ಸೇಡಂ: ಕಲ್ಯಾಣ ನಾಡು ಸಾಧು, ಸತ್ಪುರುಷರು, ಆದರ್ಶ ವ್ಯಕ್ತಿಗಳು, ಧರ್ಮ ಪ್ರಚಾರಕರು ನಡೆದಾಡಿದ ನಾಡಾಗಿದೆ. ಈ ನಾಡಿನ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾಗಿ ಪ್ರವಾಸಿ ತಾಣವನ್ನಾಗಿಸಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.
ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ವಿಜಯದಶಮಿ ಉತ್ಸವದ ನಿಮಿತ್ತ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಏರ್ಪಡಿಸಿದ ಔತಣಕೂಟದಲ್ಲಿ ಅವರು ಮಾತನಾಡಿದರು.
ದೇಶದ ವಿವಿಧ ಭಾಗದ ಜನರಿಗೆ ಕಲ್ಯಾಣ ನಾಡನ್ನು ಪರಿಚಯಿಸುವ ಕೆಲಸವಾಗಬೇಕು. ಈ ನಾಡಿನ ಕೀರ್ತಿ ಎಲ್ಲೆಡೆ ಹಬ್ಬಬೇಕು. ವಿಶ್ವ ಮಟ್ಟದ ಜನರನ್ನು ಆಕರ್ಷಿಸುವ ಕೇಂದ್ರ ಇದಾಗಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತದ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಮಠ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಮತಾಂತರಕ್ಕೆ ಕಡಿವಾಣ ಹಾಕಬೇಕಿದೆ. ಪ್ರತಿಯೊಬ್ಬರೂ ಧರ್ಮ ರಕ್ಷಣೆ ಪಣ ತೊಡಬೇಕು. ಮನುಷ್ಯ ಮನುಷ್ಯರ ನಡುವೆ ಅಂತರ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಂದುಗೂಡಬೇಕು ಎನ್ನುವ ಉದ್ದೇಶಕ್ಕೆ ಶಾಸಕರು ಔತಣಕೂಟ ಏರ್ಪಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ದೇಶದ ಪ್ರಧಾನಿ ಮೋದಿ ಅವರು ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸಿದ್ದಾರೆ ಎಂದು ಹೇಳಿದರು.
ಸಂಸದ ಡಾ| ಉಮೇಶ ಜಾಧವ ಮಾತನಾಡಿ, ಶಾಸಕ ರಾಜಕುಮಾರ ಪಾಟೀಲ ಸಾಮಾಜಿಕ ಹರಿಕಾರರಾಗಿದ್ದು, ಮುಚ್ಚುವ ಹಂತದಲ್ಲಿದ್ದ ಡಿಸಿಸಿ ಬ್ಯಾಂಕ್‌ನ್ನು ತಮ್ಮ ಕೈಗೆ ತೆಗೆದುಕೊಂಡು ಪುನಶ್ಚೇನಗೊಳಿಸುವ ಮೂಲಕ ರೈತರ ಬಾಳು ಹಸನಾಗಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಪ್ರಶಂಶಿಸಿದರು.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಹಾಲಪಯ್ಯ ಮಠದ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ರಾಯಕೋಡದ ಕಟ್ಟಿಮನಿ ಸಂಸ್ಥಾನದ ಚಿಕ್ಕ ಶಿವಲಿಂಗೇಶ್ವರ ಸ್ವಾಮೀಜಿ, ಮಳಖೇಡದ ಶ್ರೀ ವೀರಗಂಗಾಧರ ಶಿವಾಚಾರ್ಯರು, ಪುರಸಭೆ ಅಧ್ಯಕ್ಷೆ ಚನ್ನಮ್ಮ ಪಾಟೀಲ ಇದ್ದರು. ಹಣಮಂತರಾವ್ ಪಾಟೀಲ ಬಿಬ್ಬಳ್ಳಿ, ಶರಣು ಕೆರಳ್ಳಿ ಪ್ರಾರ್ಥಿಸಿದರು, ಮುಖಂಡ ಬಸವರಾಜ ರೇವಗೊಂಡ ಸ್ವಾಗತಿಸಿದರು, ವಿರೇಶ ಹೂಗಾರ ನಿರೂಪಿಸಿದರು, ಪುರಸಭೆ ಉಪಾಧ್ಯಕ್ಷ ಶಿವಾನಂದಸ್ವಾಮಿ ವಂದಿಸಿದರು.