Advertisement

ಕಿರಿದಾದ, ತಿರುವು ರಸ್ತೆಗೆ ಬೇಕು ಕಾಯಕಲ್ಪ

11:00 PM Dec 11, 2019 | mahesh |

ಅರಂತೋಡು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಅತೀ ಹತ್ತಿರದಿಂದ ಸಂಪರ್ಕ ಕಲ್ಪಿಸುವ ಅರಂತೋಡು- ಅಡ್ತಲೆ- ಮರ್ಕಂಜ- ಎಲಿಮಲೆ ಕಿರಿದಾದ ರಸ್ತೆಯಲ್ಲಿ ವಾಹನ ಸಂಚಾರ ತ್ರಾಸದಾಯಕವಾಗಿದೆ. ಇದರಿಂದ ರಸ್ತೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದರೂ ಸಂಪೂರ್ಣವಾಗಿ ಅಭಿವೃದ್ಧಿಗೊಳ್ಳದ ಕಾರಣ ಈ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುವ ಭಕ್ತರು ಹಾಗೂ ಸ್ಥಳೀಯರು ಸಮಸ್ಯೆಗೊಳಗಾಗಿದ್ದಾರೆ.

Advertisement

ಜನವರಿ ತಿಂಗಳಿನಲ್ಲಿ ಇಲಾಖೆಯ 8 ಲಕ್ಷ ರೂ. ಅನುದಾನದಲ್ಲಿ ರಸ್ತೆಯ ಎರಡು ಬದಿಗಳಿಗೆ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಈಗ ರಸ್ತೆಯ ಬದಿಗಳಲ್ಲಿ ಹಾಕಿರುವ ಮಣ್ಣು ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದ್ದು, ವಾಹನ ಸಂಚಾರಕ್ಕೆ ಅಪಾಯಕಾರಿ ಸ್ಥಿತಿಯಲ್ಲಿದೆ. ಪ್ರವಾಸಿಗರ ವಾಹನಗಳು ಈ ರಸ್ತೆಯಲ್ಲಿ ವೇಗವಾಗಿ ಸಂಚರಿಸುತ್ತಿದ್ದು, ವಾಹನಗಳು ಎದುರುಗೊಂಡಾಗ ಚಾಲಕರು ದಾರಿ ಕೊಡಲು ಜಾಗವಿಲ್ಲದೆ ಪರದಾಡುವ ಸ್ಥಿತಿ ಇದೆ.

