ್ತಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿರುವ ಕಾರಣ ಎಸ್ಟಿ ಮತಗಳು ವಿಭಜನೆ ಆಗಲಿದ್ದು, ಪ್ರಭಾವಿ ಲಿಂಗಾಯತ ನಾಯಕರ ಬೆಂಬಲ ಹಾಗೂ ಲಿಂಗಾಯತ ಮತಗಳು ನಿರ್ಣಾಯಕವಾಗಲಿವೆ. ಲಿಂಗಾಯತರ ಒಲವು ಯಾರಿಗೆ ಸಿಗುವುದೋ ಅವರಿಗೆ ಗೆಲುವು ಸುಲಭ.

ಕ್ಷೇತ್ರವ್ಯಾಪ್ತಿ: ರಾಯಚೂರು ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿವೆ. ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್‌ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶೇ.35.38 ಮತ ಪಡೆದರೆ, ಬಿಜೆಪಿ ಶೇ.39.76 ಮತ ಗಳಿಸಿದೆ. ಜೆಡಿಎಸ್‌ ಶೇ.16.24 ಮತ ಪಡೆದಿತ್ತು.

ಮತದಾರರು
ಒಟ್ಟು – 18,93,576.
ಪುರುಷರು – 9,39,752
ಮಹಿಳೆಯರು – 9,53,457
ಇತರರು – 367

ಜಾತಿ ಲೆಕ್ಕಾಚಾರ
ಪರಿಶಿಷ್ಟ ಪಂಗಡ – 3, 60,000.
ಪರಿಶಿಷ್ಟ ಜಾತಿ -3, 40,000.
ಲಿಂಗಾಯತ -2, 95, 000.
ಮುಸ್ಲಿಂ -2, 50,000.
ಕುರುಬರು -2, 40,000.
ಗಂಗಾಮತಸ್ಥ -1, 94,000.
ಇತರರು – 2, 01,000.

* ಸಿದ್ದಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next