ಕನ್ನಡ ಚಿತ್ರರಂಗದಲ್ಲಿ 1990ರ ದಶಕದಲ್ಲಿ ಥ್ರಿಲ್ಲರ್ ಸಿನಿಮಾಗಳ ಮೂಲಕ ಗುರುತಿಸಿಕೊಂಡು ಹೆಸರು ಪಡೆದವರು ಸುನೀಲ್ ಕುಮಾರ್ ದೇಸಾಯಿ. ಅಷ್ಟೇ ಅಲ್ಲ ತಮ್ಮ ಸಿನಿಮಾದಲ್ಲಿ ಸುಮನ್ ನಗರ್ಕರ್ ಎಂಬ ಸ್ಫುರದ್ರೂಪಿ ನಟಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ಅವರೇ. ಬೆಂಗಳೂರಿನಲ್ಲಿ ಜನಿಸಿದ್ದ ಸುಮನ್, ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ನಂತರ ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು.
ಸುಮಾರು ಎರಡು ದಶಕಗಳ ಹಿಂದೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ “ನಿಷ್ಕರ್ಷ” ಮತ್ತು ಬೆಳದಿಂಗಳ ಬಾಲೆ” ಸಿನಿಮಾದಲ್ಲಿನ ಅದ್ಭುತ ಅಭಿನಯದ ಮೂಲಕ ಚಿತ್ರಪ್ರೇಮಿಗಳ ಮನಗೆದ್ದವರು ಸುಮನ್ ನಗರ್ಕರ್. ಈ ಎರಡು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಅಷ್ಟರ ಮಟ್ಟಿಗೆ ತಮ್ಮ ನಿರ್ದೇಶನದ ಮೂಲಕ ಸದ್ದು ಮಾಡಿದವರು ಸುನೀಲ್ ಕುಮಾರ್ ದೇಸಾಯಿ!
1993ರಲ್ಲಿ ಬಿಡುಗಡೆಯಾಗಿದ್ದ ನಿಷ್ಕರ್ಷ ಸಿನಿಮಾ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಮಣಿಪಾಲ್ ಸೆಂಟರ್ ನಲ್ಲಿ ಚಿತ್ರೀಕರಣಗೊಂಡಿತ್ತು. ಇಡೀ ಸಿನಿಮಾದಲ್ಲಿ ಒಂದೇ ಒಂದು ಹಾಡುಗಳಿಲ್ಲದೇ, ಒಂದೇ ಕಟ್ಟಡದಲ್ಲಿ ನಡೆದ ಥ್ರಿಲ್ಲರ್ ಸಿನಿಮಾ ಅದಾಗಿತ್ತು. ಈ ಸಿನಿಮಾದಲ್ಲಿ ವಿಷ್ಣುವರ್ಧನ್, ಅನಂತ್ ನಾಗ್, ಬಿ.ಸಿ.ಪಾಟೀಲ್, ಸುಮನ್ ನಟಿಸಿದ್ದರು. ತದನಂತರ 1995ರಲ್ಲಿ ಬಿಡುಗಡೆಗೊಂಡ ಬೆಳದಿಂಗಳ ಬಾಲೆ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಇದ್ದವರು ಅನಂತ್ ನಾಗ್ ಮತ್ತು ಸುಮನ್ ನಗರ್ಕರ್. ಆದರೆ ಈ ಸಿನಿಮಾದ ವಿಶೇಷತೆ ಏನೆಂದರೆ ಕೊನೆಯವರೆಗೂ ಆ ದೂರವಾಣಿ ಸಂಭಾಷಣೆಯ ಬೆಳದಿಂಗಳ ಬಾಲೆ(ಸುಮನ್) ಯಾರು ಎಂಬುದು ಗೊತ್ತೇ ಆಗಲ್ಲ. ಯಾಕೆಂದರೆ ಆಕೆಯ ಮುಖವನ್ನೇ ಸಿನಿಮಾದಲ್ಲಿ ತೋರಿಸುವುದಿಲ್ಲ!
1991ರಲ್ಲಿ ತೆರೆಕಂಡಿದ್ದ ಕಲ್ಯಾಣ ಮಂಟಪ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದ ಸುಮನ್ ನಗರ್ಕರ್ ಎಂಬ ನಗುಮೊಗದ ಚೆಲುವೆ ನಿಷ್ಕರ್ಷ, ಅಮ್ಮಾವ್ರ ಗಂಡ, ನಮ್ಮೂರ ಮಂದಾರ ಹೂವೆ, ಹೂಮಳೆ, ದೋಣಿ ಸಾಗಲಿ, ಮುಂಗಾರಿನ ಮಿಂಚು, ಪ್ರೀತ್ಸು ತಪ್ಪೇನಿಲ್ಲ ಸಿನಿಮಾದಲ್ಲಿ ನಟಿಸಿ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿದ್ದರು.