ಕಿರಿದಾರ ರಸ್ತೆ
ಸುಮಾರು 24 ವರ್ಷಗಳ ಹಿಂದೆ ಈ ರಸ್ತೆ ಡಾಮರು ಕಂಡಿತ್ತು. ಬಳಿಕ ಒಂದು ಬಾರಿ ಮಾತ್ರ ಮರು ಡಾಮರು ಕಾಮಗಾರಿ ಆಗಿದೆ. ಆಗ ಬೆರಳೆಣಿಕೆಯ ವಾಹನ ಸಂಚಾರ ಈ ರಸ್ತೆಯಲ್ಲಿತ್ತು. ರಸ್ತೆ ತಿರುವು, ಏರಿಳಿತ ಹಾಗೂ ಹಂಪ್‌ಗ್ಳಿಂದ ಕೂಡಿದೆ. ರಸ್ತೆಯುದ್ದಕ್ಕೂ ಅನೇಕ ಮೋರಿಗಳಿದ್ದು, ಕಡಿದಾಗಿದೆ. ಹೆಚ್ಚು ತಿರುವುಗಳು ಇರುವುದರಿಂದ ವಾಹನ ಸವಾರಿಗೆ ಸೈಡ್‌ ಕೊಡುವುದೇ ಸಮಸ್ಯೆ ಎನಿಸುತ್ತಿದೆ. ಈ ಕಾರಣಕ್ಕಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಅಪಾಯಕಾರಿ
ಅರಂತೋಡು ರಾಷ್ಟ್ರೀಯ ಹೆದ್ದಾರಿಯಿಂದ ಅಡ್ತಲೆ- ಮರ್ಕಂಜ- ಎಲಿಮಲೆ ರಸ್ತೆಯನ್ನು ಸಂಪರ್ಕಿಸುವ ಕೂಡು ರಸ್ತೆ ವೈ.ಎಂ.ಕೆ. ಎಂಬಲ್ಲಿ ದೊಡ್ಡ ಚಡಾವು ಇದೆ. ಇಲ್ಲಿ ಲೋಡ್‌ ಜಾಸ್ತಿ ಇದ್ದರೆ ಬಸ್ಸುಗಳು ಮೇಲೇರುವುದಿಲ್ಲ. ಇಂತಹ ಸಂದರ್ಭದಲ್ಲಿ ಜನರನ್ನು ಇಳಿಸಿ, ಬಸ್ಸನ್ನು ಮೇಲಕ್ಕೆ ಕೊಂಡೊಯ್ದು ಮತ್ತೆ ಪ್ರಯಾಣಿಕರನ್ನು ಹತ್ತಿಸಿ ಕರೆದೊಯ್ಯಬೇಕಾಗುತ್ತದೆ. ಅಕಸ್ಮಾತ್ತಾಗಿ ಬಸ್‌ನ ಬ್ರೇಕ್‌ ವೈಫ‌ಲ್ಯವಾದರೆ ಬಸ್‌ ಹಿಂದಕ್ಕೆ ಚಲಿಸುತ್ತಾ ಬಂದು ರಾಷ್ಟ್ರೀಯ ಹೆದ್ದಾರಿಗೆ ಇಳಿಯುತ್ತದೆ. ಇದೂ ಅಪಾಯಕ್ಕೆ ಕಾರಣವಾಗಬಲ್ಲದು.

ಗೂಗಲ್‌ನಲ್ಲಿ ಮಾಹಿತಿ ಲಭ್ಯ
ಗೂಗಲ್‌ನಲ್ಲಿ ಈ ರಸ್ತೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಯಾಣಿಸಲು ಅತೀ ಹತ್ತಿರದ ರಸ್ತೆ ಎಂದು ಮಾಹಿತಿ ಲಭ್ಯವಿದ್ದು, ಇದನ್ನು ನೋಡಿಕೊಂಡು ಮಡಿಕೇರಿ, ಮೈಸೂರು, ಮಂಡ್ಯ, ಬೆಂಗಳೂರು ಭಾಗದವರು ತಲಕಾವೇರಿಗೆ ತೆರಳಿ ಈ ರಸ್ತೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯವನ್ನು ಸೇರುತ್ತಾರೆ.

Advertisement

ಅರಂತೋಡು- ಅಡ್ತಲೆ- ಮರ್ಕಂಜ -ಎಲಿಮಲೆ ರಸ್ತೆ ಸುಳ್ಯ – ಸುಬ್ರಹ್ಮಣ್ಯ ರಸ್ತೆಯನ್ನು ಎಲಿಮಲೆ ಎಂಬಲ್ಲಿ ಸಂಪರ್ಕಿಸುತ್ತದೆ. ಸುಳ್ಯ ತಾಲೂಕು ಕೇಂದ್ರದ ತೆರಳಿ ಸುಳ್ಯ -ಸುಬ್ರಹ್ಮಣ್ಯ ರಸ್ತೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಯಾಣಿಸಿದರೆ 13 ಕಿ.ಮೀ. ಸುತ್ತು ಬಳಸಿನ ದಾರಿ. ಅರಂತೋಡು- ಅಡ್ತಲೆ- ಮರ್ಕಂಜ ಎಲಿಮಲೆ ರಸ್ತೆ ಮೂಲಕ ಇಷ್ಟು ಅಂತರ ಕಡಿಮೆಯಾಗುತ್ತದೆ. ಭಕ್ತರ ಸಮಯ, ಶ್ರಮ ಹಾಗೂ ವಾಹನದ ಇಂಧನ ಉಳಿತಾಯವಾಗುತ್ತದೆ.

