ಶ್ರೀ ನಂದನೇಶ್ವರ ಯಕ್ಷಗಾನ ಮಿತ್ರಮಂಡಳಿಯ ವಜ್ರ ಮಹೋತ್ಸವ ಕಾರ್ಯಕ್ರಮ ಸರಣಿಯಡಿಯಲ್ಲಿ ಮಾ. 31ರಂದು ಪಣಂಬೂರಿನ ನಂದನೇಶ್ವರ ದೇಗುಲದ ರಜತಾಂಗಣಲ್ಲಿ ತಾಮ್ರಧ್ವಜ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಈ ಸಂದರ್ಭದಲ್ಲಿ ಯಕ್ಷಗಾನ ಮಂಡಳಿಗೆ ಸೇವೆ ಸಲ್ಲಿಸಿರುವ ಹಿರಿಯರಾದ ಪಿ.ರಾಮ ಐತಾಳ, ಪಿ.ಪರಮೇಶ್ವರ ಐತಾಳ ಮತ್ತು ಪಿ.ಶ್ರೀಧರ ಐತಾಳರನ್ನು ಗೌರವಿಸಲಾಗುವುದು.
ರಾಮ ಐತಾಳ: ಸರಕಾರಿ ಹುದ್ದೆಯಲ್ಲಿದ್ದ ರಾಮ ಐತಾಳರಿಗೆ ಯಕ್ಷಗಾನ ಹವ್ಯಾಸ. ಶ್ರೀ ಕೃಷ್ಣ, ವಿಷ್ಣು, ಹನೂಮಂತ ಮುಂತಾದ ಪಾತ್ರಗಳಲ್ಲಿ ಮಿಂಚಿದ್ದಾರೆ. ಸಹೋದರ ದಿ. ವೆಂಕಟ್ರಾಯ ಐತಾಳರ ಮಾರ್ಗದರ್ಶನದಲ್ಲಿ ಯಕ್ಷಗಾನ ಕಲಾವಿದರಾದವರು. ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಸಕ್ರಿಯರಾಗಿದ್ದಾರೆ.
ಪರಮೇಶ್ವರ ಐತಾಳ: ಅಗರಿ ಶೈಲಿಯನ್ನು ನಿಜಾರ್ಥದಲ್ಲಿ ಸಾಕಾರಗೊಳಿಸಿದ ಪ್ರತಿಭಾವಂತ ಪರಮೇಶ್ವರ ಐತಾಳರು. ಹವ್ಯಾಸಿ ಅರ್ಥದಾರಿ ಮತ್ತು ಭಾಗವತರಾಗಿರುವ ಪರಮೇಶ್ವರ ಐತಾಳರು ಸುಮಾರು ಎರಡು ದಶಕಗಳ ಕಾಲ ನಂದನೇಶ್ವರ ಯಕ್ಷಗಾನ ಮಂಡಳಿಯನ್ನು ಮುನ್ನಡೆಸಿದ್ದಾರೆ. ಬ್ರಹ್ಮಕಪಾಲದ ಕಿರಾತನ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿದೆ.
ಶ್ರೀಧರ ಐತಾಳ: ಮಹಿಳಾ ಯಕ್ಷಗಾನ ಮಂಡಳಿಯನ್ನು ಕಟ್ಟಿ ಬೆಳೆಸಿದ ಯಕ್ಷಗುರುಗಳು ಶ್ರೀಧರ ಐತಾಳರು. ಇಂದ್ರಜಿತು, ಮೇನಕೆ, ಈಶ್ವರ, ಶ್ರೀದೇವಿ ಮುಂತಾದ ಪಾತ್ರಗಳಲ್ಲಿ ಮಿಂಚಿದ್ದಾರೆ.
ಸುಧಾ ಭಾಗವತ್