ಚಿತ್ರರಂಗದಿಂದ ಮಾಯವಾಗಿದ್ದ ಬೆಳದಿಂಗಳ ಬಾಲೆ!
ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಸುಮನ್ ದಿಢೀರ್ ಆಗಿ ಸಿನಿಮಾರಂಗದಿಂದ ದೂರವಾಗಿಬಿಟ್ಟಿದ್ದರು. ಅದು ಬರೋಬ್ಬರಿ ಹದಿನೈದು ವರ್ಷಗಳ ಕಾಲ. ಯಾಕೆಂದರೆ ಅವರು ಗುರುದೇವ್ ನಾಗರಾಜ್ ಅವರ ಜತೆ ಸಪ್ತಪದಿ ತುಳಿದ ನಂತರ ಅಮೆರಿಕಕ್ಕೆ ತೆರಳಿದ್ದರು. ಅಮೆರಿಕದಲ್ಲಿ ಮಕ್ಕಳಿಗೆ ಹಿಂದೂಸ್ಥಾನಿ ಸಂಗೀತ ತರಗತಿ ನಡೆಸುತ್ತಿದ್ದರಂತೆ. ಏತನ್ಮಧ್ಯೆ ಮತ್ತೊಬ್ಬ ಕನ್ನಡದ ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ, ಸುಮನ್ ಅವರ ಮನೆಗೂ ಹೋಗಿದ್ದರಂತೆ. ತಮ್ಮ ಇಷ್ಟಕಾಮ್ಯ ಚಿತ್ರದಲ್ಲಿ ಅಭಿನಯಿಸುವಂತೆ ಕೇಳಿಕೊಂಡಿದ್ದರು. ಈ ಹಿಂದೆ ಅಂದರೆ 1998ರಲ್ಲಿ ಬಿಡುಗಡೆಗೊಂಡಿದ್ದ ಹೂಮಳೆ ಸಿನಿಮಾದಲ್ಲಿ ಸುಮನ್ ನಟಿಸಿದ್ದರು. ಆ ಸಿನಿಮಾ ನಿರ್ದೇಶಿಸಿದ್ದವರು ನಾಗತಿಹಳ್ಳಿ.
ಅಂತೂ ಕೊನೆಗೂ ವಾಷಿಂಗ್ಟನ್ ನಿಂದ ಬೆಂಗಳೂರಿಗೆ ಬಂದ ಸುಮನ್ ಕುಟುಂಬ 2015ರಲ್ಲಿ ತೆರೆಕಂಡಿದ್ದ ನಾಗತಿಹಳ್ಳಿಯವರ ಇಷ್ಟಕಾಮ್ಯ ಚಿತ್ರದಲ್ಲಿ ಬಣ್ಣಹಚ್ಚುವ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಹಾಜರಾಗಿದ್ದರು.2019ರಲ್ಲಿ ಸುಮನ್ ನಗರ್ಕರ್ ಪ್ರೊಡಕ್ಷನ್ ಮೂಲಕ ನಿರ್ಮಾಣಗೊಂಡಿದ್ದ “ಬಬ್ರೂ” ಸಿನಿಮಾದಲ್ಲಿಯೂ ನಟಿಸಿದ್ದರು. ಹೊಸಬರ ಚಿತ್ರಗಳಾದ ಶುದ್ಧಿ, ಊರ್ವಿ ಹಾಗೂ ಆಯನ ಸಿನಿಮಾಗಳು ತಮಗೆ ತುಂಬಾ ಇಷ್ಟವಾಗಿರುವುದಾಗಿ ಹೇಳುವ ಸುಮನ್ ಇನ್ಮುಂದೆ ಚಿತ್ರರಂಗದಲ್ಲಿ ಮುಖ್ಯ ಪಾತ್ರ ಹೊರತುಪಡಿಸಿ ಹೀರೋ ಅಥವಾ ಹೀರೋಯಿನ್ ತಾಯಿಯ ಪಾತ್ರದಲ್ಲಿ ಅಭಿನಯಿಸಲ್ಲ ಎಂಬುದು ಅವರ ಅಭಿಲಾಷೆಯಾಗಿದೆ.