ತಿರುವಿನಿಂದ ಕೂಡಿದ ರಸ್ತೆ
ಈ ರಸ್ತೆಯ ಕೊಜಂಬೆ, ಹಾಸ್ಪಾರೆ, ಕೊಚ್ಚಿ ಎಂಬಲ್ಲಿ ಅಪಾಯಕಾರಿ ತಿರುವುಗಳಿಂದ ಕೂಡಿದ್ದು, ಅವುಗಳನ್ನು ತೆರವುಗೊಳಿಸಿ ರಸ್ತೆಯನ್ನು ನೇರಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕುಸಿದ ಮೋರಿಗಳು
ಅರಂತೋಡು-ಮರ್ಕಂಜ, ಎಲಿಮಲೆ ರಸ್ತೆಯ ಕಿನಾಲ ಜೋಡಿಯಲ್ಲಿ ಒಂದು ಮೋರಿ ಮತ್ತು ಹಾಸ್ಪಾರೆ ಬಳಿ ಎರಡು ಮೋರಿಗಳು ಕುಸಿದಿವೆ. ಮೋರಿ ಇನ್ನಷ್ಟು ಕುಸಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಮಳೆ ಹಾನಿ ಪರಿಹಾರದ 20 ಲಕ್ಷ ರೂ. ಅನುದಾನಲ್ಲಿ ಈ ರಸ್ತೆಯ ತೀರ ಹದಗೆಟ್ಟ ಈ ಭಾಗವನ್ನು ಡಾಮರು ಹಾಕಿ ದುರಸ್ತಿ ಪಡಿಸಲಾಗಿದೆ.

ಅರಂತೋಡು – ಎಲಿಮಲೆ ಸುಬ್ರಹ್ಮಣ್ಯ ಸಂಪರ್ಕ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಲೋಕೋಪಯೋಗಿ ಇಲಾಖೆಯಲ್ಲಿ ಈ ತನಕ ಯಾವುದೇ ಪ್ರಸ್ತಾವನೆ ಇಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ಪ್ರಯತ್ನ ಮಾಡಬೇಕೆಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.

ಮೇಲ್ದರ್ಜೆ ಅನಿವಾರ್ಯ
ಅರಂತೋಡು – ಎಲಿಮಲೆ ರಸ್ತೆ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಾವಿರಾರು ಭಕ್ತರು ತೆರಳುತ್ತಿದ್ದು, ಈಗ ವಾಹನ ದಟ್ಟಣೆ ಇದೆ. ಕೆಲವು ಅಪಾಯಕಾರಿ ತಿರುವುಗಳಿವೆ. ಇದನ್ನು ನೇರ ರಸ್ತೆಯಾಗಿ ಪರಿವರ್ತಿಸಬೇಕಾಗಿದೆ. ಇದು ಲೋಕೊಪಯೋಗಿ ಇಲಾಖೆಯ ರಸ್ತೆಯಾಗಿರುವ ಕಾರಣ ಮೇಲ್ದರ್ಜೆಗೆ ಏರಿಸುವುದು ಅನಿವಾರ್ಯವಾಗಿದೆ.
-ಶಿವರಾಮ ಅಡ್ತಲೆ, ಅರಂತೋಡು

ಪ್ರಸ್ತಾವನೆ ಇಲ್ಲ
ಎಲಿಮಲೆ, ಮರ್ಕಂಜ-ಅಡ್ತಲೆ-ಅರಂತೋಡು ರಸ್ತೆಯಲ್ಲಿ ತೀರಾ ಹದಗೆಟ್ಟಿದ್ದ ಭಾಗವನ್ನು ಮಳೆಹಾನಿ ಪರಿಹಾರದ 20 ಲಕ್ಷ ರೂ. ಅನುದಾನದಲ್ಲಿ ದುರಸ್ತಿ ಪಡಿಸಲಾಗಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಸದ್ಯ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಇಲ್ಲ.
– ಸಣ್ಣೇ ಗೌಡ , ಎ.ಇ.ಇ ಎಂಜಿನಿಯರ್‌, ಲೋಕೋಪಯೋಗಿ ಎಂಜಿನಿಯರ್‌

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next