Advertisement
ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಒಂದೊಂದು ಕ್ಷೇತ್ರದಲ್ಲೂ 50,000ದಿಂದ 60,000 ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಮಾ.16ರಂದು ಮತದಾರರ ಪಟ್ಟಿಯಲ್ಲಿದ್ದ ಸಾಕಷ್ಟು ಮಂದಿಯ ಹೆಸರನ್ನು ಮತದಾನದ ಹಿಂದಿನ ದಿನ ತೆಗೆದು ಹಾಕಲಾಗಿದೆ. ಪಟ್ಟಿಯಿಂದ ಮತದಾರರ ಹೆಸರು ಕೈಬಿಡಲು ಅನುಸರಿಸಿರುವ ಮಾನದಂಡ ಹಾಗೂ ಹೆಸರು ನಾಪತ್ತೆಗೆ ಕಾರಣವಾದ ಅಂಶಗಳ ಬಗ್ಗೆ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
Related Articles
Advertisement
ಮತದಾನದಲ್ಲಿ ಪಾಲ್ಗೊಳ್ಳುವಂತೆ ಆಯೋಗ ಜಾಗೃತಿ, ಪ್ರಚಾರಕ್ಕೆ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಆದರೆ ಆಸಕ್ತಿಯಿಂದ ಮತದಾನ ಮಾಡಲು ಬಂದವರ ಹೆಸರೇ ನಾಪತ್ತೆಯಾಗಿರುವುದು ಬೇಸರ ತಂದಿದೆ. ಕೂಡಲೇ ಆಯೋಗ ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದ ಹಲವರ ಹೆಸರು ಕಾಣೆಯಾಗಿದ್ದು, ಮಾಹಿತಿಯನ್ನು ಕಲೆ ಹಾಕಲಾಗಿದೆ.
ಪತಿ-ಪತ್ನಿ, ಮಕ್ಕಳು, ಮಗ ಸೊಸೆ, ಮಗಳು ಅಳಿಯ ಹೀಗೆ ಒಬ್ಬರ ಹೆಸರಿದ್ದರೆ ಮತ್ತೂಬ್ಬರ ಹೆಸರಿಲ್ಲದಂತಾಗಿದೆ. ಎಲ್ಲ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿದ್ದರೆ ಮತದಾನ ಪ್ರಮಾಣ ಕಡಿಮೆಯಾಗುತ್ತಿರಲಿಲ್ಲ. ಮತದಾರರ ಗುರುತಿನ ಚೀಟಿ ಹೊಂದಿರುವವರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ಆಯೋಗದಿಂದ ಲೋಪವಾಗಿರುವುದನ್ನು ತೋರಿಸುತ್ತದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ್, ಪಾಲಿಕೆ ಮಾಜಿ ಸದಸ್ಯ ಧನರಾಜ್, ಮುಖಂಡ ಬಾಲಾಜಿ ಇತರರು ಉಪಸ್ಥಿತರಿದ್ದರು.
ಮರು ಮತದಾನಕ್ಕೆ ಅವಕಾಶ ನೀಡಲು ಆಗ್ರಹ: ನಗರದ ಮೂರೂ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರಿಗೆ ಮರು ಮತದಾನಕ್ಕೆ ಅವಕಾಶ ನೀಡಬೇಕು ಎಂದು ಬಿಬಿಎಂಪಿ ಮಾಜಿ ಮೇಯರ್ ಬಿ.ಎಸ್.ಸತ್ಯನಾರಾಯಣ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವಿಎಂನಲ್ಲಿ ದೋಷ ಕಂಡು ಬಂದರೆ, ಗಲಾಟೆ ಆದರೆ ಅಥವಾ ಅಭ್ಯರ್ಥಿ ಮೃತರಾದರೆ ಮರು ಮತದಾನಕ್ಕೆ ಅವಕಾಶ ನೀಡುವಂತೆ, ಮತದಾರರ ಪಟ್ಟಿಯಿಂದ ಹೆಸರುಗಳು ನಾಪತ್ತೆಯಾದ ಮತದಾರರಿಗೂ ನಿರ್ದಿಷ್ಟ ದಿನದಂದು ಮತದಾನ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗದ ವಿರುದ್ಧ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಒಂದು ತಿಂಗಳು ಮೊದಲು ಬಂದ ಮತದಾರರ ಪರಿಷ್ಕೃತ ಪಟ್ಟಿಯಲ್ಲಿ ಇದ್ದ ಹೆಸರುಗಳು ಮತದಾನದ ದಿನ ಪಟ್ಟಿಯಿಂದ ಮಾಯವಾಗಿದ್ದು ಹೇಗೆ? ಎಂದು ಪ್ರಶ್ನಿಸಿದ ಅವರು, ಬಿಜೆಪಿಗೆ ಓಟ್ ಮಾಡುತ್ತಾರೆ ಎಂದೇ ಬ್ರಾಹ್ಮಣರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಸಲಾಗಿದೆ.
ಬಸವನಗುಡಿ ವಿಧಾನಸಭಾ ಕ್ಷೇತ್ರ ಒಂದರಲ್ಲೇ 50-60 ಸಾವಿರ ಮತದಾರ ಹೆಸರು ಪಟ್ಟಯಿಂದ ನಾಪತ್ತೆಯಾಗಿವೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಹೆಸರಿದೆ, ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ. ಮೃತಪಟ್ಟವರ ಹೆಸರಿದೆ, ಆದರೆ ಜೀವಂತ ಇರುವವರ ಹೆಸರಿಲ್ಲ. ಈ ಬಗ್ಗೆ ಚುನಾವಣಾ ಆಯೋಗ 2-3 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.