Advertisement

ಪ್ರತಿ ಗ್ರಾಮದಲ್ಲಿ ರಾಷ್ಟ್ರಧ್ವಜ

01:33 AM Aug 01, 2019 | mahesh |

ಶ್ರೀನಗರ/ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿಯಾಗಿ ಹತ್ತು ಸಾವಿರ ಮಂದಿ ಇರುವ ಸೇನಾ ಸಿಬ್ಬಂದಿ ಕಳುಹಿಸಿದ್ದರ ಬೆನ್ನಲ್ಲಿಯೇ ಕೇಂದ್ರದಿಂದ ಮತ್ತೂಂದು ನಿರ್ಧಾರ ಪ್ರಕಟವಾಗಿದೆ. ಆ.15ರಂದು ನಡೆಯುವ ಸ್ವಾತಂತ್ರ್ಯ ದಿನ ಕಣಿವೆ ರಾಜ್ಯದ ಎಲ್ಲಾ ಪಂಚಾಯತ್‌ಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವುದರ ಬಗ್ಗೆ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮೂಲಗಳನ್ನು ಉಲ್ಲೇಖೀಸಿ ‘ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

Advertisement

ಪಂಚಾಯತ್‌ ಕಟ್ಟಡಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವ ನಿಟ್ಟಿನಲ್ಲಿ ತೊಂದರೆಯಾಗದಂತೆ ಹೆಚ್ಚುವರಿ ಪಡೆಗಳನ್ನು ರವಾನಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಆದ್ಯತೆಯಾಗಿದೆ ಎಂದು ಹಿರಿಯ ಅಧಿಕಾರಿ ನವದೆಹಲಿಯಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಪಂಚಾಯತ್‌ ಚುನಾವಣೆಯಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿ ಚುನಾಯಿತರಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ನಿರ್ದೇಶನ ನೀಡಿದೆ. ಈ ಕ್ರಮ ವರ್ಷಾಂತ್ಯಕ್ಕೆ ನಡೆಯಲಿದೆ ನಿರೀಕ್ಷಿಸಲಾಗಿರುವ ವಿಧಾನಸಭೆ ಚುನಾವಣೆ ನಿಟ್ಟಿನಲ್ಲಿಯೂ ಅದು ಮಹತ್ವ ಪಡೆದಿದೆ.

ಚರ್ಚೆಯಾಗಿತ್ತು: ನವದೆಹಲಿಯಲ್ಲಿ ಮಂಗಳವಾರ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದಿದ್ದ ಬಿಜೆಪಿ ನಾಯಕರ ಸಭೆಯಲ್ಲಿಯೂ ಚುನಾವಣೆಗೆ ಬೇಕಾಗಿರುವ ಸಿದ್ಧತೆಗಳ ಬಗ್ಗೆ ಚರ್ಚೆಯಾಗಿದೆ. ಪ್ರತಿಯೊಂದು ಪಂಚಾಯತ್‌ ಮಟ್ಟದಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗಾಗಿ ಅಗತ್ಯವಾಗಿರುವ ವಿತ್ತೀಯ ನೆರವು ಪೂರೈಕೆಯಾಗುವಂತೆಯೂ ನಿರ್ಧರಿಸಲಾಗಿದೆ. ಸಂವಿಧಾನದ 35ಎ ಮತ್ತು 370ನೇ ವಿಧಿ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ನೇಮಕ: ಚುನಾವಣೆಗೆ ಈಗಾಗಲೇ ಸಿದ§ತೆಯಲ್ಲಿ ತೊಡಗಿರುವ ಬಿಜೆಪಿ ಉಪಾಧ್ಯಕ್ಷ ಅವಿನಾಶ್‌ ರಾಯ್‌ ಖನ್ನಾ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ನವದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಈ ಘೋಷಣೆ ಮಾಡಿದ್ದಾರೆ.

Advertisement

ಯಾತ್ರೆ ರದ್ದು: ಕಣಿವೆ ರಾಜ್ಯದಲ್ಲಿ ಆ.4ರ ವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ, ಮುಂದಿನ ನಾಲ್ಕು ದಿನಗಳ ಕಾಲ ಯಾತ್ರೆ ರದ್ದು ಮಾಡಲಾಗಿದೆ.

ಮಹಿಳೆ ಸಾವು: ಇದೇ ವೇಳೆ ಗುರೇಜ್‌ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಸೇನಾ ಪಡೆಗಳು ನಡೆಸಿದ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ 50 ವರ್ಷದ ಮಹಿಳೆ ಅಸುನೀಗಿದ್ದಾರೆ. ಮಂಗಳವಾರ ಅವರು ಗಾಯಗೊಂಡಿದ್ದರು. ಬುಧವಾರವೂ ಗಡಿ ನಿಯಂತ್ರಣ ರೇಖೆಯಿಂದಾಚೆ ಗುಂಡು ಹಾರಾಟ ನಡೆದಿತ್ತು.

ನಾಳೆ ಚು.ಆಯೋಗ ಸಭೆ
ಈ ಬೆಳವಣಿಗೆಗೆ ಪೂರಕವಾಗಿ ಆ.2ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಶೈಲೇಂದ್ರ ಕುಮಾರ್‌ ಎಲ್ಲಾ 22 ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿದ್ದಾರೆ. ಆಯಾ ಜಿಲ್ಲೆಗಳಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಬಗ್ಗೆ ಪೂರ್ವ ಸಿದ್ಧತೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಯಾವ ರೀತಿಯಲ್ಲಿ ತಯಾರಿ ಬೇಕಾಗಿದೆ ಎಂಬುದರ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ. ಹಾಲಿ ಸಾಲಿನ ಅಮರನಾಥ ಯಾತ್ರೆ ಆ.15ರಂದು ಮುಕ್ತಾಯವಾಗಲಿದೆ. ಅದರ ಬಳಿಕವೇ ಚುನಾವಣೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿತ್ತು. ಆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜತೆ ನಡೆಸಲಿರುವ ಸಭೆ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next