ಕುಂದಾಪುರ: ಕಳೆದೆರಡು ವರ್ಷದಿಂದ ಹಬ್ಬಗಳ ಆಚರಣೆಗೆ ಅಂಟಿದ್ದ ಕೋವಿಡ್‌ದಿಂದ ಈ ವರ್ಷ ಕೊಂಚ ವಿಶ್ರಾಂತಿ ದೊರಕಿದ್ದು, ಮತ್ತೆ ತಾಸೆಯ ಸದ್ದು ಕೇಳಲಾರಂಭಿಸಿದೆ.
ಪ್ರತೀ ವರ್ಷ ಕರಾವಳಿ ಭಾಗದಲ್ಲಿ ಗಣೇಶ ಚತುರ್ಥಿ, ದಸರಾಕ್ಕೆ ಹುಲಿವೇಷ ಸದ್ದು ಎಲ್ಲರನ್ನು ಮನೋರಂಜನೆಗೊಳಿಸುತ್ತಿತ್ತು. ಕುಂದಾಪುರದ ಟಿ.ಟಿ. ರಸ್ತೆಯ ಭರತ್ಕಲ್‌ನ ಬಸವೇಶ್ವರ ಯುವಕ ಮಂಡಲದವರ ಆಶ್ರಯದಲ್ಲಿ ಟಿ.ಟಿ. ಟೈಗರ್ಸ್ ಸತತ 21 ವರ್ಷಗಳಿಂದ ಹುಲಿವೇಷ ಹಾಕುತ್ತಾ ಬಂದಿದ್ದು, ಈ ವರ್ಷ ವಿಭಿನ್ನವಾಗಿ ಹುಲಿವೇಷ ಹಾಕಿದ್ದಾರೆ.
ಎರಡು ವರ್ಷದಲ್ಲೇ ಜನ ಹುಲಿವೇಷವನ್ನು ಮರೆತಿದ್ದು, ಕಲೆ ನಶಿಸಿ ಹೋಗಬಾರದೆಂದು ಕೋವಿಡ್ ಹಾವಳಿ ನಡುವೆಯೂ ಹುಲಿವೇಷ ಹಾಕಿ ಪೇಟೆ ಸುತ್ತುತ್ತಿದ್ದಾರೆ. ನಾಗರಾಜ್, ರೋಹಿತ್, ಚರಣ್, ನಯನ್ ಕುಮಾರ್ ಉಸ್ತುವಾರಿಯಲ್ಲಿ ಯುವಕರ ತಂಡವೊಂದು ಉಡುಪಿ, ಮಂಗಳೂರಿನ ಕ್ರಮಕ್ಕಿಂತ ವಿಭಿನ್ನವಾಗಿ ಬಣ್ಣ ಹಚ್ಚಿ, ನೂತನ ಶೈಲಿಯ ಹುಲಿ ಹೆಜ್ಜೆ ಹಾಕಿ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನವರಾತ್ರಿ 8 ದಿನಗಳ ಕಾಲ ಬಣ್ಣ ಹಚ್ಚಿಕೊಂಡಿರುವ ಇವರು ಕುಂದೇಶ್ವರ ದೇವಸ್ಥಾನದ ಶಾರದೋತ್ಸವ ವಿಸರ್ಜನ ಮೆರವಣಿಗೆಯಲ್ಲಿ ಭಾಗವಹಿಸಿ ವರ್ಷದ ಕುಣಿತವನ್ನು ಕೊನೆಗೊಳಿಸುತ್ತಾರೆ.
ಇದನ್ನೂ ಓದಿ:ಜನ ಸೇವೆಯೆ ನಮ್ಮ ಆದ್ಯತೆ: ಸಚಿವ ವಿ.ಸೋಮಣ್ಣ
ಟಿ.ಟಿ. ಟೈಗರ್ಸ್ ಎಂಬ ಹುಲಿವೇಷ ತಂಡವನ್ನು ಹುಟ್ಟು ಹಾಕಿದ್ದು ವಿಲ್ಫೆಡ್ ಡಿ’ಸೋಜಾ ಅವರ ಅನಂತರ ಅವರ ಶಿಷ್ಯಂದಿರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.