ಗುಂಡ್ಲುಪೇಟೆ: ರಾಜ್ಯದ ಗಡಿ ಭಾಗವಾದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿನ ಮೂಲೆಹೊಳೆ ಹಾದು ಹೋಗಿರುವ 766ರ ರಾಷ್ಟ್ರೀಯ ಹೆದ್ದಾರಿಯ ಕೇರಳ ರಾಜ್ಯದ ಗಡಿಯಲ್ಲಿ ನಕ್ಸಲರ ನುಸುಳುವಿಕೆ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳನ್ನೂ ಬಿಗಿ ಭದ್ರತೆಗಾಗಿ ತಪಾಸಣೆ ಮಾಡಲಾಗುತ್ತಿದೆ.
ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲೆಹೊಳೆಯ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಪೊಲೀಸ್ ಚೆಕ್‌ಪೋಸ್ಟ್ ಪ್ರಾರಂಭಿಸಲಾಗಿದೆ. ಮಿಷನ್ ಗನ್ ಹೊಂದಿದ 5 ಕ್ಷಿಪ್ರ ಕಾರ್ಯಾಚರಣೆ ಪಡೆಯು ಕೇರಳದಿಂದ ಬರುವ ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದೆ. ನಕ್ಸಲ್ ನಿಗ್ರಹದಳದ ಸಿಬ್ಬಂದಿ ಕೇರಳ ಹಾಗೂ ತಮಿಳುನಾಡಿನ ಗಡಿಗಳ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿದ್ದಾರೆ.
ಪೊಲೀಸರಿಗೆ ಸ್ಥಳಾವಕಾಶ ನೀಡಲು ಕಿರಿಕಿರಿ: ಈ ಹಿಂದೆ ಮೂಲೆಹೊಳೆ ಗಡಿಯಲ್ಲಿದ್ದ ಪೊಲೀಸ್ ಚೆಕ್‌ಪೋಸ್ಟ್ ತೆರವುಗೊಳಿಸಿದ ನಂತರ ಅರಣ್ಯ ಚೆಕ್ ಪೋಸ್ಟ್ ಮಾತ್ರ ಕಾರ್ಯನಿರ್ವಸುತ್ತಿದೆ. ಸದ್ಯ ಕೇರಳದಿಂದ ನಕ್ಸಲರು ರಾಜ್ಯಕ್ಕೆ ನುಸುಳುವ ಭೀತಿಯಿಂದ ಮೂಲೆಹೊಳೆಯಲ್ಲಿ ಮತ್ತೆ ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಿ, ಚೆಕ್ ಪೋಸ್ಟ್ ಪ್ರಾರಂಭಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇದಕ್ಕಾಗಿ ಐವರು ಸಿಬ್ಬಂದಿ ಹಾಗೂ ವಜ್ರ ವಾಹನ ನಿಯೋಜಿಸಿದ್ದರೂ ಅರಣ್ಯ ಸಿಬ್ಬಂದಿ ಮಾತ್ರ ಸ್ಥಳಾವಕಾಶ ನೀಡಲು ಹಿರಿಯ ಅರಣ್ಯಾಧಿಕಾರಿಗಳಿಂದ ಲಿಖೀತ ಅನುಮತಿ ಅಗತ್ಯ ಎಂದು ನಿರಾಕರಿಸಿದ್ದರು.
ವಿಷಯ ತಿಳಿದ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ಮೌಖೀಕ ಸೂಚನೆ ನೀಡುವ ಮೂಲಕ ಪೊಲೀಸರು ತಪಾಸಣಾ ಕಾರ್ಯನಡೆಸಲು ಅವಕಾಶ ಮಾಡಿಕೊಟ್ಟರು. ಅಲ್ಲದೇ, ರಾತ್ರಿ 9ಕ್ಕೆ ಸಂಚಾರ ಬಂದ್ ಆದ ನಂತರ ಪೊಲೀಸ್ ಸಿಬ್ಬಂದಿ ಮದ್ದೂರು ವಲಯದ ಕಚೇರಿಯ ಆವರಣದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ನಕ್ಸಲರ ನುಸುಳುವಿಕೆಯನ್ನು ತಡೆಯಲು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಕಾರ್ಯಾಚರಣೆಗಿಳಿದಿದೆ.